ಮೈಸೂರು, ಅ.03, 2020 : (www.justkannada.in news) : ನಾನು ಮೊದಲಿಗೆ ಭಾರತೀಯ, ವಿಜ್ಞಾನಿ, ವಿಶ್ರಾಂತ ಕುಲಪತಿ, ರಸಾಯನಶಾಸ್ತ್ರ..ಎಲ್ಲವೂ ನಂತರದ್ದು. ನನ್ನ ದೇಶದ ನಿಲುವೇ ನನ್ನ ನಿಲುವು. ಇದಕ್ಕೆ ವಿರುದ್ಧವಾಗಿ ನಾನೆಂದು ಹೋಗೆನು ಎಂದು ಪ್ರೊ.ಕೆ.ಎಸ್.ರಂಗಪ್ಪ ಸ್ಪಷ್ಟಪಡಿಸಿದರು.
ಕೇಂದ್ರ ಸರಕಾರ ನೀಡಿರುವ ವಿವಿಧ ಹುದ್ದೆಗಳ ಜವಾಬ್ದಾರಿ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಲು ಶನಿವಾರ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಚೀನಾ ಜತೆಗಿನ ಒಡಂಬಡಿಕೆ, ಸಂಶೋಧನೆ ಬಗೆಗೆ ಪ್ರಶ್ನಿಸಲಾಯಿತು.
ಆಗ, ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವ ಸಲುವಾಗಿ ಚೀನಾ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ 400 ಕೋಟಿ ರೂ.ಗಳ ಅನುದಾನವನ್ನು ಚೀನಾ ನೀಡಿತ್ತು. ಇನ್ನೇನು ಈ ಯೋಜನೆ ಕಾರ್ಯಗತವಾಗಬೇಕು ಎನ್ನುವಷ್ಟರಲ್ಲಿ ಕೋವಿಡ್ ಎದುರಾಯಿತು. ಆಗ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಯೋಜನೆಗಳ ಬಗ್ಗೆ ಹಲವಾರು ಸುತ್ತು ಮಾತುಕತೆ ನಡೆಸಿದೆವು. ಆದರೆ ಆನಂತರ ಭಾರತ ಹಾಗೂ ಚೀನಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಭಣಿಸಿದ್ದರಿಂದ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದರು.
ಒಂದೊಮ್ಮೆ ಚೀನಾ ದೇಶವೇ ಸಂಶೋಧನೆ ಕಾರ್ಯರಂಭಕ್ಕೆ ಆಹ್ವಾನಿಸಿ, ಭಾರತ ಅದಕ್ಕೆ ಸಮ್ಮತಿಸದಿದ್ದರೆ ಏನು ಮಾಡುವಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರೊ.ರಂಗಪ್ಪ, ಮೊದಲು ನನಗೆ ದೇಶ ಮುಖ್ಯ. ಉಳಿದದ್ದು ನಂತರ. ನನ್ನ ದೇಶದ ನಿಲುವೆ ನನ್ನದು ಎಂದು ಸ್ಪಷ್ಟಪಡಿಸಿದರು.
* ಕೋವಿಡ್ 19 ಕುರಿತು ಪ್ರೊ. ರಂಗಪ್ಪ ಹೇಳಿದಿಷ್ಟು…
ಕೊರೊನಾ ವೈರಸ್ ಅಷ್ಟೇನು ನಟೋರಿಯಸ್ ಅಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದನ್ನು ಮೊದಲು ನಿಲ್ಲಿಸಬೇಕು. ಈ ಹಿಂದೆ ಕಾಣಿಸಿಕೊಂಡಿದ್ದ ಸಾರ್ಸ್, ಎಬೋಲಾ ದಷ್ಟು ಕೊರೊನಾ ಭೀಕರವಾಗಿಲ್ಲ. ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ ಅಷ್ಟೇ.
ಯಾರಿಗೇ ಹೃದಯ ಸಂಬಂಧಿ ಕಾಯಿಲೆ ಇರುತ್ತದೆಯೋ ಅಂತಹವರಿಗೆ ಕರೋನಾ ವೈರಸ್ ತಗುಲಿದ ಸಂದರ್ಭದಲ್ಲಿ ಚಿಕಿತ್ಸೆ ನೀಡುವಾಗ ಸ್ವಲ್ಪ ಕಷ್ಟವಾಗುತ್ತದೆ. ಇನ್ನು ಚಿಕಿತ್ಸೆಗೆ ಸಂಬಂಧಿಸಿದಂತೆ, ಎಲ್ಲಾ ದೇಶಗಳಲ್ಲೂ ಕೊರೊನಾ ವೈರಸ್ ಗೆ ವ್ಯಾಕ್ಸಿನ್ ಕಂಡುಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಆದರೆ ಬೇರೆ ಬೇರೆ ದೇಶಗಳ ಜನರ ಜೈವಿಕ ಸ್ಥಿತಿ ಬೇರೆ ಬೇರೆಯಾಗಿರುವ ಕಾರಣ ಒಮ್ಮತದ ಔಷಧಿ ಕಂಡು ಹಿಡಿಯಲು ವಿಳಂಬವಾಗಿದೆ. ಆದರೂ ಆಯಾ ದೇಶಗಳ ಭೌತಿಕ ಹಾಗೂ ಜೈವಿಕ ಸ್ಥಿತಿಗತಿ ಆಧರಿಸಿ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಮಾಸ್ಕ್ ಹಾಗೂ ಸಾಮಾಜಿಕ ಅಂತರವೊಂದೆ ಕೊರೊನಾ ತಡೆಯಲು ಪರಿಣಾಮಕಾರಿ . ಇನ್ನೆರಡು ತಿಂಗಳಲ್ಲಿ ಕೊರೊನಾಗೆ ಲಸಿಕೆ ದೊರೆಯುವ ಭರವಸೆಯನ್ನು ಪ್ರೊ.ರಂಗಪ್ಪ ವ್ಯಕ್ತಪಡಿಸಿದರು.
* ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರತಿಕ್ರಿಯೆ
ಈ ನೀತಿ ಜಾರಿಗೆ ಬಂದರೆ ನಿಜಕ್ಕೂ ಅದು ಪರಿಣಾಮಕಾರಿಯಾಗುತ್ತದೆ. 5+3+3+4 ರೀತಿಯಲ್ಲಿ ಹೊಸ ಶಿಕ್ಷಣ ನೀತಿ ಇರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜತೆಗೆ ಈ ಜಾರಿಯಿಂದ ದೇಶದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದೇ ರೀತಿಯ ಶಿಕ್ಷಣ ಸಿಗುವಂತಾಗುತ್ತದೆ. ಆದರೆ ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಷ್ಟೆ ಎಂದರು.
0000
key words : mysore-university-vice-chancellor-prof.k.s.rangappa-cancer-research-china-mou-300.crore-project