ಮೈಸೂರು,ಅಕ್ಟೊಬರ್,07,2020 : ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಂತಾರಾಷ್ಟ್ರೀಯ ತೆರಿಗೆಯಲ್ಲಿ ಸಮಾನತೆ ತರುವುದು ಬಹಳ ಅಗತ್ಯವಾಗಿದೆ. ಈ ಕಾರ್ಯ ಸಾಧನೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಮೈಸೂರು ವಿವಿ ಮಂಡ್ಯ ಅರ್ಥಶಾಸ್ತ್ರ ವಿಭಾಗ ಸರ್ ಎಂ.ವಿ.ಸ್ನಾತಕೋತ್ತರ ಕೇಂದ್ರದ ವತಿಯಿಂದ ‘‘ಅಂತಾರಾಷ್ಟ್ರೀಯ ತೆರಿಗೆಯಲ್ಲಿ ಸಮಾನತೆ ತರುವುದು ಹಾಗೂ ಆ ಮೂಲಕ ಸುಸ್ಥೀರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು’’ ವಿಷಯ ಕುರಿತು ಆಯೋಜಿಸಿದ್ದ ಅಂತಾರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ತೆರಿಗೆಯಲ್ಲಿ ಸಮಾನತೆ ಜಾರಿಗೊಳಿಸುವುದು ಹೇಗೆ? ಆ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಹೇಗೆ? ಎಂಬಿತ್ಯಾದಿಯಾಗಿ ಚರ್ಚಿಸುವುದು ಬಹಳ ಅಗತ್ಯವಾಗಿದೆ ಎಂದರು.
ಅಂತಾರಾಷ್ಟ್ರೀಯ ತೆರಿಗೆಯಲ್ಲಿ ಸಮಾನತೆ ತರುವುದಕ್ಕೆ ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಏನನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಅರಿಯಬೇಕಿದೆ. ಅಂತಾರಾಷ್ಟ್ರೀಯ ತೆರಿಗೆ ಸಮಸ್ಯೆಯು ಬಹುತೇಕರಿಗೆ ಗೊತ್ತಿಲ್ಲ. ಸರಕಾರಕ್ಕೂ ಈ ಸಮಸ್ಯೆಯ ಅರಿವಿಲ್ಲ. ಈ ಕುರಿತು ಅಂತಾರಾಷ್ಟ್ರೀಯ ಸಂಸ್ಥೆಗಳು ಸಂಘಟನೆಯಾಗುವ ಮೂಲಕ ಈ ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಜೆನೆವಾ ದಕ್ಷಿಣ ಕೇಂದ್ರ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕಾರ್ಲೊಸ್ ಕೊರೀಯಾ ಅವರು ಮಾತನಾಡಿ, ಅಂತಾರಾಷ್ಟ್ರೀಯ ತೆರಿಗೆ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಹೊಸ ಮಾದರಿಯಲ್ಲಿ ಸಂಘಟನೆಯಾಗಬೇಕಿದೆ. ಎಲ್ಲಾ ದೇಶಗಳಿಗೂ ಅನುಕೂಲವಾಗುವಂತಹ ರೀತಿಯಲ್ಲಿ ಕಾರ್ಯೋನ್ಮುಖರಾಗಬೇಕು. ಯಾವ ದೇಶಕ್ಕೂ ತೆರಿಗೆ ಹೊರೆಯಾಗಬಾರದು. ಆ ರೀತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಹೇಳಿದರು.
ವೆಬಿನಾರ್ನಲ್ಲಿ ಭಾರತೀಯ ಆರ್ಥಿಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಬಿ.ಪಿ.ಚಂದ್ರಮೋಹನ್, ಮುಖ್ಯ ಸಂಯೋಜಕ ಡಾ.ಅನಿಲ್ ಕುಮಾರ್ ಠಾಕೂರ್, ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಆರ್.ಉಮಾ, ಐಈಎ ಕಾರ್ಯನಿರ್ವಾಹಕ ಸದಸ್ಯ ಡಾ.ನಾಶೀರ್ ಖಾನ್, ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಪ್ರೊ.ಕೆ.ಶಿವಚಿತ್ತಪ್ಪ, ಪ್ರೊ.ಜಿ.ಎಸ್.ಪ್ರೇಮ್ ಕುಮಾರ್ ಇತರರು ಹಾಜರಿದ್ದರು.
Home Front Page ಅಂತಾರಾಷ್ಟ್ರೀಯ ತೆರಿಗೆ ಸಮಾನತೆಯಿಂದ ಅಭಿವೃದ್ಧಿ ಸಾಧ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್