ಮೈಸೂರು,ಡಿಸೆಂಬರ್,23,2020(www.justkannada.in) : ಮೈಸೂರು ವಿವಿಯ ಎಲ್ಲಾ ವಿಭಾಗದ ಪ್ರಾಧ್ಯಾಪಕರುಗಳು ತಮ್ಮ ವಿಷಯಗಳ ಕುರಿತು ಪುಸ್ತಕ ರಚಿಸುವ ಮೂಲಕ ವಿವಿಯ ಕೀರ್ತಿ ಹೆಚ್ಚಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಂ.ಎಸ್.ಸಪ್ನ ಅವರ ’’ಕಾರ್ಪೋರೇಟ್ ಕಮ್ಯೂನಿಕೇಶನ್’’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶಿಕ್ಷಕರು ಕೇವಲ ಪಠ್ಯವನ್ನು ಮಾತ್ರ ಬೋಧಿಸದೇ, ತಾವು ಸಂಶೋಧನೆ ಮಾಡಿದ ವಿಷಯಗಳು, ಅನುಭವಗಳನ್ನು ತಿಳಿಸಿ ವಿದ್ಯಾರ್ಥಿಗಳ ಅರಿವು ಹೆಚ್ಚಿಸಬೇಕು ಎಂದರು.
ಪುಸ್ತಕ ರಚಿಸುವುದು ಒಂದು ಸಂವಹನವಾಗಿದ್ದು, ಓದುಗರಿಗೆ ಅರ್ಥವಾಗುವಂತೆ ಬರೆಯಬೇಕು. ಎಷ್ಟೋ ಜನರಿಗೆ ಪುಸ್ತಕ ಬರೆಯುವಷ್ಟು ವಿಷಯಗಳು ತಿಳಿದಿರುತ್ತದೆ. ಆದರೆ, ಪುಸ್ತಕ ಬರೆಯುವಷ್ಟು ಸಮಯ ದೊರಕಿರುವುದಿಲ್ಲ. ಉತ್ತಮವಾದ ಸಂಶೋಧನೆಗಳು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲವು ಎಂದು ಹೇಳಿದರು.
ಕಾರ್ಪೋರೇಟ್ ಸಂವಹನವು ಪ್ರಸ್ತುತ ಬಹಳ ಮುಖ್ಯವಾಗಿದ್ದು, ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಪುಸ್ತಕ ಬಿಡುಗಡೆ ಕಾರ‌್ಯಕ್ರಮವನ್ನು ಸ್ಪೂರ್ತಿಯಾಗಿ ಸ್ವೀಕರಿಸುವ ಮೂಲಕ ತಮ್ಮ ಕೆಲಸದ ಒತ್ತಡದ ನಡುವೆಯೂ ಪುಸ್ತಕಗಳ ಮೂಲಕ ಸಂವಹನ ನಡೆಸುವ ಕಾರ್ಯಕ್ಕೆ ಪ್ರಾಧ್ಯಾಪಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ(ಪಿಆರ್‌ಸಿಐ) ದಕ್ಷಿಣ ವಲಯ ಅಧ್ಯಕ್ಷ ಜಯಪ್ರಕಾಶ್ ರಾವ್ ಮಾತನಾಡಿ, ’’ಕಾರ್ಪೋರೇಟ್ ಕಮ್ಯೂನಿಕೇಶನ್’’ ಕೃತಿಯು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪ್ರಾಧ್ಯಾಪಕರು ಹಾಗೂ ಉದ್ಯೋಗಿಗಳಿಗೂ ಸಹಕಾರಿಯಾಗಿದೆ. ಸಾರ್ವಜನಿಕ ಸಂವಹನದ ಪರಿಣಾಮವನ್ನು ಅರಿಯುವುದಕ್ಕೆ ಈ ಕೃತಿ ಸಹಕಾರಿಯಾಗಿದೆ ಎಂದು ಹೇಳಿದರು.
ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ(ಪಿಆರ್‌ಸಿಐ) ಅಧ್ಯಕ್ಷ ಎಂ.ಬಿ.ಜಯರಾಮ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮ್ಮಲ್ಲದ ಬೇರೆ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಮೂಲಕ ಅನುಭವವನ್ನು ಸಂಪಾದಿಸುವುದು ಬಹಳ ಮುಖ್ಯ. ನಿತ್ಯ ಕಲಿಯಬೇಕು. ಕಲಿಕೆಯಿಂದ ಮಾತ್ರವೇ ಉಳಿಯುವುದಕ್ಕೆ, ಬೆಳೆಯುವುದಕ್ಕೆ ಸಾಧ್ಯ ಎಂದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಸಂವಹನದ ಕಲಿಕೆಯು ಬಹಳ ಮುಖ್ಯವಾಗಿದೆ. ಸಂವಹನದ ಕೊರತೆಯಿಂದ ಯಾವುದೇ ಕ್ಷೇತ್ರವಾದರೂ, ಸಂಬಂಧಗಳು ಹದಗೆಡುತ್ತವೆ. ಪ್ರಸ್ತುತ ಕೇಳುವ ವ್ಯವಧಾನ ಇಲ್ಲವಾಗಿದೆ. ಉತ್ತಮವಾಗಿ ಮಾತನಾಡುವುದರ ಜೊತೆಗೆ, ಕೇಳುವ, ತಾಳ್ಮೆಯಿಂದಿರುವುವುದು ಮುಖ್ಯವಾಗಿದೆ. ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಂ.ಎಸ್.ಸಪ್ನ ಉಪಸ್ಥಿತರಿದ್ದರು.
Key words ; Mysore-university – book- vc- hemanth.kumar.