ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಮೈಸೂರು ವಿವಿ ತೀರ್ಮಾನ

ಮೈಸೂರು,ಆಗಸ್ಟ್,19,2021(www.justkannada.in):  ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಕ್ರಾಫರ್ಡ್ ಹಾಲ್‌ ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನಾತಕ ಪದವಿಗೆ ಮಾತ್ರ ಮೊದಲ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021-22ನೇ ಸಾಲಿನಿಂದಲೇ ಜಾರಿಗೆ ತರಲಾಗುತ್ತಿದೆ. 4 ವರ್ಷದ ಪದವಿ ಇದು. ವಿದ್ಯಾರ್ಥಿಯು ಮೊದಲ ವರ್ಷ ಓದಿ ವ್ಯಾಸಂಗ ಬಿಟ್ಟರೆ ಸರ್ಟಿಫಿಕೇಟ್ ಕೋರ್ಸ್ ನೀಡಲಾಗುವುದು. ಎರಡನೇ ವರ್ಷ ಮುಗಿಸಿದರೆ ಡಿಪ್ಲೋಮಾ ಪ್ರಮಾಣ ಪತ್ರ ನೀಡಲಾಗುತ್ತದೆ. ಮೂರು ವರ್ಷ ಪೂರೈಸಿದರೆ ಪದವಿ ಎಂದು ಪರಿಗಣಿಸಲಾಗುತ್ತದೆ. ನಾಲ್ಕನೇ ವರ್ಷ ಮುಗಿಸಿದರೆ ಆರ್ನಸ್‌ ಡಿಗ್ರಿ ಪ್ರಮಾಣ ಪತ್ರ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪದವಿಯಲ್ಲಿ ಒಂದು ಅಥವಾ ಎರಡು ಐಚ್ಛಿಕ ವಿಷಯಗಳನ್ನು ತೆಗೆದುಕೊಂಡು ಓದಬಹುದು ಎಂದು ಮಾಹಿತಿ ನೀಡಿದರು.

ಕೌಶಲ್ಯ ವೃದ್ಧಿ

ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಹಾಗೂ  ಸಂವಹನ, ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವುದರಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ಕೆಲ ವಿಷಯಗಳಲ್ಲೂ ವ್ಯಾಸಂಗ ಮಾಡಬಹುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ವಿಷಯವನ್ನೂ ಅಧ್ಯಯನ ಮಾಡಬಹುದು. ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ವ್ಯಾಸಂಗ ಮಾಡಬೇಕಿದೆ. ಸೆಮಿಸ್ಟರ್ ಪದ್ಧತಿಯಲ್ಲೇ ಇರಲಿದ್ದು, ಸಿಲಬಸ್ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕೆರಿಯರ್ ಹಬ್ ಸಿದ್ಧ

ವಿದ್ಯಾರ್ಥಿಗಳ ಜೀವನ ರೂಪಿಸಲು ತರಬೇತಿ ನೀಡುವ ಸಲುವಾಗಿ ಮಾನಸ ಗಂಗೋತ್ರಿ ಒಳಗೆ ನಿರ್ಮಾಣ ಮಾಡಿರುವ ‘ಕೆರಿಯಲ್ ಹಬ್’ ಉದ್ಘಾಟನೆಗೆ ಸಿದ್ಧಗೊಂಡಿದೆ. ಕೆಎಎಸ್, ಐಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಕಮ್ಯೂನಿಟಿ ರೇಡಿಯೋ ಮಾನಸ ಕೂಡ ಶೀಘ್ರದಲ್ಲೇ ‌ಕಾರ್ಯ ಚಟುವಟಿಕೆ ಆರಂಭಿಸಲಿದೆ. 15 ಕಿಮೀವರೆಗೆ ಇದರ ಪ್ರಸಾರ ಸಾಮಾರ್ಥ್ಯ ಇರಲಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯವನ್ನೂ ಸ್ಥಾಪನೆ ಮಾಡಲಾಗಿದೆ. 72 ಕೊಠಡಿ ಒಳಗೊಂಡಿದ್ದು, ನಾಳೆ (ಆ.20ರಂದು) ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಸಂಸದ ಪ್ರತಾಪಸಿಂಹ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.

ಸ್ಕೂಲ್ ಆಫ್ ಎಂಜಿನಿಯರಿಂಗ್ ಶುರು

ಈ ವರ್ಷದಿಂದಲೇ ಮೈಸೂರು ವಿವಿ ವತಿಯಿಂದ ಸ್ಕೂಲ್ ಆಫ್ ಎಂಜಿನಿಯರಿಂಗ್ ಪ್ರಾರಂಭವಾಗಲಿದೆ. ಎಐಟಿಸಿ ಅನುಮತಿ ನೀಡಿದೆ. ಮೈಸೂರು ವಿಶ್ವವಿದ್ಯಾನಿಲಯಲ್ಲಿ ಇನ್ನು ಮುಂದೆ ಇಂಜಿನಿಯರಿಂಗ್ ಶಿಕ್ಷಣ ಪ್ರಾರಂಭವಾಗಲಿದ್ದು, ಮೈಸೂರು ವಿವಿ ಇಂಜಿನಿಯರ್ ಗಳ ಉತ್ಪಾದನೆ ಮಾಡುವ ಕಾರ್ಖಾನೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿದ ಮೈಸೂರು ವಿವಿ ಕುಲಪತಿ ಪ್ರೊ ಹೇಮಂತ್ ಕುಮಾರ್, ಸದ್ಯ ಇಂಜಿನೀಯರಿಂಗ್ ಕಾಲೇಜು ತೆರೆಯಲು AICTE ಯಿಂದ ಮಾನ್ಯತೆ ದೊರೆತಿದೆ. 150 ಮಂದಿ ಸಿಇಟಿ ಮೂಲಕ ಉಳಿದ 150 ಮಂದಿ ವಿದ್ಯಾರ್ಥಿಗಳನ್ನ ವಿವಿ ಆಯ್ಕೆ ಮಾಡಲಿದೆ. ಐದು ಮಹತ್ವಾಕಾಂಕ್ಷಿ ಕೋರ್ಸ್ ಗಳು ಪ್ರಾರಂಭವಾಗಲಿವೆ. ಸಿವಿಲ್ ಎನ್ವಿರಾನ್ ಮೆಂಟಲ್ ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆಂಟ್ ಅಂಡ್ ಮಷಿನ್ ಲರ್ನಿಂಗ್. ಆರ್ಟಿಫಿಶಿಯಲ್ ಇಂಟೆಲಿಜೆಂಟ್ ಅಂಡ್ ಡಾಟ ಸೈನ್ಸ್. ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್. ಬಯೋ ಮೆಡಿಕಲ್ ಅಂಡ್ ರೋಬೋಟಿಕ್ ಎಂಜಿನಿಯರಿಂಗ್ ಕೊರ್ಸ್ ಗಳ ಪ್ರಾರಂಭವಾಗಲಿವೆ ಎಂದು ತಿಳಿಸಿದರು. ಕುಲಸಚಿವರಾದ ಪ್ರೊ.ಆರ್.ಶಿವಪ್ಪ ಹಾಜರಿದ್ದರು.

ENGLISH SUMMARY….

UoM to implement new NEP from current year
Mysuru, August 19, 2021 (www.justkannada.in): Prof. G. Hemanth Kumar, Vice-Chancellor, University of Mysore has informed that the University will implement the new National Education Policy from the current academic year.
He addressed a press meet held at the Crawford Hall auditorium today. He explained that the new NEP for the PG courses would be implemented from the current academic year 2021-22. “It will be a four-year degree course. If the student completes the first year and decides to quit, he will be given a Certificate course. If he decides to quit after completing the second year he will receive a Diploma certificate. Accordingly, after completion of the third year, it will be considered as Degree and Hons Degree after completion of four years. The students can opt for one or two optional subjects,” he said.
Keywords: University of Mysore/ new National Education Policy/ implement/ from current academic year

Key words: Mysore university- decision – implement- National Education Policy – this year