ಮೈಸೂರು ವಿವಿ ಗೌರವ ಡಾಕ್ಟರೇಟ್ : ಈ ಜಾನಪದ ಕಲಾವಿದನಿಗೆ ವರನಟನ ಸಿನಿಮಾಗಳೇ ಪ್ರೇರಣೆ.

ಮೈಸೂರು,ಮಾರ್ಚ್,17,2022(www.justkannada.in):  ಈ ಸಾಲಿನ ಮೈಸೂರು ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್ ಗೆ ಪಾತ್ರವಾಗಿರುವ  ಜಾನಪದ ಕಲಾವಿದ ಎಂ.ಮಹದೇವಸ್ವಾಮಿ, ಹಿರಿಯ ವಿಜ್ಞಾನಿ ಹಾಗೂ  ಡಿಆರ್ ಡಿಒ ಮಾಜಿ ಡೈರಕ್ಟರ್ ಜನರಲ್ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರ ನಿವಾಸಕ್ಕೆ ಮೈಸೂರು ವಿವಿ ಕುಲಪತಿ ಪೊ. ಜಿ. ಹೇಮಂತ್ ಕುಮಾರ್ ಖುದ್ದು ತೆರಳಿ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಜಾನಪದ ಕಲಾವಿದ ಎಂ. ಮಹದೇವಸ್ವಾಮಿ ಅವರನ್ನು ಮಂಡ್ಯ ಜಿಲ್ಲೆಯ ಮಳವಳ್ಳಿಯ ನಿವಾಸದಲ್ಲಿ ಹಾಗೂ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರನ್ನು ಬೆಂಗಳೂರು ನಿವಾಸದಲ್ಲಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಆಹ್ವಾನಿಸಿದರು.  ಈ ವೇಳೆ ಕುಲಪತಿಗಳ ವಿಶೇಷಾಧಿಕಾರಿ ಡಾ.ಚೇತನ್ ಹಾಜರಿದ್ದರು.

 ರಾಜ್ ಪ್ರೇರಣೆ.

ಈ ವೇಳೆ ಮಾತನಾಡಿರುವ ಜಾನಪದ ಕಲಾವಿದ ಮಳವಳ್ಳಿ ಎಂ.ಮಹದೇವಸ್ವಾಮಿ, ನಾನು ಇಂದು ಇಷ್ಟು ದೊಡ್ಡ ಕಲಾವಿದನಾಗಿ ಹೊರಹೊಮ್ಮಲು ವರನಟ ಡಾ.ರಾಜ್‍ಕುಮಾರ್ ಅವರ ಸಿನಿಮಾಗಳೇ ಕಾರಣ. ಮುಡುಕುತೊರೆ ಟೆಂಟ್‍ ನಲ್ಲಿ ಬಂಗಾರದ ಮನುಷ್ಯ ಸಿನಿಮಾವನ್ನು ಸತತ 99 ಬಾರಿ ನೋಡಿದ್ದೆ. ಅವರ ಅಭಿನಯ ಹಾಗೂ ಗಾಯನ ನನ್ನೊಳಗಿನ ಕಲಾವಿದ ಬೆಳೆಯಲು ಪ್ರೇರಣೆಯಾಗಿದೆ ಎಂದು ಹೇಳಿದರು.

ಚಿಕ್ಕಂದಿನಿಂದಲೇ ಡಾ.ರಾಜ್‍ಕುಮಾರ್ ಚಲನಚಿತ್ರವನ್ನು ನೋಡುತ್ತಾ, ಅವರು ಹಾಡನ್ನೇ ಕೇಳುತ್ತಾ ಬೆಳೆದು ಬಂದಿದ್ದೇನೆ. ಅವರ ನಟನೆ ಹಾಗೂ ಗಾಯನದಿಂದಲೇ ಪ್ರಭಾವಿತನಾಗಿದ್ದೇನೆ. ಅದರಿಂದಾಗಿಯೇ ನಾನು ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಕಲಾವಿದನಾಗುವ ಬಯಕೆ ಹೆಚ್ಚಾಗುತ್ತಿದ್ದಂತೆಯೇ ರಾಜ್‍ಕುಮಾರ್ ಅಭಿನಯದ ಚಿತ್ರಗಳನ್ನು ನೋಡುವ ಚಟ ಹೆಚ್ಚಾಯಿತು. ಇದರಿಂದ ಪ್ರತಿಧ್ವನಿ, ತಾಯಿದೇವರು, ಮೇಯರ್ ಮುತ್ತಣ್ಣ, ಬಹುದ್ದೂರು ಗಂಡು, ಬಂಗಾರದ ಮನುಷ್ಯ ಸೇರಿದಂತೆ ಹಲವು ಸಿನಿಮಾವನ್ನು ಟೆಂಟ್‍ನಲ್ಲಿ ನೋಡಲಾರಂಭಿಸಿದೆ. ಇದರಿಂದ ಕಲಾವಿದನಾಗುವ ಬಯಕೆಗೆ ಪುಷ್ಠಿ ಸಿಕ್ಕಂತಾಯಿತು ಎಂದರು.

ವರನಟ ಡಾ.ರಾಜ್‍ಕುಮಾರ್ ಅಭಿನಯದಿಂದ ನಾನು ಅವರ ಅಭಿಮಾನಿಯಾದೆ. ಬಂಗಾರದ ಮನುಷ್ಯ ಸಿನಿಮಾವನ್ನು ಸಿನಿಮಾ ಮುಡುಕುತೊರೆಯಲ್ಲಿದ್ದ ಟೆಂಟ್‍ನಲ್ಲಿ ಸತತ 99 ಬಾರಿ ನೋಡಿದ್ದೇನೆ. ಅದರಲ್ಲಿ 50 ಬಾರಿ ಹಣ ಕೊಟ್ಟು ನೋಡಿದ್ದರೆ, 49 ಬಾರಿ ಹಣ ನೀಡದೆ ಸಂದಿಯಲ್ಲಿ ನುಸುಳಿ ಸಿನಿಮಾ ನೋಡಿದ್ದೇನೆ. ಸಿನಿಮಾ ನೋಡಲೇಬೇಕೆಂಬ ಹಠದಿಂದ ಮನೆಯಲ್ಲಿ ರಾಗಿ, ಜೋಳ, ಕಾಳನ್ನು ಮಾರಿ ಕಾಸನ್ನು ಪಡೆದು ಹೋಗಿದ್ದೇನೆ. ತಾಯಿಯಿಂದ ಹಲವು ಬಾರಿ ಬೈಗುಳ ಹಾಗೂ ಏಟನ್ನು ತಿಂದಿದ್ದೇ ಎಂದು ಬಾಲ್ಯದ ನೆನಪನ್ನು ಸ್ಮರಿಸಿದರು.

ನಾನು ಮಲೆ ಮಹದೇಶ್ವರ, ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಸ್ವಾಮಿ, ಶನಿಮಹಾತ್ಮೆ ಸೇರಿದಂತೆ 30 ಕಥೆಯನ್ನು ಕಲಿತಿದ್ದೇನೆ. ಅಂದು ಊರಿಗೊಂದೇ ರೇಡಿಯೋ ಇತ್ತು. ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ನಾಟಕ ವೀಕ್ಷಿಸಲು ಕಾಲ್ನಡಿಗೆಯಲ್ಲೇ ಹೋಗುತ್ತಿದ್ದೆ. ಬಾಯಿಂದ ಬಾಯಿಗೆ ಕಥೆ ಕೇಳಿ ಇಂದು 30 ಕಥೆಯನ್ನು ಕರಗತ ಮಾಡಿಕೊಂಡಿದ್ದೇನೆ. ಸತತ 35 ರಾತ್ರಿ ಈ ಕಥೆಯನ್ನು ಹಾಡಬಲ್ಲ ಶಕ್ತಿ ನನ್ನಲ್ಲಿದೆ.  ಕಣ್ಮುಚ್ಚಿಕೊಂಡು ಕಥೆ ಹೇಳಲು ಆರಂಭಿಸಿದರೆ, ಮಲೆ ಮಹದೇಶ್ವರರ ಕೃಪೆಯಿಂದ ನಿರರ್ಗಳವಾಗಿ ಕಥಾ ಪ್ರಸಂಗ ಸಾಗುತ್ತದೆ. ಮದ್ಯೆ ಮಧ್ಯೆ ಉಪಕಥೆಯನ್ನು ಹೇಳಿ ಜನರನ್ನು ರಂಜಿಸುತ್ತೇನೆ ಎಂದರು.

Key words: mysore-university- Honorary -Doctorate

ENGLISH SUMMARY…

UoM Honorary Doctorate: Dr. Raj is the inspiration for this folk artist
Mysuru, March 18, 2022 (www.justkannada.in): Prof. G. Hemanth Kumar, Vice-Chancellor, University of Mysore, personally visited folk artist M. Mahadevaswamy, Senior Scientist and DRDO former Director-General Dr. Vasudev Kalkunte Atre, who have been selected for the Honorary Doctorate given by the University of Mysore, and invited them to the convocation.
Prof. G. Hemanth Kumar visited the folk artist M. Mahadevaswamy at his residence in Malavalli, Mandya District, and Dr. Vasudev Kalkunte Atre at his residence in Bengaluru. Dr. Chetan, Special Officer to the VC accompanied him.
Dr. Raj inspiration
During his meeting, folk artist Malavalli M. Mahadevaswamy told that thespian Dr. Rajkumar and his movies are his inspiration to become an artist. “I have seen Dr. Raj’s ‘Bangarada Manushya’ movie 99 times. His vibrant acting and singing inspired me to become an artist too,” he said.
Keywords: University of Mysore/ Honorary Doctorate/ M. Mahadevaswamy