ಮೈಸೂರು,ಫೆಬ್ರವರಿ,21,2022(www.justkannada.in): ಈ ಕೆಲವು ಸಂಶೋಧನಾ ಕೃತಿಗಳು ಸಂಶೋಧನಾಸಕ್ತರಿಗೆ ಅದರಲ್ಲಿಯೂ ಮುಖ್ಯವಾಗಿ ಯುವ ಸಂಶೋಧಕರಿಗೆ ಮಾರ್ಗಸೂಚಿಗಳಾಗಬಲ್ಲವು. ಡಾ.ಹಾ.ತಿ.ಕೃಷ್ಞೇಗೌಡ ಅವರ ಕೃತಿಗಳ ಅಧ್ಯಯನದಿಂದ ಸಂಶೋಧಕರು ತಮ್ಮ ಸಂಶೋಧನೆಯ ಹಾದಿಯನ್ನು ಖಚಿತಪಡಿಸಿಕೊಳ್ಳಬಹುದೆಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ಪಟ್ಟರು.
ಅಂಕುರ (ಸಾಹಿತ್ಯ ಬಳಗ) ಮೈಸೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅದ್ಯಯನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಹಾ.ತಿ.ಕೃಷ್ಣೇಗೌಡ ಅವರ 6 ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆಧುನಿಕ ಸಂಶೋಧನೆಯ ಪರಂಪರೆ ಸಾಕಷ್ಟು ಸುಧೀರ್ಘವಾಗಿದೆ. ಡಾ.ಶ್ರೀನಿವಾಸ ಹಾವನೂರ್, ಡಾ.ರಾ.ಯ.ಧಾರವಾಡಕರ, ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಮುಂತಾದ ಮಹನೀಯರು ಈ ಕ್ಷೇತ್ರವನ್ನು ವಿಸ್ತರಿಸಿದ್ದಾರೆ. ಇದೇ ಹಾದಿಯಾಗಿ ಬಂದ ಕೃಷ್ಣೇಗೌಡರು ಮರೆತುಹೋದ ಮಹನೀಯರನ್ನು ಮತ್ತೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಇವರ ಕೆಲವು ಸಂಶೋಧನಾ ಕೃತಿಗಳು ಸಂಶೋಧನಾಸಕ್ತರಿಗೆ ಅದರಲ್ಲಿಯೂ ಮುಖ್ಯವಾಗಿ ಯುವ ಸಂಶೋಧಕರಿಗೆ ಮಾರ್ಗಸೂಚಿಗಳಾಗಬಲ್ಲವು ಎಂದು ತಿಳಿಸಿದರು.
ವಾಸ್ತವವಾಗಿ ಸಂಶೋಧನೆ ಎನ್ನುವುದು ಪಾಶ್ಚಾತ್ಯ ವಿದ್ವಾಂಸರು ತೋರಿಸಿಕೊಟ್ಟ ಮಾರ್ಗದಲ್ಲಿ ರೂಪಗೊಂಡ ಒಂದು ಶೈಕ್ಷಣಿಕ ಶಿಸ್ತು’ ಎಂಬ ಮಾತಿದೆ. ಸಂಶೋಧನೆ ಎಂದರೆ ಬೇರುಗಳ ಹುಡುಕಾಟ, ಹೊಸ ಹೊಳಹುಗಳನ್ನು ನೀಡುವುದು ಎಂದರೆ ಶೋಧಿಸುವುದು ನಿಜವಾದ ಸಂಶೋಧನೆ. ಈಗಲೂ ಡಾ.ಹಾ.ತಿ.ಕೃಷ್ಞೇಗೌಡ ಅವರು ಮೈಸೂರು ವಿವಿ ಕನ್ನಡ ವಿಶ್ವಕೋಶದಲ್ಲಿ ಗೌರವ ಸಂಪಾದಕರಾಗಿ ಪರಿಷ್ಕೃತ ಮತ್ತು ಯೋಜನೆಯ ಕೆಲಸ ಮಾಡುತ್ತಿದ್ದಾರೆ. ಇವರ ನೇತೃತ್ವದಲ್ಲಿ ಈಗಾಗಲೇ ಹಲವು ಸಂಪುಟಗಳು ಪ್ರಕಟಗೊಂಡಿದ್ದು, ಉಳಿದ ಸಂಪುಟಗಳು ಮುಂದಿನ ಎರಡು ತಿಂಗಳಿನಲ್ಲಿ ಪ್ರಕಟಗೊಳ್ಳಲಿವೆ ಎಂದು ಭರವಸೆ ನೀಡಿದರು.
ಇಂಗ್ಲೀಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಿ.ಎ.ಶಂಕರ್ ಮಾತನಾಡಿ, ಮತಾಂತರ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸ್ವೇಚ್ಛೆ ಹಾಗೂ ಬಲವಂತದಿಂದ ಇದು ಆಗಬಹುದು. ಮತಾಂತರ ನಮ್ಮ ದೇಶದಲ್ಲಿ ಮಾತ್ರ ಇಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಇದೆ. ಮತಾಂತರ ವಿಷಯ ಗೋಚಲು ಇದ್ದಂತೆ. ಬಿಡಿಸಲು ಆಗುವುದಿಲ್ಲ. ಮತಾಂತರ ಆದಾಗ ಕೇವಲ ಮನೆಯಲ್ಲಿ ಅಲ್ಲ. ಸಮಾಜದಲ್ಲೂ ಕ್ಷೋಭೆ ಉಂಟಾಗುತ್ತದೆ. ಆಮಿಷಕ್ಕೆ ಬಲಿಯಾಗುವವರ ಸಂಖ್ಯೆಯೇ ಹೆಚ್ಚು. ಈರಾರು ಪತ್ರಿಕೆ ಈ ವಾಸ್ತವವನ್ನು ಎತ್ತಿ ಹಿಡಿದಿದೆ ಎಂದರು.
ಸಂಸ್ಥೆ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್, ಅಂಕುರ ಪ್ರಕಾಶನದ ಪ್ರಕಾಶಕ ಓಂಕಾರಪ್ಪ, ಹಾಲತಿ ಲೋಕೇಶ್, ಹಾಲತಿ ಸೋಮಶೇಖರ್, ಸಾಹಿತಿ ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ಸಿ.ನಾಗಣ್ಣ, ಡಾ.ಯೋಗಣ್ಣ, ಲೇಖಕ ಹಾ.ತಿ.ಕೃಷ್ಣಗೌಡ ಹಾಜರಿದ್ದರು.
Key words: mysore university- VC- Prof.G.Hemanth Kumar