ಮೈಸೂರು, ಜು.24,2024: (www.justkannada.in news) ಪ್ರಶ್ನಿಸುವ ವೃತ್ತಿಯಲ್ಲಿರುವ ಪತ್ರಕರ್ತರನ್ನೇ ಇಂದು ಪ್ರಶ್ನಿಸುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ನಾವೇ. ಎಲ್ಲಿಯ ತನಕ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ನೋಡದೆ ಎಡ, ಬಲ ಎಂದು ವಿಭಜಿಸುತ್ತೆವೆಯೋ ಅಲ್ಲಿಯ ತನಕ ಈ ಸ್ಥಿತಿ ಎದುರಿಸಲೇ ಬೇಕಾಗುತ್ತದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಕಿವಿಮಾತು ಹೇಳಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ “ಜರ್ನೋತ್ರಿ-24” ಮಾನಸ ಮಾಧ್ಯಮ ಹಬ್ಬ ಸಮಾರಂಭದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿನ ವೈದ್ಯರು, ಪೊಲೀಸರು, ಅಧಿಕಾರಿಗಳು ಹೀಗೆ..ನಾನ ವರ್ಗದವರಿದ್ದರು ಸಹ ಪತ್ರಕರ್ತರನ್ನು ಜನ ಪ್ರಶ್ನಿಸುತ್ತಿದ್ದಾರೆ. ನೀವ್ ಮಾಡೋದು ಸರಿನಾ ..? ಎಂದು. ಹಾಗಾಗಿ ಮಾಧ್ಯಮದವರು ಯಾವುದೇ ಇಸಂಗಳಿಗೂ ವಾಲದೆ ವೃತ್ತಿಪರತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.
ದೊಡ್ಡ ಅಂತರವಿದೆ:
ಮಾಧ್ಯಮ ಅಕಾಡೆಮಿ ಮತ್ತು ಮಾಧ್ಯಮದ ನಡುವೆ ದೊಡ್ಡ ಅಂತರವಿದೆ. ಅಕಾಡೆಮಿ ಬರಿ ಪ್ರಶಸ್ತಿ ಮತ್ತು ಪ್ರಕಾಶನಕ್ಕೆ ಸೀಮಿತವಾಗಿದೆ. ಅದನ್ನು ಶೈಕ್ಷಣಿಕವಾಗಿಯೂ ತೊಡಗಿಸಿಕೊಳ್ಳುವಂತೆ ಶ್ರಮವಹಿಸುತ್ತೇನೆ ಎಂದು ಅಧ್ಯಕ್ಷೆ ಆಯೇಷಾ ಖಾನಂ ಭರವಸೆ ನೀಡಿದರು.
ಯುವ ಮಾಧ್ಯಮ ಕಲಿಕಾರ್ಥಿಗಳು ಉತ್ತಮ ಕೌಶಲಗಳನ್ನು ರೂಪಿಸಿ ಕೊಳ್ಳಬೇಕು. ಶ್ರಮ ಕುತೂಹಲ, ಸಮರ್ಪಣಾ ಮನೋಭಾವದಿಂದ ಪತ್ರಿಕಾ ಕ್ಷೇತ್ರದಲ್ಲಿ ಸಾಧಿಸಿ ತಾರಾ ಪತ್ರಕರ್ತರಾಗಿ ಮಿಂಚಬೇಕು.
ಪ್ರಸ್ತುತ ಪತ್ರಕರ್ತರು ಆತ್ಮವಲೋಕನ ಮಾಡಿಕೊಳ್ಳಬೇಕು. ನೈತಿಕತೆ ಪ್ರಾಮಾಣಿಕತೆ ಸೇರಿದಂತೆ ಪತ್ರಿಕೋದ್ಯಮದ ಎಲ್ಲಾ ಮೂಲಮಂತ್ರಗಳನ್ನು ಪುನಃ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳ ಚಟುವಟಿಕೆ ಗಳು ನಿತ್ಯೋತ್ಸವ ಕೇಂದ್ರಗಳಾಗಬೇಕು ಎಂದರು.
ಸೋಷಿಯಲ್ ಮೀಡಿಯದ್ದೆ ಅಬ್ಬರ:
ಹಣ ಮತ್ತು ಅಧಿಕಾರ ಮಾಧ್ಯಮವನ್ನು ಕೂಡ ನಿಯಂತ್ರಿಸಲು ಸಾಧ್ಯವಿರುವ ಈ ಕಾಲ ಘಟ್ಟದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಜನರ ಪರವಾಗಿ ನಿಲ್ಲುವ, ಧ್ವನಿ ಎತ್ತುವ ನಿರ್ಧಾರ ಮಾಡಬೇಕಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಲೋಕನಾಥ್ ಹೇಳಿದರು.
ಪತ್ರಿಕೋದ್ಯಮದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮಾಧ್ಯಮ ಶಿಕ್ಷಣವನ್ನು ವ್ಯಾಸಂಗ ಮಾಡಿದ ನಂತರ ಯಾವುದೋ ಮುಖ್ಯ ವಾಹಿನಿಗೆ ಸೇರುವುದು ಸರಿ. ಆದರೆ, ಅಲ್ಲಿ ಸೇರಿದ ನಂತರ ಯಾವ ರೀತಿಯ ಸುದ್ದಿಯನ್ನು ಸಮಾಜಕ್ಕೆ ನೀಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸಮಾಜ ಸ್ನೇಹಿಯಾಗಿ ಸಾರ್ವಜನಿಕ ಪರವಾಗಿ ಕಾರ್ಯ ನಿರ್ವಹಿಸುವುದನ್ನು ಅರಿತುಕೊಳ್ಳಬೇಕಾಗಿದೆ. ಕಾಲೇಜುಗಳಲ್ಲಿ ಕಲಿತದ್ದನ್ನು ಮಾಧ್ಯಮಕ್ಕೆ ಸೇರಿದ ನಂತರ ಮರೆತು ಹೋಗುವ ಅಥವಾ ಬಿಟ್ಟು ಬಿಡುವ ಪ್ರಸಂಗಗಳೇ ಹೆಚ್ಚು ಎಂದು ವಿಷಾಧಿಸಿದರು.
ಇಂದು ಪ್ರಮುಖವಾಗಿ ಪ್ರಬಲವಾಗಿ ಪ್ರಪಂಚವನ್ನು ಆಳುತ್ತಿರುವುದು ಸಾಮಾಜಿಕ ಮಾಧ್ಯಮ. ವಾಟ್ಸಾಪ್, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಟ್ಬಿಟರ್ ನಂಥ ಜಾಲತಾಣಗಳು. ಇವು ಇಲ್ಲವೆಂದರೆ ಮನುಷ್ಯನ ಅಸ್ತಿತ್ವೇ ಇಲ್ಲ ಎನ್ನುವಂತಾಗಿದೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಮಾಧ್ಯಮ ವಿಕೇಂದ್ರಿತಗೊಂಡಿದೆ. ಪ್ರತಿಯೊಬ್ಬ ವ್ಯಕ್ತಿಯು ಮುಕ್ತವಾಗಿ ತನ್ನ ಆಲೋಚನೆಗಳನ್ನು ಅನಿಸಿಕೆಗಳನ್ನು ಅಭಿವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮ ಅವಕಾಶವನ್ನು ಕಲ್ಪಿಸಿದೆ. ಯಾರು ಏನನ್ನು ಬೇಕಾದರೂ ಹಂಚಿಕೊಳ್ಳಬಹುದು, ಹೇಳಬಹದು ಎನ್ನವಷ್ಟು ಸ್ವಾತಂತ್ರ್ಯವನ್ನು ನಿರ್ಮಿಸಿದೆ. ಆದರೆ, ನಿಯಂತ್ರಣವೇ ಇಲ್ಲದ ಸಂಪೂರ್ಣ ಸ್ವಾತಂತ್ರ್ಯದಿಂದ ಅನಾಹುತಗಳು ಸಹ ಸಂಭವಿಸುತ್ತಿವೆ ಎನ್ನುವುದು ಸತ್ಯ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಸಪ್ನಾ, ಹಿರಿಯ ಪತ್ರಕರ್ತ ಆರ್.ಪಿ.ಜಗದೀಶ್ ಹಾಜರಿದ್ದರು.
ಪತ್ರಕರ್ತರಿಗೆ ಸನ್ಮಾನ :
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕುಶಾಲ್ ಕುಮಾರ್, ಹಿರಿಯ ಪತ್ರಕರ್ತರಾದ ಆರ್.ಪಿ.ಜಗದೀಶ್, ದಾ.ಕೋ.ಹಳ್ಳಿ ಚಂದ್ರಶೇಖರ್, ಶಾಂತಲಾ ಧರ್ಮರಾಜ್, ಪ್ರೀತಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
key words: Mysore university, journothri festival, inauguration, Karnataka media academy chairmen, Ayesha khanum