ಮೈಸೂರು,ಫೆಬ್ರವರಿ,23,2022(www.justkannada.in): ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಇಂಡಸ್ಟ್ರಿ 4.0 ಡ್ರೋನ್ ಗಳನ್ನು ಪರಿಚಯಿಸುವ AKAM ವೆಬ್ ಸರಣಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ವರ್ಚುವಲ್ ಮಾದರಿಯಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮೈಸೂರು ವಿಶ್ವವಿದ್ಯಾನಿಲಯವು “ಇಂಡಸ್ಟ್ರಿ 4.0” ಎಂಬ ಶೀರ್ಷಿಕೆಯ ವೆಬ್ ಸರಣಿಯನ್ನು ಐಡಿಯಾಸ್@75 ಅಡಿಯಲ್ಲಿ ಪ್ರಾರಂಭಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. 75 ವರ್ಷದ ಆಜಾದಿ ಅಮೃತ ಮಹೋತ್ಸವ ಪ್ರಯುಕ್ತ ನವ ಭಾರತದ ಪರಿಕಲ್ಪನೆಗೆ ಪೂರಕವಾಗಿ ಈ ವೆಬ್ ಸಿರೀಸ್ ಕೆಲಸ ಮಾಡಲಿದೆ. ಹೊಸ ಹೊಸ ಐಡಿಯಾಗಳು ದೇಶದ ಪ್ರಗತಿಗೆ ಸಹಕಾರಿ. ಈ ಸರಣಿಯು ರಾಷ್ಟ್ರದ ಪ್ರಗತಿಗೆ ತಂತ್ರಜ್ಞಾನವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ.
ವಿವಿಧ ಕ್ಷೇತ್ರದಲ್ಲಿನ ತಂತ್ರಜ್ಞಾನದ ಬೆಳವಣಿಗೆ ಮತ್ತು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಚರ್ಚಿಸಲು ಈ ವೆಬ್ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಕೆಲಸವನ್ನು ಸುಗಮ ಹಾಗೂ ಸುಲಭಗೊಳಿಸಲು ಇದು ನೆರವು ನೀಡುತ್ತದೆ. ಪ್ರಖ್ಯಾತ ಭಾಷಣಕಾರರು ತಮ್ಮ ಪ್ರಾಯೋಗಿಕ ಅನುಭವದೊಂದಿಗೆ ಮಾತನಾಡುತ್ತಾರೆ ಮತ್ತು ಜನರೊಂದಿಗೆ ತಂತ್ರಜ್ಞಾನವು ಹೇಗೆ ರಾಷ್ಟ್ರವನ್ನು ಪ್ರಗತಿಯ ಸ್ಥಿರ ಪಥದಲ್ಲಿ ಇರಿಸಬಹುದು ಎಂಬುದನ್ನು ಚರ್ಚಿಸುತ್ತಾರೆ ಎಂದರು.
75 ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಲಿಯೋ ಪೀಟರ್ ಚಾರ್ಲ್ಸ್, ದೆಹಲಿಯ ವೈರಿಯಸ್ ಡ್ರೋನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ನಿಶಾಂತ್ ಸಿಂಗ್ ರಾಣಾ, ಬೆಂಗಳೂರಿನ ನೇವಿಫ್ಲೈ ಏರೋಸ್ಪೇಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಯಶೋಧನ್ ನಾಯ್ಕ್ ಸೇರಿದಂತೆ ಇತರರು ಆನ್ಲೈನ್ ಮೂಲಕ ಹಾಜರಿದ್ದರು. ಮೈಸೂರು ವಿವಿ ವಿಶೇಷಾಧಿಕಾರಿ ಡಾ.ಚೇತನ್ ಇದ್ದರು.
Key words: mysore university-VC- Prof. G Hemanth Kumar