ಮೈಸೂರು, ಸೆ.05, 2021 : (www.justkannada.in news ) ಸೆ.7 ರಂದು ನಡೆಯುವ 101ನೇ ಮೈವಿವಿ ಘಟಿಕೋತ್ಸವದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಒಟ್ಟು 29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಹೇಳಿದಿಷ್ಟು.
ಅಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಸ್‌ಐಆರ್ ಮಹಾನಿರ್ದೇಶಕ ಡಾ.ಶೇಖರ್ ಸಿ.ಮಂಡೆ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಭಾಗವಹಿಸಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ಜೀವರಾಸಾಯನಶಾಸ ಗೌರವ ಪ್ರಾಧ್ಯಾಪಕರಾದ ಪದ್ಮಭೂಷಣ ಡಾ.ಗೋವಿಂದರಾಜನ್ ಪದ್ಮನಾಭನ್ ಹಾಗೂ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಶಾಂತ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಒಟ್ಟು 387 ಪದಕಗಳು (ಗೋಲ್ಡ್ ಮೆಡಲ್) ಮತ್ತು 178 ಬಹುಮಾನಗಳನ್ನು (ಕ್ಯಾಶ್ ಪ್ರೈಜ್) 216 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಇವರಲ್ಲಿ 172 ಮಹಿಳೆಯರು ಹಾಗೂ 44 ಪುರುಷರು ಇದ್ದಾರೆ.
ಸ್ನಾತಕೋತ್ತರ (ಪಿಜಿ)ದಲ್ಲಿ 7143 ಅಭ್ಯರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ. ಇದರಲ್ಲಿ 4,876 (ಶೇ.68.26) ಮಹಿಳೆಯರು ಮತ್ತು 2267 (ಶೇ.31.73) ಪುರುಷರು ಇದ್ದಾರೆ.
ಸ್ನಾತಕ (ಯುಜಿ) ಪದವಿಯಲ್ಲಿ 22,465 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 15,144 (ಶೇ.67.41) ಮಹಿಳೆಯರು ಮತ್ತು 7321 (ಶೇ.32.59) ಪುರುಷರು ಇದ್ದಾರೆ. ಒಟ್ಟು 29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಅವರಲ್ಲಿ 20,118 (ಶೇ.67.26) ಮಹಿಳೆಯರು ಮತ್ತು 9,734 (ಶೇ.32.60) ಪುರುಷರಿದ್ದಾರೆ.
ಅಲ್ಲದೆ, ವಿವಿಧ ವಿಷಯಗಳಲ್ಲಿ 244 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗುವುದು. ಅದರಲ್ಲಿ 98 (ಶೇ.40.16) ಮಹಿಳೆಯರು ಮತ್ತು 146 (ಶೇ.59.83) ಪುರುಷರು ಇದ್ದಾರೆ ಎಂದು ಮಾಹಿತಿ ನೀಡಿದರು.
ಚೈತ್ರಾ ನಾರಾಯಣ್‌ಗೆ 20 ಚಿನ್ನದ ಪದಕ
ಎಂಎಸ್ಸಿ ರಾಸಾಯನಿಕ ಶಾಸ್ತ್ರದಲ್ಲಿ ಚೈತ್ರಾ ನಾರಾಯಣ್ ಹೆಗ್ಡೆ ಅವರಿಗೆ 20 ಚಿನ್ನದ ಪದಕ ಹಾಗೂ 4 ಕ್ಯಾಶ್ ಪ್ರೈಜ್ ಸೇರಿದಂತೆ 24 ಪದಕ ಬಹುಮಾನದ ಮೂಲಕ ಅತಿ ಹೆಚ್ಚು ಪದಕ ಪಡೆದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಳಿದಂತೆ ಕನ್ನಡದಲ್ಲಿ ಮಾದಲಾಂಬಿಕೆ ಟಿ.ಎಸ್. 10 ಚಿನ್ನದ ಪದಕ ಹಾಗೂ 4 ಬಹುಮಾನದೊಂದಿಗೆ ಒಟ್ಟು 14 ಪದಕ ಬಹುಮಾನ ಪಡೆದಿದ್ದಾರೆ.
ಎಂಎಸ್ಸಿ ಸಸ್ಯಶಾಸ್ತ್ರದಲ್ಲಿ ಹಿಮಾಂಶಿ ಚೌಹಾಣ್ 7 ಪದಕ, 2 ಕ್ಯಾಶ್ ಪ್ರೈಜ್ ಪಡೆದಿದ್ದಾರೆ. ಕೀನ್ಯಾ ದೇಶದ ಡೆಚೆ ಎಂ. ಮರ್ಸಿ 2 ಚಿನ್ನದ ಪದಕ ಹಾಗೂ 3 ಬಹುಮಾನ ಪಡೆದಿದ್ದಾರೆ.
ಹುಡುಗಿಯರೇ ಮೇಲುಗೈ
ಪದವಿ ಹಾಗೂ ಪಿಜಿಯಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಅವರೇ ಪದವಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
key words : mysore-university-convocation-uom-vc-hemanth.kumar