ಮೈಸೂರು ವಿವಿ: ಪಿಎಚ್.ಡಿ ನಿಯಮಾವಳಿಗೆ ತಿದ್ದುಪಡಿ.

ಮೈಸೂರು,ಸೆಪ್ಟಂಬರ್,23,2022(www.justkannada.in):  ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾಲಯ ಈ ಶೈಕ್ಷಣಿಕ ಸಾಲಿನಲ್ಲೇ ಪಿಎಚ್.ಡಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಿದೆ.

ಮಾನಸ ಗಂಗೋತ್ರಿಯ ಲಲಿತಕಲಾ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಣ ಮಂಡಳಿ ಎರಡನೇ ಸಾಮಾನ್ಯ ಸಭೆಯಲ್ಲಿ ಪಿಎಚ್.ಡಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಅನುಮೋದನೆ ದೊರಕಿತು.

ಮೈಸೂರು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ಮಾತನಾಡಿ, ಈ ಮೊದಲು 2017ರ ಯುಜಿಸಿ ಮಾರ್ಗಸೂಚಿಯನ್ವಯ ಪಿಎಚ್.ಡಿ ನಿಯಮಾವಳಿಗಳು ಇದ್ದವು. ಇದೀಗ 2022ರಲ್ಲಿ ಕೆಲವೊಂದು ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಈ ಮೊದಲು ಪಿಎಚ್.ಡಿ ಮುಗಿಸಲು ಐದು ವರ್ಷ ಕಾಲಾವಕಾಶ ಇತ್ತು. ಹೆಚ್ಚುವರಿ 2 ವರ್ಷ ಸೇರಿ ಒಟ್ಟು 7 ವರ್ಷ ಇತ್ತು. ಆದರೆ ಇದೀಗ 6 ಕಾಲಾವಕಾಶ ಹಾಗೂ 1 ವರ್ಷ ಹೆಚ್ಚುವರಿ ವರ್ಷ ನೀಡಲಾಗಿದೆ. ಇದರಿಂದ 1 ವರ್ಷ ಹೆಚ್ಚುವರಿ ಶುಲ್ಕದ ಹೊರೆ ವಿದ್ಯಾರ್ಥಿಗಳಿಗೆ ಕಡಿಮೆ ಆಗಲಿದೆ. ಪ್ರಾಧ್ಯಾಪಕರು ಎಂಟು ಜನರಿಗೆ ಗೈಡ್ ಮಾಡಬಹುದು (ಇದರ ಜೊತೆಗೆ ಇಬ್ಬರು ವಿದೇಶಿ ವಿದ್ಯಾರ್ಥಿಗಳು, ಹೈದರಬಾದ್ ಕರ್ನಾಟಕಕ್ಕೆ 1 ಹಾಗೂ ವಿಶೇಷಚೇತನರಿಗೆ 1 ಸೀಟು ನೀಡಬಹುದು-ಇದು ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರಿಗೂ ಅನ್ವಯವಾಗಲಿದೆ). ಸಹ ಪ್ರಾಧ್ಯಾಪಕರು 6 ಹಾಗೂ ಸಹಾಯಕ ಪ್ರಾಧ್ಯಾಪಕರು 4 ವಿದ್ಯಾರ್ಥಿಗಳು ಮಾರ್ಗದರ್ಶನ ಮಾಡಬಹುದು ಎಂದರು.

ಪರೀಕ್ಷೆ ಹೇಗೆ?

ಈ ಮೊದಲು 50 ಅಂಕಗಳಿಗೆ ಬಹು ಆಯ್ಕೆ ಪ್ರಶ್ನೆಗಳು ಇರುತ್ತಿದ್ದವು. ಉಳಿದ 50 ಅಂಕಗಳಿಗೆ ಥಿಯರಿ ಬರೆಯಬೇಕಿತ್ತು. ಆದರೆ, ಇದರಲ್ಲಿ ಗೋಲ್ ಮಾಲ್ ಆಗುತ್ತಿದೆ ಎಂಬ ಆರೋಪ ಬಂದ ಕಾರಣ ಇದೀಗ 100 ಅಂಕಗಳಿಗೂ ಬಹು ಆಯ್ಕೆ ಪ್ರಶ್ನೆಗಳೇ ಇರತ್ತದೆ. ಈ ಮೊದಲು ಕೋರ್ಸ್ ವರ್ಕ್ 20 ವಾರಗಳ ಕಾಲ ನಡೆಯುತ್ತಿತ್ತು. ಆದರೀಗ 16 ವಾರಕ್ಕೆ ಸೀಮಿತಗೊಳಿಸಲಾಗಿದೆ. ಅಲ್ಲದೆ, ರಿಸರ್ಚ್ ಅಂಡ್ ಪಬ್ಲಿಕೇಷನ್ ಎಥಿಕ್ಸ್ ಎಂಬ ವಿಷಯವನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.50, ಒಬಿಸಿ ಶೇ.45 ಹಾಗೂ ಎಸ್‌ಸಿ/ಎಸ್‌ಟಿ ಶೇ/40ರಷ್ಟು ಅಂಕ ಪಡೆದರೆ ಪಿಎಚ್.ಡಿ ಮಾಡಲು ಅರ್ಹತೆ ಪಡೆಯುತ್ತಾರೆ. ಪಿಎಚ್.ಡಿ ವಿದ್ಯಾರ್ಥಿ ಪ್ರಬಂಧ ಸಲ್ಲಿಸಿದ 15 ದಿನದೊಳಗೆ ಪ್ರತಿಯೊಂದು ವರದಿಗಳನ್ನು ವಿವಿಗೆ ಕಳುಹಿಸಬೇಕೆಂಬ ಕಾಲಾಮಿತಿಯನ್ನೂ ಹಾಕಲಾಗಿದೆ ಎಂದರು.

ಹಾಜರಾತಿಗೆ ಮಾರ್ಗಸೂಚಿ:

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 9 ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇದ್ದ ಕಾರಣಕ್ಕೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂಬ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಸರಕಾರದ ನಾಮನಿರ್ದೇಶನ ಸದಸ್ಯ ಶಶಿಕುಮಾರ ಮಾತನಾಡಿ, ಶೇ.75ರಷ್ಟು ಹಾಜರಾತಿ ಕಡ್ಡಾಯ ಇರುವಾಗ ಪರೀಕ್ಷೆ ಬರೆಯಲು ಹೇಗೆ ಅವಕಾಶ ಕೊಡಲಾಯಿತು? ಈ ರೀತಿ ಅವಕಾಶ ಕೊಟ್ಟರೆ ತರಗತಿಗೆ ಪ್ರಾಮಾಣಿಕವಾಗಿ ಬರುವ ವಿದ್ಯಾರ್ಥಿಗಳಿಗೆ ಮೋಸ ಆದಂತೆ ಆಗುತ್ತದೆ. ಎಲ್ಲಾ ವಿಷಯದಲ್ಲೂ ಹಾಜರಾತಿ ಸರಿ ಇದ್ದು, ಒಂದು ವಿಷಯದಲ್ಲಿ ಯಾಕೆ ಕಡಿಮೆ ಆಯಿತು ಎಂದು ಪ್ರಶ್ನಿಸಿದರು. ಕೆ-ಸೆಟ್ ಸಮನ್ವಯಾಧಿಕಾರಿ ಪ್ರೊ.ರಾಜಶೇಖರ್ ಮಾತನಾಡಿ, ಈ ವಿಷಯದಲ್ಲಿ ಪ್ರಾಧ್ಯಾಪಕರ ಜವಾಬ್ದಾರಿಯೂ ಹೆಚ್ಚಿರುತ್ತದೆ. ಪ್ರತಿ ತಿಂಗಳು ಹಾಜರಾತಿ ವಿವರಗಳನ್ನು ನೋಟಿಸ್ ಬೋರ್ಡ್‌ಗೆ ಹಾಕಬೇಕಿತ್ತು. ವಿಶೇಷ ತರಗತಿ ತೆಗೆದುಕೊಂಡು ಹಾಜರಾತಿ ಸರಿದೂಗಿಸಬೇಕಿತ್ತು ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಈ ಸಂಬಂಧ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗುವುದು. ಮುಂದೆ ಎಲ್ಲಾ ವಿಭಾಗದವರಿಗೂ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು.

ಬಜೆಟ್‌ ನಲ್ಲಿ ಗ್ರಂಥಾಲಯಕ್ಕೆ ಅನುದಾನ ತಡೆ ಹಿಡಿದಿರುವ ಬಗ್ಗೆ ಡೀನ್ ಸರಸ್ವತಿ ಅವರು ಗಮನ ಸೆಳೆದರು. ಅನುದಾನ ಕೊಡಿಸುವ ಭರವಸೆಯನ್ನು ವಿಸಿ ಹೇಮಂತಗ ಕುಮಾರ್ ನೀಡಿದರು. 2018-19ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಆಕ್ಷೇಪಣೆಗಳಿಗೆ ಅನುಪಾಲನಾ ವರದಿ ಬಗ್ಗೆ ಚರ್ಚೆ ಆಗಬೇಕಾದ ಹಿನ್ನೆಲೆಯಲ್ಲಿ ಅನುಮೋದನೆ ಸಿಗಲಿಲ್ಲ. ಮೈಕ್ರೋ ಬಯೋಲಜಿ ಪ್ರೊ.ಎನ್.ಲಕ್ಷ್ಮಿದೇವಿ ಚಿನ್ನದ ಪದಕ ದತ್ತಿ ಸ್ಥಾಪನೆಗೆ ಅನುಮೋದನೆ ಸಿಕ್ಕಿತು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿ ಸಂಗೀತ ಗಜಾನನ ಸೇರಿದಂತೆ ಇತರರು ಇದ್ದರು.

Key words: Mysore University – Amendment -Regulations – Ph.D.

ENGLISH SUMMARY…

UoM: Changes to Ph.D. regulations
Mysuru, September 23, 2022 (www.justkannada.in): The University of Mysore has decided to incorporate changes to the existing Ph.D. regulations.
A decision in this regard was taken at the second general body meeting held at the Fine Arts College premises in Manasa Gangotri campus.
Speaking on the occasion, Prof. A.P. Jnanaprakash, Registrar (Exams), University of Mysore, informed that the Ph.D. regulations of the University were as per the UGC guidelines. According to the earlier regulations the timeline to complete Ph.D. was five years, plus two, totally 7 years. But now it has been reduced to six years, with one year additional time. Thus, the fee burden for the students will reduce. A professor can guide eight candidates (plus two foreign students, 1 from Hyderabad Karnataka region, and 1 seat is reserved for physically challenged candidate, it will be applicable both for Associate Professor and Assistant Professor). The Associate professor can guide six candidates and Assistant Professor can guide 4 candidates.”
Exam procedure
Earlier, there used to be option questions for 50 marks. Candidates had to write theory for the remaining 50 marks. But there are allegations of misuse in it. Hence, all the questions for 100 marks will be made optional. Earlier, 20 weeks time was being provided for the course work, which has been limited to 16 weeks now. Also a new subject ‘Research and Publication Ethics,’ has been included. The minimum marks for admission to Ph.D. for common category candidates is 50%, OBC 45% and for SC/ST 40%. After submission of the thesis, the Ph.D. student should send all the reports to the University within 15 days.
Prof. G. Hemanth Kumar, Vice-Chancellor, University of Mysore, informed that a committee would be formed to look into the attendance irregularities and a report would be obtained. Proper guidelines would be issued which will be applicable to all the departments.
Prof. R. Shivappa, Registrar, Finance Officer Sangeetha Gajanana and others were present.
Keywords: University of Mysore/Ph.D regulations/ changes