ಮೈಸೂರು ಮಾರ್ಚ್ 22,2022(www.justkannada.in): ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ನಿಸ್ವಾರ್ಥ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರು ಯುವ ಪೀಳಿಗೆಗೆ ಪ್ರೇರಣೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ಮಂಗಳವಾರ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯ. ಸಾಧನೆ ಮಾಡಿದ ಸಾಧಕರಿಗೆ ನೆಮ್ಮದಿ ದೊರೆತು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ದೊರೆಯುತ್ತದೆ. ಅಲ್ಲದೆ, ಈ ಸಾಧಕರ ನಿಸ್ವಾರ್ಥ ಸೇವೆ ಯುವ ಪೀಳಿಗೆಗೆ ಪ್ರೇರಣೆ ಯಾಗಿರುತ್ತದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಪದ್ಮವಿಭೂಷಣ ಡಾ. ವಾಸುದೇವ್ ಕೆ, ದಿವಂಗತ ಪುನೀತ್ ರಾಜಕುಮಾರ್ ( ಮರಣೋತ್ತರ) ಹಾಗೂ ಎಂ ಮಹದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಹೆಮ್ಮೆಯ ಸಂಗತಿ. ಈ ಮಹನೀಯರು ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಜೊತೆಗೆ ಸಮಾಜ ಸೇವೆಯಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿರುವುದಕ್ಕೆ ಅಭಿನಂದಿಸುತ್ತೇನೆ ಎಂದರು.
ಇಡೀ ವಿಶ್ವದಲ್ಲೇ ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಉನ್ನತ ಸ್ಥಾನದಲ್ಲಿದೆ. ಪ್ರಸ್ತುತ ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಮಹನೀಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಮತ್ತಷ್ಟು ಬಲ ಪಡಿಸಲು ಹಾಗೂ ಸ್ವಸ್ತ ಸಮಾಜ ನಿರ್ಮಾಣ ಮಾಡಲು ಯುವಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕರಾದ ಡಾಕ್ಟರ್ ಎಸ್ ಸಿ ಶರ್ಮಾ ಅವರು ಘಟಿಕೋತ್ಸವದ ಭಾಷಣವನ್ನು ಮಾಡಿದರು. ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಕುಲಸಚಿವ ಪ್ರೊ. ಶಿವಪ್ಪ, ರಾಘವೇಂದ್ರ ರಾಜಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Key words: mysore university- Governor- Thawar Chand Gehlot