ಮೈಸೂರು,ಸೆಪ್ಟೆಂಬರ್,25,2020(www.justkannada.in): ಥಾಮಸ್ ಹಂಟ್ ಮೊರ್ಗಾನ್ ಮಾನವಕುಲವನ್ನು ಪುರಾಣ ಮತ್ತು ಪೂರ್ವಾಗ್ರಹಗಳಿಂದ ಮುಕ್ತಗೊಳಿಸಲು ಬಯಸಿದ್ದು, ಜೀವಶಾಸ್ತ್ರಕ್ಕೆ ಅವರ ಕೊಡುಗೆ ಅಮೂಲ್ಯವಾದುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ಮತ್ತು ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘’ಥಾಮಸ್ ಹಂಟ್ ಮೊರ್ಗಾನ್ ಅವರ 154 ನೇ ಜನ್ಮದಿನಾಚರಣೆ’’ ಕುರಿತಂತೆ ವೆಬಿನಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಥಾಮಸ್ ಹಂಟ್ ಮೊರ್ಗಾನ್ ಅವರ ಅನುವಂಶಿಕ ಪ್ರಸರಣದಲ್ಲಿ ವರ್ಣತಂತುಗಳ ಕಾರ್ಯಕ್ಕೆ ಸಂಬಂಧಿಸಿದ ಆವಿಷ್ಕಾರಗಳಿಗಾಗಿ 1933ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉತ್ತಮ ಹಾಸ್ಯ ಪ್ರಜ್ಞೆಯ, ಆಡಂಬರವಿಲ್ಲದ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದ ಉದಾತ್ತ ವ್ಯಕ್ತಿತ್ವದವರಾಗಿದ್ದು, ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಸ್ಮರಿಸಿದರು.
ಮೈಸೂರು ವಿವಿ ವಿಶೇಷ ಪ್ರಾಧ್ಯಾಪಕ ಪ್ರೊ.ಎಚ್.ಎ.ರಂಗನಾಥ್ ಅವರು ಮಾತನಾಡಿ, ‘’ಮೊರ್ಗಾನ್ ಮತ್ತು ಅವರ ಪರಂಪರೆ’’ ವಿಷಯ ಕುರಿತು ಥಾಮಸ್ ಹಂಟ್ ಮೊರ್ಗಾನ್ ಅವರು ಬಾಲ್ಯದಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸ್ಟೇಟ್ ಕಾಲೇಜು(ಕೆಂಟುಕಿ ವಿವಿ)ಯಿಂದ ಸ್ನಾತಕೋತ್ತರ ಪದವಿ ಪಡೆದರು. ಸಮುದ್ರ ಜೇಡಗಳ ಭ್ರೂಣಶಾಸ್ತ್ರದ ಸಂಶೋಧನೆಗೆ ಜಾನ್ಸ್ ಹಾಪ್ಕಿನ್ಸ್ ವಿವಿಯಿಂದ ಪಿಎಚ್.ಡಿ ಪಡೆದುಕೊಂಡರು ಎಂದು ವಿವರಿಸಿದರು.
ಪುನರುತ್ಪಾದನೆ, ಪ್ರಾಯೋಗಿಕ ಪ್ರಾಣಿಶಾಸ್ತ್ರ, ಅನುವಂಶಿಕತೆ ಮತ್ತು ಲೈಂಗಿಕತೆ ಹಾಗೂ ವಿಕಸನದ ಸಿದ್ಧಾಂತದ ವಿಮರ್ಶೆ, ಅನುವಂಶಿಕತೆಯ ಭೌತಿಕ ಅಡಿಪಾಯಗಳು, ಡ್ರೊಸೊಫಿಲಾ ಫ್ಲೈನ್ ಜೆನೆಟಿಕ್ಸ್, ದಿ ಥಿಯರಿ ಆಫ್ ದಿ ಜೀನ್ ಮೊರ್ಗಾನ್ ಅವರ ಪ್ರಮುಖ ಕೃತಿಗಳಾಗಿವೆ ಎಂದು ಮಾಹಿತಿ ನೀಡಿದರು.
ಅವರ ಪ್ರತಿಭೆ ಗುರುತಿಸಿ ಪ್ಲೈಸ್ ಲಾರ್ಡ್ ಎಂಬ ಬಿರುದನ್ನು ನೀಡಲಾಗಿದ್ದು, ತಮ್ಮ ಪ್ರಯೋಗಗಳ ವಸ್ತುವಾಗಿ ಹಣ್ಣಿನ ನೊಣಗಳನ್ನು ಆರಿಸಿದರು. ಇದು ಮುಂದೆ ತಳಿಶಾಸ್ತ್ರಜ್ಞರಿಗೆ ಸಹಾಯಕವಾಯಿತು ಎಂದು ತಿಳಿಸಿದರು.
ಬೆಂಗಳೂರು ಐಐಎಸ್ ಸಿ, ಸಂತಾನೋತ್ಪತ್ತಿ, ಅಭಿವೃದ್ಧಿ ಮತ್ತು ತಳಿಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಉಪೇಂದ್ರ ನಾಂಗ್ಥೊಂಬಾ ಅವರು ಡ್ರೊಸೊಫಿಲಾದ ಸಂಕ್ಷಿಪ್ತತೆ ಮತ್ತು ಆನುವಂಶಿಕ ಸಂಶೋಧನೆಗೆ ಕೊಡುಗೆಗಳು ಕುರಿತು ಮಾತನಾಡಿದರು.
ಯುಜಿಸಿ-ಬಿಎಸ್ ಆರ್ ಅಧ್ಯಾಪಕ ಪ್ರೊ.ಎನ್.ಬಿ.ರಾಮಚಂದ್ರ, ಪ್ರಾಣಿಶಾಸ್ತ್ರ ಮತ್ತು ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ವಿಭಾಗದ ಅಧ್ಯಕ್ಷ ಡಾ.ಸುತ್ತೂರು ಮಾಲಿನಿ, ವಿಜ್ಞಾನ ಭವನ ಕಾರ್ಯಕ್ರಮ ಸಂಯೋಜನಕಾಧಿಕಾರಿ ಚಂದ್ರನಾಯಕ ಸೇರಿದಂತೆ ಅನೇಕರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.
key words: mysore university-vebinar-T.H. Morgan -inspirational-VC- Prof. G. Hemant Kumar