ಮೈಸೂರು,ಫೆಬ್ರವರಿ,12,2022(www.justkannada.in): ರೋಟರಿ ಕ್ಲಬ್ ಮೈಸೂರು ಪಶ್ಚಿಮ ಹಾಗೂ ಸಹಜ ಸಮೃದ್ಧ ಆಶ್ರಯದಲ್ಲಿ ಶನಿವಾರ ಇಲ್ಲಿನ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭವಾದ ಎರಡು ದಿನಗಳ ಗೆಡ್ಡೆ ಗೆಣಸು ಮೇಳವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪೌಷ್ಟಿಕಾಂಶಗಳ ಆಗರವಾಗಿರುವ ಗೆಡ್ಡೆ – ಗೆಣಸುಗಳು, ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅವುಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬೇಕಿದೆ. ನಿಸರ್ಗದತ್ತವಾಗಿ ಬೆಳೆಯುವ ಕಂದಮೂಲಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ರೋಗರುಜಿನಗಳನ್ನು ಎದುರಿಸುವ ಶಕ್ತಿ ಬರುತ್ತದೆ. ನಾವು ತಿನ್ನುವ ಆಹಾರಕ್ಕೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ಮನುಷ್ಯ ಕೃಷಿ ಮಾಡುವ ಮುನ್ನ ಗೆಡ್ಡೆ ಗೆಣಸು ಮನುಕುಲದ ಆಹಾರವಾಗಿದ್ದವು. ಇಂಥ ಗೆಡ್ಡೆ ಗೆಣಸು ನಮ್ಮ ಕೃಷಿ ಸಾಗುವಳಿಯ ಭಾಗವಾಗಬೇಕು ಎಂದು ಅವರು ತಿಳಿಸಿದರು.
ಗೆಡ್ಡೆಗೆಣಸು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ. ವಿಷ್ಣುವರ್ಧನ, ನಮ್ಮ ಪೂರ್ವಿಕರ ಆಹಾರವಾಗಿದ್ದ, ಪೋಷಕಾಂಶಗಳಿಂದ ಸಮೃದ್ಧವಾದ ನೈಸರ್ಗಿಕ ಗೆಡ್ಡೆ ಗೆಣಸುಗಳನ್ನು ಮತ್ತೆ ನಮ್ಮ ಅನ್ನದ ತಟ್ಟೆಗೆ ಬರಮಾಡಿಕೊಳ್ಳಬೇಕು. ಕಾಡಿನ ಗೆಣಸುಗಳನ್ನು ಬೇಯಿಸಿ ತಿನ್ನುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಹಾಸನದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಎಚ್. ಅಮರನಂಜುಂಡೇಶ್ವರ ಮಾತನಾಡಿ, ಹೆಚ್ಚು ಶ್ರಮವಿಲ್ಲದೇ ಬೆಳೆಯಬಹುದಾದ ಕಂದಮೂಲಗಳು ಪ್ರಕೃತಿಯ ಅಮೂಲ್ಯ ಕೊಡುಗೆ. ಸುಲಭವಾಗಿ ಬೆಳೆಯುವ ಗೆಡ್ಡೆ ಗೆಣಸುಗಳತ್ತ ರೈತರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಮನೋಭಾವದಿಂದ ಹೊರಬಂದು, ನಿಸರ್ಗದ ಕಾಣಿಕೆಯಾದ ಗೆಡ್ಡೆ ಗೆಣಸುಗಳನ್ನು ವ್ಯವಸಾಯದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.
ರೊಟೇರಿಯನ್ ಡಾ. ಬಿ. ಚಂದ್ರ, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಸೇರಿದಂತೆ ಇತರರು ಇದ್ದರು.
ಮೇಳದಲ್ಲಿ ಏನಿದೆ?
ಪುತ್ತೂರು, ಶಿರಸಿ, ಜೊಯಿಡಾ, ಮೈಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕುಂದಗೋಳ ಹಾಗೂ ಶಿಗ್ಗಾವಿ ತಾಲ್ಲೂಕಿನ ರೈತರ ಗುಂಪುಗಳು ಬಗೆ ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿವೆ. ವಿವಿಧ ಪ್ರಭೇದಕ್ಕೆ ಸೇರಿರುವ, ವೈವಿಧ್ಯಮಯ ಗಾತ್ರ ಹಾಗೂ ಆಕಾರದ ಗೆಡ್ಡೆ ಗೆಣಸುಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಬುಡಕಟ್ಟು ಸಮುದಾಯಗಳು ಸಂರಕ್ಷಿಸಿಕೊಂಡು ಬಂದಿರುವ ಬೃಹತ್ ಗೆಡ್ಡೆ ಗೆಣಸುಗಳು ಮೇಳದ ಮುಖ್ಯ ಆಕರ್ಷಣೆಯಾಗಿವೆ. ಪರ್ಪಲ್ ಯಾಮ್ನಿಂದ ತಯಾರಿಸಿದ ಐಸ್ಕ್ರೀಮ್, ಬಗೆಬಗೆಯ ಗೆಣಸುಗಳ ತಿಂಡಿತಿನಿಸುಗಳು ಇಲ್ಲಿವೆ. ಎರಡು ದಿನದ ಈ ಮೇಳವು ಬೆಳಗ್ಗೆ 10.30ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ. ಈ ಬಾರಿ 120ಕ್ಕೂ ಹೆಚ್ಚು ವಿವಿಧ ಬಗೆಯ ಗೆಡ್ಡೆ-ಗೆಣಸುಗಳನ್ನು ಸಾರ್ವಜನಿಕರು ಸವಿಯಬಹುದಾಗಿದೆ. ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ-ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆ ಪ್ರದರ್ಶನ ಮತ್ತು ಮಾರಾಟ ಇದೆ.
Key words: mysore university-Prof.G.Hemanth kumar
ENGLISH SUMMARY….
UoM VC Prof. G. Hemanth Kumar flags off ‘Tuber Mela’
Mysuru, February 12, 2022 (www.justkannada.in): Prof. G. Hemanth Kumar, Vice-Chancellor, University of Mysore, today inaugurated the two-day ‘Tuber Mela’ organized by the Rotary Club of Mysore West in association with the Sahaja Samruddhi, at the Nanjaraj Bahaddur Choultry.
In his address, he said, “Tubers are one of the valuable assets given to us by nature. It helps in improving our health and enhances immunity. There is a direct link between the food we consume and our health. Tubers were the only food of human beings before he started doing agriculture. Hence, it should become a part of cultivation.”
Dr. Vishnuvardhan, Dean, Horticultural University, Mysuru, released a calendar on various tubers. In his address, he said, “we need to welcome tubers once again in our daily diet as it was one of the important food of our ancestors, full of nutrition. We should improve our health by consuming more and more tubers.”
Keywords: Tuber Mela/ Prof. G. Hemanth Kumar