ಮೈಸೂರು, ಜ.30, 2022 : (www.justkannada.in news) ಹೆಚ್ಚು-ಹೆಚ್ಚು ಯಾಂತ್ರೀಕೃತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಪರಸ್ಪರ ಸೌಹಾರ್ದಯುತ ಬಾಳ್ವೆಗಾಗಿ ನೆಮ್ಮದಿಯ ಬದುಕು, ಲೋಕಶಾಂತಿಗೆ ಗಾಂಧಿ ಮಾರ್ಗ ಅನುಸರಿಸುವುದು ಅತ್ಯಂತ ಪ್ರಸ್ತುತವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ನಗರದ ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 74ನೇ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನ ಶೇಷ್ಠ ಚಿಂತಕ ಜಾನ್ ರಸ್ಕಿನ್ ಅವರ ’ಅನ್ ಟು ದಿಸ್ ಲಾಸ್ಟ್’ ಕೃತಿ ಗಾಂಧೀಜಿ ಮೇಲೆ ಅಪಾರವಾದ ಪ್ರಭಾವವನ್ನು ಬೀರಿತ್ತು. ಸರ್ವೋದಯ ಚಳುವಳಿಯು ಮುಖ್ಯವಾಗಿ ಸಮಾಜದ ಕಟಕಡೆಯ ವ್ಯಕ್ತಿಯ ನ್ಯಾಯಯುತವಾದ ಪಾಲನ್ನು ನೀಡದೇ ಸಮಾಜದ ಹಿತಾಶಕ್ತಿ ಸಾಧಿಸಲು ಆಗುವುದಿಲ್ಲ ಎಂಬ ಅಂಶಕ್ಕೆ ಅದು ಹೆಚ್ಚು ಒತ್ತು ನೀಡುತ್ತದೆ. ಇದನ್ನು ಗಾಂಧೀಜಿ ತಮ್ಮ ಜೀವನದ ಹೋರಾಟಗಳಲ್ಲಿ ತುಂಬ ಪ್ರಾಮಾಣಿಕವಾಗಿಯ ಪ್ರತಿಪಾದಿಸುತ್ತ ಬಂದರು. ಅಹಿಂಸೆ ಪ್ರತಿಪಾದನೆ ಹಾಗೂ ಸತ್ಯಾಗ್ರಹ ಪರಿಕಲ್ಪನೆಯನ್ನು ಜಗತ್ತಿಗೆ ಮೂಲಕ ಜನಮನ್ನಣೆ ಪಡೆದ ಮಹನೀಯರಲ್ಲಿ ಮಹಾತ್ಮ ಗಾಂಧೀಜಿಯವರು ಪ್ರಮುಖರಾಗಿದ್ದಾರೆ ಎಂದರು.
ಸ್ವರಾಜ್ಯ, ಸ್ವದೇಶಿ ಚಿಂತನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಗಾಂಧೀಜಿಯವರು ಕೈಗೊಂಡ ರಚನಾತ್ಮಕ ಕಾರ್ಯಕ್ರಮಗಳು, ಅನುಷ್ಠಾನಗೊಳಿಸಿದ ಯೋಜನೆಗಳು ಹಲವಾರು. ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನು ಕಾಣಬೇಕಾದರೆ, ಅನುಸರಿಸಬೇಕಾದ ರೀತಿ ನೀತಿಗಳನ್ನು ಸರಳವಾಗಿ ತೋರಿಸಿದ ಮಹಾತ್ಮ ಗಾಂಧೀಜಿ ಅವರು ಅದನ್ನು ಸ್ವತಃ ತಾವೇ ಅನುಸರಿಸುವ ಮೂಲಕ ಎಲ್ಲರಿಗೂ ಬಹುದೊಡ್ಡ ಪ್ರೇರಣೆಯೇ ಆಗಿದ್ದಾರೆ. ಗಾಂಧೀಜಿಯವರು, ಇಡೀ ಜಗತ್ತಿಗೆ ಅಗೆದಷ್ಟು ಮೊಗೆದಷ್ಟು’ ಮುಗಿಯದ ಆಪಾರ ಚಿಂತನೆಯ ಗಣಿಯೇ ಆಗಿದ್ದಾರೆ. ಜಗತ್ತು’ ಜಾಗತೀಕರಣದ ಕಡೆಗೆ ಆಕರ್ಷಿತವಾಗಿದ್ದರೂ ಸಹ, ಜನತೆಯ ಅಭ್ಯುದಯದ ವಿಷಯದಲ್ಲಿ ಜಗತ್ತನ್ನು ತನ್ನಡೆಗೆ ಸೆಳೆಯುವಂತಹ ಶಕ್ತಿ ಗಾಂಧೀಜಿಯವರ ಚಿಂತನೆಗಳಿಗಿದೆ ಎಂದರು.
ಸ್ವಾತಂತ್ರ್ಯದ ಪರಿಕಲ್ಪನೆ, ಗ್ರಾಮೀಣಾಭಿವೃದ್ಧಿ, ಪತ್ರಿಕೋದ್ಯಮ, ಪರಿಸರ ನೈರ್ಮಲ್ಯ ಮಹಿಳಾಚಿಂತನೆ, ವಿಶ್ವಶಾಂತಿ, ಗುಡಿಕೈಗಾರಿಕೆ, ಖಾದಿಪ್ರಚಾರ, ಅಸ್ಪೃಶ್ಯತಾ ನಿವಾರಣೆ, ವೈಜ್ಞಾನಿಕತೆ, ಆಧ್ಯಾತ್ಮಿಕತೆ, ಸೌಹಾರ್ದತೆ ಹೀಗೆ ಅವರ ಚಿಂತನಾ ವಿಷಯಗಳ ಪಾಲಿಗೆ ಕೊನೆಯೇ ಇಲ್ಲ ಎಂಬಂತಿದೆ. ಗಾಂಧೀಜಿ ಅವರು ಅನುಸರಿಸಿದ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ, ಕರ್ತವ್ಯ ಪಜ್ಜೆ ಮುಂತಾದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಮಗೂ ನಮ್ಮ ಸುತ್ತಲಿನವರಿಗೂ ಒಳಿತನ್ನುಂಟು ಮಾಡುವುದು ಪ್ರತಿಯೊಬ್ಬರಿಗೂ ಸಾಧ್ಯವಾಗಬಲ್ಲ ಸಂಗತಿಯಾಗಿದೆ.ಗಾಂಧೀಜಿಯವರ ಬದುಕು ಒಂದು ತೆರೆದ ಮಸ್ತಕ, ತಮ್ಮ ಸರಳ ಜೀವನ, ಹೋರಾಟ, ಸತ್ಯ, ಸಹನೆ, ಸ್ವಾವಲಂಬನೆಗಳ ಆದರ್ಶಮಯ ಬದುಕಿನಿಂದ ಗಾಂಧೀಜಿ ಜಗತ್ತಿಗೆ ಎಂದೆಂದಿಗೂ ಪ್ರಸ್ತುತರಾಗುತ್ತಾರೆ ಎಂದು ಹೇಳಿದರು.
ಗಾಂಧಿ ಭವನದ ನಿರ್ದೇಶಕರಾದ ಪ್ರೊ.ಎಂ.ಎಸ್.ಶೇಖರ್ ಮಾತನಾಡಿ, ಕೊಂದವರ ಹೃದಯದಲ್ಲೂ ಪ್ರೀತಿ ಬಸಿಯುವ ಗುಣ ಗಾಂಧಿ ಅವರದ್ದಾಗಿತ್ತು. ಪರಿಸರದಲ್ಲಿ ವೈವಿಧ್ಯಮಯ ಇದೆ. ತನನ್ನು ವಿರೋಧಿಸುವವರನ್ನು ಸ್ನೇಹದಿಂದ ಕಾಣುವ ಮನಸ್ಯ ಅವರದು. ಗಾಂಧಿ ವಿಚಾರಧಾರೆಯನ್ನು ಎದೆಗೂಡಿಗೆ ಹಂಚಿಕೊಳ್ಳುವ ಕೆಲಸ ಆಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಕಾಳಚನ್ನೇಗೌಡ ಅವರು ಮಾತನಾಡಿದರು. ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಪಿ.ಜ್ಞಾನಪ್ರಕಾಶ್, ವಿದ್ಯಾವರ್ಧಕ ಸಂಘದ ಗುಂಡಪ್ಪಗೌಡ, ಗಾಂಧಿ ಮಾರ್ಗಿ ವೀರಪ್ಪಗೌಡ ಸೇರಿದಂತೆ ಇತರರು ಇದ್ದರು. ಇದೇ ವೇಳೆ ಪೌರ ಕಾರ್ಮಿಕರಾದ ಶಕುಂತಲ ಅವರನ್ನು ಸನ್ಮಾನಿಸಲಾಯಿತು.
key words : Mysore-university-Gandhi