ಮೈಸೂರು, ಅಕ್ಟೊಬರ್,07,2020 : ಈ ಬಾರಿಗೆ ಒಟ್ಟು 13 ವಿವಿಧ ಆನ್ ಲೈನ್ ಪ್ರೊಗ್ರಾಂಗಳ ಆರಂಭಕ್ಕೆ ಯುಜಿಸಿ ಅನುಮತಿ ನೀಡಿದೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಬೇಡಿಕೆಗೆ ತಕ್ಕಂತೆ ಮತ್ತಷ್ಟು ಹೆಚ್ಚಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಕಾರ್ಯಸೂಚಿ ಶಿಕ್ಷಣ ಮಂಡಳಿಯ ವಿಶೇಷ ಸಭೆ ಬುಧವಾರ ವಿಜ್ಞಾನಭವನದಲ್ಲಿ ನಡೆಯಿತು. ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2020-21ನೇ ಸಾಲಿಗೆ ಪ್ರಥಮ ದರ್ಜೆ ಕಾಲೇಜುಗಳಿಗೆ ಸಂಯೋಜನೆ ಮುಂದುವರಿಸಲು, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಕೋರ್ಸ್ , ವಿಷಯಗಳು, ಕಾಂಬಿನೇಷನ್ ಗಳನ್ನು ಆರಂಭಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ವಿವಿಯಲ್ಲಿ ಆನ್ ಲೈನ್ ಪ್ರೊಗ್ರಾಂಗಳ ಆರಂಭ ಕುರಿತು ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ , ಯುಜಿಸಿ ಈ ಬಾರಿಗೆ 13 ಆನ್ ಲೈನ್ ಪ್ರೊಗ್ರಾಂಗಳ ಆರಂಭಕ್ಕೆ ಅವಕಾಶ ನೀಡಿರುವ ವಿಷಯ ತಿಳಿದಿದರು. ಜತೆಗೆ ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಬೇಡಿಕೆಗೆ ತಕ್ಕಂತೆ ಹೆಚ್ಚಿಸಲು ಸಹಮತ ವ್ಯಕ್ತಪಡಿಸಿರುವುದನ್ನು ಸಭೆಯ ಗಮನಕ್ಕೆ ತಂದರು.
ಯುಜಿಸಿ ಮಾರ್ಗಸೂಚಿಯಂತೆ ಮೈಸೂರು ವಿವಿ ಆನ್ ಲೈನ್ ಪ್ರೊಗ್ರಾಂಗಳ ಆರಂಭಿಸಿದ್ದು, ಈ ಮೂಲಕ ಯಾರು ಬೇಕಾದರೂ ಶಿಕ್ಷಣ ಪಡೆಯಬಹುದು ಎಂದು ಪ್ರೊ.ಜಿ.ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.
ಕಾಲೇಜುಗಳ ಸಂಯೋಜನೆ :
ವಿವಿಯ ಕಾರ್ಯಸೂಚಿ ಶಿಕ್ಷಣ ಮಂಡಳಿಯ ವಿಶೇಷ ಸಭೆಯನ್ನು ಮಾರ್ಚ್ ತಿಂಗಳಿನಲ್ಲಿಯೇ ಮುಗಿಸಬೇಕಿತ್ತು. ಆದರೆ, ಕೊರೊನಾದಿಂದಾಗಿ ಕಾಲೇಜುಗಳು ಮುಚ್ಚಿದ್ದ ಕಾರಣ ತಡವಾಗಿ ಸಭೆ ನಡೆಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸ್ಪಷ್ಟನೆ ನೀಡಿದರು.
ಸಂಯೋಜನೆ ಮುಂದುವರಿಸಲು, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಕೋರ್ಸ್ ಗಳು, ವಿಷಯಗಳು, ಕಾಂಬಿನೇಷನ್ ಗಳನ್ನು ಆರಂಭಿಸುವುದು ಸೇರಿದಂತೆ ಹಲವು ವಿಷಯಗಳ ಪ್ರಕ್ರಿಯೆಯನ್ನು ಅಕ್ಟೊಂಬರ್ 3ರೊಳಗೆ ಮುಕ್ತಾಯಗೊಳಿಸಲಾಗಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಿಂದ ಒಟ್ಟು 169 ಪ್ರಥಮ ದರ್ಜೆ ಕಾಲೇಜುಗಳ ಸಂಯೋಜನೆ ನೀಡಲಾಗಿದೆ.
ಕೊರೊನಾದಿಂದಾಗಿ ವಿವಿಗಳ ಎನ್ ಐ ಆರ್ ಎಫ್ ರ್ಯಾಂಕಿಂಗ್ ಮಟ್ಟವನ್ನು 50 ರಿಂದ 100ಕ್ಕೆ ಏರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಎನ್.ಐ.ಆರ್.ಎಫ್ ರ್ಯಾಂಕಿಂಗ್ ಪಟ್ಟಿಯಲ್ಲಿ 100 ರ ಒಳಗಿರುವ ಯಾವ ವಿಶ್ವವಿದ್ಯಾನಿಲಯ ಬೇಕಾದರು ಆನ್ ಲೈನ್ ಕೋರ್ಸ್ ಆರಂಭಿಸಬಹುದಾಗಿದೆ. ಮೈಸೂರು ವಿವಿ ಈಗಾಗಲೇ ಎನ್.ಐ.ಆರ್.ಎಫ್ ರ್ಯಾಂಕಿಂಗ್ ನಲ್ಲಿ 27 ನೇ ಸ್ಥಾನದಲ್ಲಿದ್ದು ಆನ್ ಲೈನ್ ಕೋರ್ಸ್ ಆರಂಭಕ್ಕೆ ಅರ್ಹತೆ ಹೊಂದಿದೆ ಎಂದರು.
ಆನ್ ಲೈನ್ ನಿಂದ ಘನತೆ :
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ವಿವಿಯ ಎಲ್ಲಾ ವಿಭಾಗದ ಮುಖ್ಯಸ್ಥರು ಆನ್ ಲೈನ್ ಪ್ರೊಗ್ರಾಂಗಳಲ್ಲಿ ತಮ್ಮ ವಿಷಯಗಳನ್ನು ಅಳವಡಿಸುವ ಸಂಬಂಧ ಚಿಂತನೆ ನಡೆಸಬೇಕು. ಆನ್ ಲೈನ್ ಪ್ರೊಗ್ರಾಂಗಳ ಆರಂಭದಿಂದ ವಿವಿಯ ಘನತೆಯು ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಮಹದೇವನ್, ಪ್ರೊ.ರಾಮಚಂದ್ರ, ಸಿಡಿಸಿ ನಿರ್ದೇಶಕ ಪ್ರೊ. ಶ್ರೀಕಂಠಸ್ವಾಮಿ, ಪ್ರೊ.ಆರ್.ರಾಜಣ್ಣ,ಪ್ರೊ.ಕೃಷ್ಣಯ್ಯ,ಪ್ರೊ.ಅನಂದ್ ಭಾಗವಹಿಸಿದ್ದರು.
oooo
key words : Mysore-university-online-programme-UGC-permission-granted-academic-council-meeting-UOM