ಮೈಸೂರು ವಿವಿಗೆ ೧೯ನೇ ಸ್ಥಾನ : ಎನ್‌ಐಆರ್‌ಎಫ್ ರ್ಯಾಂಕಿಂಗ್‌ನ ಆಯ್ಕೆ ಮಾನದಂಡ ಹೀಗಿದೆ ನೋಡಿ.

 

ಮೈಸೂರು, ಸೆಪ್ಟೆಂಬರ್ ೯, ೨೦೨೧ (www.justkannada.in): ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್‌ಐಆರ್‌ಎಫ್) ವತಿಯಿಂದ ವಿಶ್ವವಿದ್ಯಾಲಯಗಳ ಕಾರ್ಯಪ್ರದರ್ಶನವನ್ನು ಗುರುತಿಸಿ ನೀಡುವ ರ್ಯಾಂಕಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ೧೯ನೇ ರ್ಯಾಂಕ್ ಹಾಗೂ ಒಟ್ಟಾರೆ ವಿಭಾಗದಡಿ ೩೪ನೇ ರ್ಯಾಂಕ್ ಲಭಿಸಿದೆ.

ಈ ರ್ಯಾಂದಕಿಂಗ್ ಪಟ್ಟಿಯನ್ನು ಸೆಪ್ಟೆಂಬರ್ ೯, ೨೦೨೧ರಂದು ಬಿಡುಗಡೆಗೊಳಿಸಲಾಯಿತು. ಮೈಸೂರು ವಿಶ್ವವಿದ್ಯಾಲಯವು ಈ ಹಿಂದಿನಂತೆ ಈ ವರ್ಷವೂ ಸಹ ಅತ್ಯುತ್ತಮ ಕಾರ್ಯಪ್ರದರ್ಶನ ನೀಡಿ ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೊದಲನೆ ಸ್ಥಾನವನ್ನು ಗಳಿಸಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಈ ರ್ಯಾಂಕಿಂಗ್ ಅನ್ನು ಪ್ರತಿ ವರ್ಷ ಎನ್‌ಐಆರ್‌ಎಫ್ ಬೋಧನೆ, ಕಲಿಕೆ ಹಾಗೂ ಸಂಪನ್ಮೂಲಗಳು (ಟಿಎಲ್‌ಆರ್); ಸಂಶೋಧನೆ ಹಾಗೂ ವೃತ್ತಿಪರ ಅಭ್ಯಾಸ (ಆರ್‌ಪಿ); ಪದವಿ ಫಲಿತಾಂಶಗಳು (ಜಿಒ); ಔಟ್‌ರೀಚ್ ಹಾಗೂ ಸೇರ್ಪಡೆಗೊಳ್ಳುವಿಕೆ (ಒಐ); ಹಾಗೂ ಪೀರ್ ಪರ್ಸೆಪ್ಷನ್ (ಪಿಆರ್) ಈ ಐದು ಮಾನದಂಡಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಮಾನದಂಡಗಳೂ ಹೆಚ್‌ಇಐಗಳ ಪ್ರಮುಖ ಚಟುವಟಿಕೆಗಳ ಗುಣಮಟ್ಟ, ಬೋಧನೆ ಹಾಗೂ ಕಲಿಕೆಯಲ್ಲಿ ಅತ್ಯುತ್ಕೃಷ್ಟತೆ ಹಾಗೂ ಪರಿಣಾಮಕಾರಿತ್ವ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಸಮಾಜವನ್ನು ತಲಪುವಂತಹ ಅಂಶಗಳಿಗೆ ಸಂಬAಧಿಸಿದೆ. ಮೈಸೂರು ವಿಶ್ವವಿದ್ಯಾಲಯವು ಈ ಎಲ್ಲಾ ಮಾನದಂಡಗಳಲ್ಲಿಯೂ ಅತ್ಯುತ್ತಮ ಅಂಕಗಳನ್ನು ಗಳಿಸಿದೆ.

UoM Degree students admission: Fee payment last date extended by 15 days

ಎನ್‌ಐಆರ್‌ಎಫ್ ೨೦೧೫ರಿಂದ ಪ್ರತಿ ವರ್ಷ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (ಹೆಚ್‌ಇಐಗಳು) ಈ ಪುರಸ್ಕಾರವನ್ನು ನೀಡುತ್ತಿದೆ. ‘ಒಟ್ಟಾರೆ,’ ‘ವಿಶ್ವವಿದ್ಯಾಲಯ,’ ‘ಇಂಜಿನಿಯರಿಂಗ್,’ ‘ನಿರ್ವಹಣೆ,’ಯಂತಹ ವಿವಿಧ ೧೦ ವಿಭಾಗಗಳಡಿ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯವು ಈ ಮೊದಲ ಎರಡು ವಿಭಾಗಗಳಲ್ಲಿ ಬಾಗವಹಿಸಿತು. ಹಿಂದಿನ ವರ್ಷ, ಅಂದರೆ ೨೦೨೦ರಲ್ಲಿ ಮೈಸೂರು ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ವಿಭಾಗದಲ್ಲಿ ೨೭ನೇ ಸ್ಥಾನ ಹಾಗೂ ಒಟ್ಟಾರೆ ವಿಭಾಗದಲ್ಲಿ ೪೭ನೇ ಸ್ಥಾನದಲ್ಲಿತ್ತು. ಈ ವರ್ಷ ಬೋಧಕರ ಸಂಖ್ಯೆಯಲ್ಲಿ ಇಳಿಕೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಕೊರತೆ ಎದುರಾಗಿದ್ದರೂ ಸಹ ಮೈಸೂರು ವಿಶ್ವವಿದ್ಯಾಲಯ ಅತ್ಯುತ್ತಮ ಕೆಲಸವನ್ನು ಪ್ರದರ್ಶಿಸಿದೆ. ಇದು ಮೈಸೂರು ವಿಶ್ವವಿದ್ಯಾಲಯಕ್ಕೆ ಎನ್‌ಐಆರ್‌ಎಫ್ ರ್ಯಾಂಕಿಂಗ್ ಈವರೆಗೆ ನೀಡಿರುವ ಅತ್ಯುತ್ತಮ ರ್ಯಾಂಕಿಂಗ್ ಆಗಿದೆ.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರು, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು, ಅಧಿಕಾರಿಗಳು, ಆಡಳಿತ ಸಿಬ್ಬಂದಿ, ಪೋಷಕರು ಹಾಗೂ ಎಲ್ಲಾ ಇನ್ನಿತರೆ ಭಾಗೀದಾರರಿಗೂ ಈ ಪ್ರಶಂಸೆಗಾಗಿ ತಮ್ಮ ಕೃತಜ್ಞತೆ ಸಲ್ಲಿಸಿ, ಮುಂಬರುವ ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತಷ್ಟು ಹೆಚ್ಚಿನ ಸಾಧನೆ ಮಾಡಿ ಹೆಚ್ಚು ಪ್ರಶಂಸೆಗಳನ್ನು ಗೆಲ್ಲಲಿ ಎಂದು ಹಾರೈಸಿದ್ದಾರೆ..

key words : mysore-uom-nirf-ranking-list