ಬೆಂಗಳೂರು,ಸೆಪ್ಟಂಬರ್,12,2023(www.justkannada.in): ಪ್ರತಿಷ್ಟಿತ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಎನ್.ಕೆ. ಲೋಕನಾಥ್ ನೇಮಕ ಆದೇಶವನ್ನ ರದ್ದುಪಡಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಹುದ್ದೆಗೆ ಪ್ರಾಧ್ಯಾಪಕ ಎನ್.ಕೆ. ಲೋಕನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ (ರಾಜ್ಯಪಾಲರು) ಹೊರಡಿಸಿದ್ದ ಆದೇಶವನ್ನ ಹೈಕೋರ್ಟ್ ನ್ಯಾಯಮೂರ್ತಿ ಎನ್. ಎಸ್. ಸಂಜಯ್ ಗೌಡ ಅವರ ಪೀಠ ರದ್ದುಪಡಿಸಿದೆ. ಅಲ್ಲದೆ, ನಿಯಮಾವಳಿಗಳನ್ನು ಅನುಸರಿಸಿ ಹೊಸದಾಗಿ ಕುಲಪತಿ ಹುದ್ದೆಗೆ ನೇಮಕಾತಿ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿದೆ.
ಈ ಹಿಂದಿನ ಕಾಯಂ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತಕುಮಾರ್ ಅವರ ಅಧಿಕಾರದ ಅವಧಿ 2022ರ ನ.15ರಂದು ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಪ್ರೊ.ಎಚ್.ರಾಜಶೇಖರ್ ನವೆಂಬರ್ 18ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರ ಬಳಿಕ ಪ್ರೊ.ಮುಜಾಫರ್ ಅಸ್ಸಾದಿ ಫೆಬ್ರವರಿ 18ರಂದು ಅಧಿಕಾರ ಸ್ವೀಕರಿಸಿದ್ದರು. ಈ ನಡುವೆ ವಿಶ್ವವಿದ್ಯಾಲಯದ ಯೋಜನೆ, ಉಸ್ತುವಾರಿ ಹಾಗೂ ಮೌಲ್ಯಮಾಪನ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಲೋಕನಾಥ್ ಅವರನ್ನು ಮೈಸೂರು ವಿವಿ ಕುಲಪತಿಯಾಗಿ ಸರ್ಕಾರವು ನೇಮಿಸಿತ್ತು.
ಲೋಕನಾಥ್ ಅವರ ನೇಮಕ ಪ್ರಶ್ನಿಸಿ ಪ್ರೊ.ಶರತ್ ಅನಂತಮೂರ್ತಿ ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ಲೋಕನಾಥ್ ಅವರ ನೇಮಕಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಮೈಸೂರು ವಿವಿ ಕುಲಪತಿ ಲೋಕನಾಥ್ ನೇಮಕ ರದ್ದುಗೊಳಿಸಿದ ಹೈಕೋರ್ಟ್, ಹೊಸ ಪ್ಯಾನಲ್ ರಚಿಸಿ ಹೊಸದಾಗಿ ಕುಲಪತಿಯವರ ನೇಮಕ ಮಾಡಬೇಕೆಂದು ತೀಪು೯ ನೀಡಿದೆ. ಅಲ್ಲಿಯವರೆಗೆ ಹಂಗಾಮಿ ಕುಲಪತಿಯವರನ್ನು ನೇಮಕ ಮಾಡುವಂತೆ ಸಹ ನೀರ್ದೆಶನ ನೀಡಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪ್ರೊ.ಶಶಿಧರ ಪ್ರಸಾದ್ ನೇಮಕ ಸಹ ಇದೇ ರೀತಿ ರದ್ದಾಗಿತ್ತು. ಪ್ರೊ.ಶಶಿಧರ ಪ್ರಸಾದ್ ಲೋಕನಾಥ್ ಅವರಿಗೆ ಸಂಶೋದನಾ ಮಾರ್ಗದರ್ಶಕರಾಗಿದ್ದರು. ಇದೀಗ ಅವರ ಶಿಷ್ಯ ಡಾ.ಲೋಕನಾಥ್ ಅವರು ಸಹ ಕುಲಪತಿ ಹುದ್ದೆ ಕಳೆದುಕೊಂಡಿರುವುದು ಕಾಕತಾಳೀಯ.
-V.Mahesh kumar
Key words: Mysore University –VC- N Loknath- appointment –order-cancel-High Court