ಮೈಸೂರು, ಆ.20, 2021 : (www.justkannada.in news) : ನೂತನ ನೀತಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಹಾಗೂ ಅಮೂಲಾಗ್ರ ಬದಲಾವಣೆಯನ್ನು ಉಂಟು ಮಾಡಬಲ್ಲದು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಬಿ. ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕ್ರಾರ್ಡ್ ಹಾಲ್ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತಾದ ಒಂದು ದಿನ ಕಾರ್ಯಾಗಾರದಲ್ಲಿ ಅವರು ಹೇಳಿದಿಷ್ಟು..
35 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಈ ಪಾಲಿಸಿ ಅನ್ವಯ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಮತ್ತು ಬದುಕು ಕಟ್ಟಿಕೊಳ್ಳಲು ತಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಪರಿಪೂರ್ಣ ವ್ಯಕ್ತಿತ್ವ ಸಿಗಬೇಕು ಎಂಬ ಉದ್ದೇಶವನ್ನು ಒಳಗೊಂಡಿದೆ.
ಕಲಾ ವಿದ್ಯಾರ್ಥಿಯು ಎರಡು ಐಚ್ಛಿಕ ವಿಷಯ ಜೊತೆಗೆ ವಿಜ್ಞಾನ ಅಥವಾ ವಾಣಿಜ್ಯ ವಿಭಾಗದ ಒಂದು ವಿಷಯವನ್ನೂ ಓದಬಹುದು. ಓದಿದ ಯಾವ ವರ್ಷವೂ ಇಲ್ಲಿ ವ್ಯರ್ಥವಾಗುವುದಿಲ್ಲ. ಪ್ರತಿವರ್ಷಕ್ಕೂ ಒಂದೊಂದು ಸರ್ಟಿಫಿಕೇಟ್ ಸಿಗುತ್ತದೆ. ಪದವಿ ಮೊದಲ ವರ್ಷ ಓದಿ ಕಾಲೇಜು ಬಿಟ್ಟರೂ ಮತ್ತೆ ಎರಡು ಮೂರು ವರ್ಷವಾದ ಮೇಲೆ ಎರಡನೇ ವರ್ಷ ಓದಬಹುದು ಎಂದರು.
ಉದ್ಯೋಗಾವಕಾಶಕ್ಕೆ ಒತ್ತು.
ನೂತನ ಪಾಲಿಸಿ ಕೌಶಲ್ಯ ವೃದ್ಧಿ ಹಾಗೂ ಉದ್ಯೋಗಾವಕಾಶಕ್ಕೆ ಹೆಚ್ಚು ಒತ್ತು ನೀಡುತ್ತದೆ. ಜ್ಞಾನದ ಜೊತೆಗೆ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಲು ಅವಕಾಶವಿದೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪ್ರಾಧ್ಯಾಪಕರು ಹಾಗೂ ಮಕ್ಕಳಲ್ಲಿ ಆತಂಕ ಬೇಡ. ಇಲ್ಲಿ ಬದಲಾವಣೆ ಕೇವಲ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಅಷ್ಟೇ. ಉಳಿದಂತೆ ಹೆಚ್ಚಿನ ಬದಲಾವಣೆ ಹಾಗೂ ತೊಂದರೆ ಇರುವುದಿಲ್ಲ ಎಂದರು.
ವಿದ್ಯಾರ್ಥಿ ಸ್ನೇಹಿ
ವಿಶ್ರಾಂತ ಕುಲಪತಿ ಪ್ರೊ.ತಿಮ್ಮೇಗೌಡ ಬಿ. ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಪರ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿದೆ. ಬಹುಶಿಸೀಯ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡುತ್ತದೆ. ವಿದ್ಯಾರ್ಥಿಯು ಪ್ರತಿ ಹಂತದಲ್ಲೂ ಕೌಶಲ್ಯವಂತನಾಗಲು ಸಹಕರಿಸುತ್ತದೆ. ಹೆಚ್ಚು ಪಾರದರ್ಶಕತೆ ಇದರಲ್ಲಿ ಇದೆ. ಮಕ್ಕಳಿಗೆ ಪದವಿ ಅಥವಾ ಡಿಪ್ಲೋಮಾ ಕ್ರೆಡಿಟ್ ಆಧಾರದಲ್ಲಿ ನೀಡಲಾಗುತ್ತದೆ. ಪಾಠ ಮಾಡಲು ಶಿಕ್ಷಕರಿಗೆ ಹಾಗೂ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ. ಪ್ರಾಕ್ಟಿಕಲ್ ನಾಲೆಡ್ಜ್ ಬೆಳೆಸಲು ಇದು ಹೆಚ್ಚು ಪೂರಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
key words : mysore-university-national-education-policy-work.shop-mysore