ಮೈಸೂರಿನ ಕಾಳಿದಾಸ ರಸ್ತೆಯ 25 ಕೋಟಿ ರೂ.ಗೂ ಅಧಿಕ ಮೌಲ್ಯದ ವಾಣಿಜ್ಯ ಕಟ್ಟಡ ವಶಕ್ಕೆ ಪಡೆದ ಮುಡಾ

 

ಮೈಸೂರು, ಜು.06, 2021 : (www.justkannada.in news) ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಕಾಳಿದಾಸ ರಸ್ತೆಯಲ್ಲಿ ವಿದ್ಯಾರ್ಥಿನಿಲಯಕ್ಕೆಂದು ಮಂಜೂರಾಗಿದ್ದ ನಿವೇಶನದಲ್ಲಿ ನಿರ್ಮಿಸಿದ್ದ 25 ಕೋಟಿಗೂ ಅಧಿಕ ಮೌಲ್ಯದ ಬೃಹತ್ ವಾಣಿಜ್ಯ ಕಟ್ಟಡವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ವಶಪಡಿಸಿಕೊಂಡಿದೆ.

jk

ಘಟನೆ ವಿವರ :

ಜಯಲಕ್ಷ್ಮೀಪುರ 3ನೇ ಬ್ಲಾಕ್‌ನಲ್ಲಿ (ಕಾಳಿದಾಸ ರಸ್ತೆ) ಕಣಿಯರ ಸಮಾಜದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ ಕಣಿಯರ ಸೇವಾ ಸಮಾಜಕ್ಕೆ 1948ರ ಫೆ.3ರಂದು ಅಂದಿನ ಸಿಐಟಿಬಿಯಿಂದ 5,600 ಚದರ ಅಡಿ ವಿಸ್ತೀರ್ಣದ ಮೂಲೆ ನಿವೇಶನವನ್ನು ಷರತ್ತಿನೊಂದಿಗೆ ಉಚಿತವಾಗಿ ಮಂಜೂರಾಗಿತ್ತು. 41 ವರ್ಷಗಳ ನಂತರ 1989ರ ಸೆಪ್ಟೆಂಬರ್ 13ರಂದು ಕಣಿಯರ ಸೇವಾ ಸಮಾಜದವರು ಈ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಮುಡಾದಿಂದ ಅನುಮತಿ ಕೋರಿದ್ದರು.

1992ರ ಜುಲೈ 31ರಂದು ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ಈ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಆದರೆ, ಅದಕ್ಕೂ ಒಂದು ವರ್ಷ ಮುನ್ನವೇ 1991ರ ಆಗಸ್ಟ್ 14ರಂದು ಕಣಿಯರ ಸೇವಾ ಸಮಾಜದವರು ಈ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಖಾಸಗಿ ವ್ಯಕ್ತಿಯೊಬ್ಬರೊಂದಿಗೆ 27 ವರ್ಷಗಳ ಗುತ್ತಿಗೆ ಕರಾರು ಮಾಡಿಕೊಂಡಿದ್ದರು. ಅದರಂತೆ ಅಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣವಾಯಿತು.

ಅದೇ ವೇಳೆ ಮೂಲ ಉದ್ದೇಶಿತ ವಿದ್ಯಾರ್ಥಿ ನಿಲಯ ಬಿಂಬಿಸಲು ನಾಮಕಾವಸ್ತೆಯಾಗಿ ಕೇವಲ 4 ಕೊಠಡಿಗಳನ್ನು ನಿರ್ಮಿಸಿ ಅದನ್ನೂ ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಷರತ್ತು ಉಲ್ಲಂಘಿಸಿ ವಾಣಿಜ್ಯ ಕಟ್ಟಡ ನಿರ್ಮಿಸಿದ 24 ವರ್ಷದ ನಂತರ 2015ರ ಸೆಪ್ಟೆಂಬರ್ 7ರಂದು ಮುಡಾದ ಅಂದಿನ ಆಯುಕ್ತರು ಕಣಿಯರ ಸೇವಾ ಸಮಾಜಕ್ಕೆ ನೋಟಿಸ್ ನೀಡಿದ್ದರು.

ಈ ನೋಟಿಸ್‌ಗೆ ಸಮಾಜದಿಂದ ಉತ್ತರ ಬಾರದಿದ್ದರೂ ಮುಡಾದಿಂದ 5 ವರ್ಷಗಳವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ 2020ರ ಮಾರ್ಚ್ 7ರಂದು ಈ ವಾಣಿಜ್ಯ ಸಂಕೀರ್ಣದ ವಿಷಯ ಮುಡಾ ಸಭೆಯಲ್ಲಿ ಪ್ರಸ್ತಾಪಿಸಲಾಯಿತಾದರೂ, ಒಂದು ವರ್ಷದ ನಂತರ 2021ರ ಮಾರ್ಚ್ 20ರಂದು ನಡೆದ ಮುಡಾ ಸಭೆಯಲ್ಲಿ ಈ ನಿವೇಶನವನ್ನು ಕಣಿಯರ ಸೇವಾ ಸಮಾಜಕ್ಕೆ ಮಂಜೂರು ಮಾಡಿರುವುದನ್ನು ರದ್ದುಪಡಿಸಿ, ವಾಣಿಜ್ಯ ಸಂಕೀರ್ಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ಈ ಕಟ್ಟಡವನ್ನು ಮುಡಾಗೆ ನಿಶ್ಚಿತ ಆದಾಯ ಬರುವ ರೀತಿ ಉಪಯೋಗಿಸಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು. ಅಲ್ಲದೇ, ಕಣಿಯರ ಸಮಾಜದ ಅಭಿವೃದ್ಧಿಗೆ ನಾಗರಿಕ ಸೌಕರ್ಯ ನಿವೇಶನ ಅಗತ್ಯವಿದ್ದಲ್ಲಿ ಪ್ರಾಧಿಕಾರವು ನಾಗರಿಕ ಸೌಕರ್ಯ ನಿವೇಶನ ಹಂಚಿಕೆ ಸಂಬಂಧ ಹೊರಡಿಸುವ ಅಧಿಸೂಚನೆಯನ್ನು ನಿಯಮಾನುಸಾರ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಿ ಅವರ ಅರ್ಜಿಯನ್ನು ಆದ್ಯತೆ ಮೇರೆಗೆ ಪರಿಗಣಿಸುವುದು ಎಂದು ತೀರ್ಮಾನಿಸಲಾಯಿತು.

ಷರತ್ತು ಉಲ್ಲಂಘಿಸಿ ನಿರ್ಮಿಸಿದ್ದ ವಾಣಿಜ್ಯ ಸಂಕೀರ್ಣವನ್ನು 30 ವರ್ಷದ ನಂತರ ಮುಡಾ ಸಭೆಯ ತೀರ್ಮಾನದಂತೆ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ವಾಣಿಜ್ಯ ಸಂಕೀರ್ಣದಿಂದ ಇನ್ನು ಮುಂದೆ ಬಾಡಿಗೆಯಾಗಿ ಮಾಸಿಕ ಸುಮಾರು 5ರಿಂದ 6 ಲಕ್ಷ ರೂ. ಮುಡಾಗೆ ಸಂದಾಯವಾಗಲಿದೆ ಎಂದು ಆಯುಕ್ತ ಡಾ. ಡಿ.ಬಿ. ನಟೇಶ್ ತಿಳಿಸಿದ್ದಾರೆ.

 

key words : mysore-urban-development-authority-MUDA