ಮೈಸೂರು, ಅ.04, 2019 : (www.justkannada.in news) : ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಪ್ರೊಫೆಸರ್ ಕ್ವಾಟ್ರರ್ಸ್ ನಲ್ಲಿ ಡಕಾಯತಿಯ ವಿಫಲ ಯತ್ನ ಇಂದು ಬೆಳಗ್ಗೆ ನಡೆದಿದ್ದು, ಇದಕ್ಕೆ ಅಡ್ಡಿ ಪಡಿಸಿದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಡಕಾಯಿತರ ತಂಡ ಪರಾರಿಯಾದ ಘಟನೆ ನಡೆದಿದೆ.
ಮಾನಸ ಗಂಗೋತ್ರಿಯ ಪ್ರೊಫೆಸರ್ ಕ್ವಾಟ್ರರ್ಸ್ ಬಳಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ವಿಶ್ವವಿದ್ಯಾನಿಲಯದ ಸೆಕ್ಯೂರಿಟಿ ಗಾರ್ಡ್ ಹೇಮಂತ್ ಕುಮಾರ್ ಎಂಬುವವರು ಗಾಯಗೊಂಡಿದ್ದು ಹಲ್ಲೆಯ ಶಾಕ್ ನಿಂದ ಭಯಭೀತರಾಗಿದ್ದಾರೆ.
ಘಟನೆ ಹಿನ್ನೆಲೆ :
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಾನಸ ಗಂಗೋತ್ರಿ ಕ್ಯಾಂಪಸ್ ಬಳಿಯ ರೀಜನಲ್ ಇನ್ಸ್ ಟಿಟ್ಯೂಟ್ ಆಫ್ ಎಜುಕೇಷನ್ (RIE) ಸಂಸ್ಥೆ ಕಡೆಯಿಂದ 4 ಮಂದಿ ಹೊರ ಬಂದು, ಯೂನಿವರ್ಸಿಟಿ ಕ್ಯಾಂಪಸ್ ನ ತಡೆಗೋಡೆ ಹಾರಿ ಒಳಗೆ ನುಗ್ಗಿತು. ಇದನ್ನು ಕಂಡ ರಾತ್ರಿ ಪಾಳಿಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಹೇಮಂತ್ ಕುಮಾರ್, ಅಪರಿಚಿತರನ್ನು ಪ್ರಶ್ನಿಸಲು ಧಾವಿಸಿದರು. ಅದೇ ವೇಳೆಗೆ ಮತ್ತೊಂದು ಗುಂಪು (ನಾಲ್ಕು ಮಂದಿ) ಗಾರ್ಡ್ ನನ್ನು ಅಟ್ಟಿಸಿಕೊಂಡು ಬಂತು. ಇದನ್ನು ಗಮನಿಸಿದ ಹೇಮಂತ್ ಕುಮಾರ್, ಜೀವ ಭಯದಿಂದ ಸಹಾಯಕ್ಕಾಗಿ ಜೋರಾಗಿ ಕೂಗಿದರು. ಸಮೀಪದಲ್ಲಿ ಪರೀಕ್ಷಾಂಗ ಕುಲಸಚಿವ ಕೆ.ಎಂ.ಮಹಾದೇವನ್ ಅವರ ವಸತಿಗೃಹವಿತ್ತು. ಗಾರ್ಡ್ ಕೂಗಾಟ ಕೇಳಿ ಮಹಾದೇವನ್ ಹಾಗೂ ಅಕ್ಕಪಕ್ಕದ ಮನೆಯವರು ಲೈಟ್ ಆನ್ ಮಾಡಿದರು. ಇದನ್ನು ಗಮನಿಸಿದ 8 ಮಂದಿಯ ತಂಡ ಅಪಾಯದ ಮುನ್ಸೂಚನೆ ಅರಿತು ಅಲ್ಲಿಂದ ಕಾಲ್ಕಿತ್ತರು.
ಈ ಘಟನೆ ಬಗ್ಗೆ ಜಸ್ಟ್ ಕನ್ನಡ.ಡಾಟ್ ಇನ್ ಜತೆ ಮಾತನಾಡಿದ ಪರೀಕ್ಷಾಂಗ ಕುಲಸಚಿವ ಕೆ.ಎಂ.ಮಹಾದೇವನ್ ಹೇಳಿದಿಷ್ಟು…
ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಈ ರೀತಿಯಾದ ಕಳ್ಳತನ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಸೂಕ್ತ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸುವ ಅವಶ್ಯಕತೆ ಇದೆ. ಅದರಲ್ಲೂ ಎಕ್ಸ್-ಸರ್ವಿಸ್ ಮನ್ ಗಳನ್ನು ನಿಯೋಜಿಸುವುದು ಸೂಕ್ತ. ನಿವೃತ್ತ ಸೈನಿಕರಾದರೆ ಅವರ ಬಳಿ ಆಯುಧವಿರುತ್ತದೆ, ಜತೆಗೆ ಅದನ್ನು ಬಳಸುವುದು ಸುಲಭವಾಗುತ್ತದೆ. ಆದರೆ ಕೇವಲ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಿದರೆ ಅವರಿಗೆ ಯಾವುದೇ ಆಯುಧಗಳಿಲ್ಲದೆ ಕಾವಲು ಕಾಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕ್ಯಾಂಪಸ್ ನಲ್ಲಿ ನೂರಾರು ಗಂಧದ ಮರಗಳಿವೆ. ಈ ಮರಗಳನ್ನು ಕದಿಯುವ ಸಲುವಾಗಿಯೇ ಇಂಥ ತಂಡಗಳು ಆಗಾಗ್ಗೆ ಇಲ್ಲಿ ದಾಳಿ ಮಾಡುತ್ತಿರುತ್ತವೆ. ಆದ್ದರಿಂದ ಅರಣ್ಯ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಏಕೆಂದ್ರೆ ಶ್ರೀಗಂಧದ ಮರಗಳ ರಕ್ಷಣೆಗೆ ಫಾರೆಸ್ಟ್ ಡಿಪಾರ್ಟ್ ಮೆಂಟ್ ಇದೆ. ಆದರೆ ಅಲ್ಲಿ ವಾಸಿಸುವ ನಿವಾಸಿಗಳ ಜೀವ ರಕ್ಷಣೆ ಯಾರ ಹೊಣೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಅಂಬ್ಯೂಲೆನ್ಸ್ ವ್ಯವಸ್ಥೆ, ರಾತ್ರಿ ಪಾಳಿಯಲ್ಲಿ ವೆಪನ್ಸ್ ಸಹಿತ ಗಾರ್ಡ್ ಗಳ ಪ್ಯಾಟ್ರೋಲಿಂಗ್ ಪದ್ಧತಿ ಜಾರಿಗೊಳಿಸುವ ಮೂಲಕ ಇಂಥ ಅವಘಡಗಳಿಗೆ ಕಡಿವಾಣ ಹಾಕಬಹುದು ಎಂದರು.
——
key words : mysore-uiniversity-docaithy-campus-uom-police