ಮೈಸೂರು, ಜ.೦೩, ೨೦೨೩ : (www̤.justkannada̤.in news) : ಅರೆಕಾಲಿಕ ಹುದ್ದೆಗಳಲ್ಲಿ ನೇಮಕಗೊಂಡಿರುವ ಬೋಧಕೇತರ ಸಿಬ್ಬಂದಿಗಳ ಹುದ್ದೆಗೆ ಸಂಬಂಧಿಸಿದಂತೆ ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಸಿಂಟಿಕೇಟ್ ಸಭೆ, ಯಾವುದೇ ನಿರ್ಣಯಕ್ಕೆ ಬಂದಿಲ್ಲ.
ಕುಲಪತಿ ಪ್ರೊ.ಲೋಕನಾಥ್ ಅಧ್ಯಕ್ಷತೆಯಲ್ಲಿ ಇಂದು ವಿಶೇಷ ಸಿಂಡಿಕೇಟ್ ಸಭೆ ಆಯೋಜಿಸಲಾಗಿತ್ತು. ವಿವಿಯಲ್ಲಿನ ಬೋಧಕೇತರ ಸಿಬ್ಬಂದಿಗಳ ಹುದ್ದೆ ನೇಮಕಾತಿ ಸಂಬಂಧ ತೀರ್ಮಾನ ಕೈಗೊಳ್ಳುವ ಸಲುವಾಗಿ ಈ ಸಭೆ ನಡೆಸಲಾಯಿತು. ಆದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಸಭೆ ಬರಲಾಗಲಿಲ್ಲ.
ಬೋಧಕೇತರ ಸಿಬ್ಭಂದಿ ನೇಮಕ ಪ್ರಶ್ನಿಸಿ ಸರಕಾರ ಸೂಕ್ತ ಕ್ರಮಕ್ಕೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿತ್ತು. ೪೦೦ ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿಗಳ ಅಳಿವು -ಉಳಿವಿನ ಪ್ರಶ್ನೆಇದಾಗಿತ್ತು.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಕುಲಪತಿ ಪ್ರೊ.ಲೋಕನಾಥ್, ಸಿಂಡಿಕೇಟ್ ಸಭೆಯಲ್ಲಿ ಬೋಧಕೇತರ ಸಿಬ್ಬಂಧಿಗಳ ನೇಮಕಾತಿ ಸಂಬಂಧ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಬದಲಿಗೆ ಸಮಿತಿ ರಚಿಸಿ ಅದರ ವರದಿ ಆಧಾರಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ.
ಲೈವ್ ಗೆ ಕ್ರಮ ವಹಿಸಿ : ಸಿಂಡಿಕೇಟ್ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವಂತೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಸಭೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಉದ್ಧೇಶ. ಆದರೆ ಮೈಸೂರು ವಿವಿಯಲ್ಲಿ ಕಳೆದ ಕೆಲ ಸಭೆಗಳಿಂದ ಲೈವ್ ಸ್ಟ್ರೀಮ್ ಸ್ಥಗಿತಗೊಂಡಿದೆ. ಇದಕ್ಕೆ ತಾಂತ್ರಿಕ ದೋಷ ಕಾರಣವೋ ಅಥವಾ ಬೇರೆ ಕಾರಣವೋ ತಿಳಿಯುತ್ತಿಲ್ಲ. ಸಂಬಂಧಪಟ್ಟವರು ಮುಂದಿನ ಸಭೆಯಲ್ಲಿ ಈ ಬಗ್ಗೆ ಅಗತ್ಯ ಕ್ರಮ ಜರುಗಿಸುವ ವಿಶ್ವಾಸ ಹೊಂದಿರುವುದಾಗಿ ಬಿಜೆಪಿ ಮುಖಂಡ, ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್ ಗೌಡ ಹೇಳಿದರು.
Key words : mysore university -syndicate meeting -non teaching staff