MYSORE UNIVERSITY : ಇನ್ಮುಂದೆ ಕಾನೂನು ಪದವಿ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಬಹುದು.

 

ಮೈಸೂರು, ಡಿ.23, 2021 : (www.justkannada.in news) : ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಕಾನೂನು ಪದವಿ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸಂಬಂಧ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭರವಸೆ ನೀಡಿದರು.

ಇಲ್ಲಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಮೈಸೂರು ವಿವಿಯ ಶಿಕ್ಷಣ ಮಂಡಳಿ ಮೂರನೇ ಸಾಮಾನ್ಯ ಸಭೆಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯ ವಿವರ ಹೀಗಿದೆ…

ಕಾನೂನು ನಿಕಾಯದ ಡೀನ್ ಪ್ರೊ.ರಮೇಶ್ ಅವರು ಸಭೆಯ ನಡವಳಿಯನ್ನು ಮಂಡಿಸಲು ಅನುಮತಿ ಕೋರಿದರು. ಈ ವೇಳೆ ಮಾತನಾಡಿದ ಸರಕಾರ ನಾಮನಿರ್ದೇಶನ ಸದಸ್ಯ ವಕೀಲ ರಾಜಶೇಖರ್, ಲಾ ಓದುವ ಮಕ್ಕಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಎಂಜಿನಿಯಿರಿಂಗ್, ಮೆಡಿಕಲ್ ಪರೀಕ್ಷೆಗಳನ್ನೇ ಕನ್ನಡದಲ್ಲಿ ಬರೆಯಲು ಅವಕಾಶ ನೀಡುತ್ತಿರುವಾಗ ಕಾನೂನು ವಿಷಯಕ್ಕೆ ಮಾತ್ರ ಇಂಗ್ಲಿಷ್ ಮಾಧ್ಯಮವೇಕೆ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪ್ರೊ.ರಮೇಶ್ ಅವರು, ವಿವಿಯಲ್ಲಿ 1973ರಿಂದ ಕಾನೂನು ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯವರೆಗೆ ಸ್ನಾತಕೋತ್ತರದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಪದವಿಯಲ್ಲಿ 2006ರವರೆಗೆ ವಿದ್ಯಾರ್ಥಿಗಳು ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಪರೀಕ್ಷೆ ಬರೆಯುತ್ತಿದ್ದರು. ಆದರೆ, ನಂತರ ಬದಲಾದ ನಿಯಾಮಾವಳಿಂದ ಕಾನೂನು ಪದವಿ ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತನೆ ಆಯಿತು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಗುಣಮಟ್ಟದ ಪುಸ್ತಕಗಳಿಲ್ಲ. ಉತ್ತಮ ಅನುವಾದವೂ ಆಗಿಲ್ಲ. ಹೀಗಾಗಿ ಇಂಗ್ಲಿಷ್ ಮಾಧ್ಯಮಕ್ಕೆ ಆದ್ಯತೆ ನೀಡಲಾಗಿದೆ. ಸರಕಾರವೇ ಉತ್ತಮ ಅನುವಾದಕರಿಂದ ಕನ್ನಡಕ್ಕೆ ಪುಸ್ತಕ ಅನುವಾದ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿ ರಾಜಶೇಖರ್ ಅವರು, ಇಂಗ್ಲಿಷ್‌ನಲ್ಲೇ ನ್ಯಾಯಾಧೀಶರ ಜಡ್ಜಮೆಂಟ್ ಕಾಪಿಗಳು ಬರುತ್ತಿರುವಾಗ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬರೆಯುವ ಹಕ್ಕನ್ನು ಮೊಟುಕೊಳಿಸಬೇಡಿ ಎಂದು ಮನವಿ ಮಾಡಿದರು. ಇದಕ್ಕೆ ಸಭೆಯಲ್ಲಿ ಇತರ ಪ್ರಾಧ್ಯಾಪಕರು ಬೆಂಬಲ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಬೆಂಗಳೂರು ಕಾನೂನು ವಿವಿಯಲ್ಲಿ ಪಠ್ಯಕ್ರಮ ಹೇಗಿದೆ? ಯಾವ ಭಾಷೆಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಪರಿಶೀಲಿಸಲಾಗುವುದು. ಜೊತೆಗೆ ಮುಂದಿನ ಬಾರಿಯಿಂದ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಭರವಸೆ ನೀಡಿದರು.

ಸಭೆಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ.ಜ್ಞಾನಪ್ರಕಾಶ್ (ಪರೀಕ್ಷಾಂಗ ಕುಲಸಚಿವ), ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನ ಭಟ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಪ್ರೊ.ನೀಲಮ್ಮ ಬೆಟಸೂರ್, ಪ್ರೊ.ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.

key words : Mysore-university-academic-council-meeting-vc-hemanth.kumar-uom

ENGLISH SUMMARY…

You can write law exams in Kannada from now onwards: UoM
Mysuru, December 23, 2021 (www.justkannada.in): University of Mysore Vice-Chancellor Prof. G. Hemanthkumar today informed that the students appearing for the law exams conducted by the University of Mysore can write both in Kannada and English languages from the next academic year.
He presided over the third general body meeting of the University of Mysore Education Board, held at the Vignana Bhavana in Manasagangotri campus today.
He said that steps will be taken to check the curriculum of Bangalore University and for which language priority is given there. He also assured that measures will be taken to ensure that the students could write the law exams both in English as well as Kannada from the next academic year.
Registrar Prof. R. Shivappa, Prof. A.P. Jnanaprakash (Registrar – Exams), Finance Officer Dr. Sangeetha Gajanana Bhat, MLC Dharmasena, Prof. Neelamma Betsur, Prof. Basavaraju and others participated in the meeting.
Keywords: University of Mysore/ law exams/ Kannada