ಮೈಸೂರು, ಮೇ 11, 2019 : (www.justkannada.in news) : ನಗರದ ಇಟ್ಟಿಗೆಗೂಡಿನ ಕನ್ನಡ ಶಾಲಾ ಆವರಣದಲ್ಲಿ ಕಾಂಪ್ಲೆಕ್ಸ್ ನಿರ್ಮಿಸುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸ್ಪಷ್ಟ ನ್ಯಾಯಾಂಗ ಉಲ್ಲಂಘನೆ ಎಂದು ಆರೋಪಿಸಲಾಗಿದೆ.
ನಗರದ ವಕೀಲ ಪಿ.ಜೆ.ರಾಘವೇಂದ್ರ ಅವರು ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿ ಹೇಳಿದಿಷ್ಟು..,
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಾಂಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಿರುವ ಜಾಗವನ್ನು ಹರಾಜು ಹಾಕಲು ಕೋರ್ಟ್ ಈಗಾಗಲೇ ಸೂಚನೆ ನೀಡಿದೆ. ಈ ಆದೇಶದ ಅನ್ವಯ ಮುಂದಿನ ತಿಂಗಳ 2 ನೇ ವಾರದಲ್ಲಿ ಅಂದ್ರೆ 2019 ರ ಜೂನ್ ಎರಡನೇ ವಾರದಲ್ಲಿ ಈ ಜಾಗ ಹರಾಜಿಗೆ ಬರಲಿದೆ. ಇಂಥ ಸಮಯದಲ್ಲಿ ಪ್ರಾಧಿಕಾರ, ಆ ಜಾಗದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಿಸಲು ಉದ್ದೇಶಿಸಿದೆ ಎಂಬ ಹೇಳಿಕೆ ನೀಡಿರುವುದು ಆಶ್ವರ್ಯ ತಂದಿದೆ ಎಂದರು.
ಶುಕ್ರವಾರ ‘ ಜಸ್ಟ್ ಕನ್ನಡ ಡಾಟ್ ಇನ್ ‘ ನಲ್ಲಿ ‘ ಕನ್ನಡ ಶಾಲಾ ಆವರಣದಲ್ಲಿ ಮುಡಾ ಕಾಂಪ್ಲೆಕ್ಸ್ ‘ ನಿರ್ಮಿಸುವ ಸುದ್ಧಿ ( ದಶಕಗಳಿಂದ ಖಾಲಿ ಉಳಿದಿದ್ದ ಶಾಲಾ ಆವರಣದಲ್ಲಿ ನೂತನ ಕಾಂಪ್ಲೆಕ್ಸ್ ನಿರ್ಮಿಸಲು ಮುಂದಾದ MUDA. see more @ : https://www.justkannada.in/?p=1009 ) ಓದಿದ ಕೂಡಲೇ ಆಶ್ವರ್ಯ ಹಾಗೂ ಗಾಬರಿ ಆಯ್ತು. ಏಕೆಂದ್ರೆ ಈಗಾಗಲೇ ಹರಾಜಿಗೆ ಸಿದ್ದವಾಗಿರುವ ಪ್ರದೇಶದಲ್ಲಿ ಮುಡಾ ಅಧಿಕಾರಿಗಳು ಅದು ಹೇಗೆ ಕಟ್ಟಡ ಕಟ್ಟುತ್ತಾರೆ ಎಂದು.
ಏನಿದು ಘಟನೆ:
ಬೆಂಗಳೂರು ಮೂಲದ ಬಿ ಎಸ್ ಬುದ್ಧರಾಜ್ ಅವರ ಮಾಲೀಕತ್ವದ ಸುಮಾರು ಮೂವತ್ತು ಎಕರೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಕಳೆದ ಮೂವತ್ತು ವರುಷಗಳ ಹಿಂದೆ ಸ್ವಾಧಿನ ಪಡಿಸಿಕೊಂಡಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿ ನಗರ ಹಾಗೂ ಆರ್ ಟಿ ನಗರ ಬಡಾವಣೆಗೆಂದು ಈ ಜಾಗ ವಶಪಡಿಸಿಕೊಂಡ ಮುಡಾ, ಭೂಮಿಗೆ ಹತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಪರಿಹಾರವನ್ನು ಬಾಕಿ ಉಳಿಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋದ ಭೂ ಮಾಲೀಕರಿಗೆ, ನ್ಯಾಯಾಲಯವು ಈ ಆಸ್ತಿಯನ್ನು ಜಪ್ತಿ ಮಾಡಿ ಬಹಿರಂಗ ಹರಾಜು ನಡೆಸಲು ಆದೇಶ ಹೊರಡಿಸಿತು. ಮೈಸೂರಿನ ಎರಡನೆಯ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯವು ಪ್ರಾಧಿಕಾರಕ್ಕೆ ಸೇರಿದ ಸದರಿ ಆಸ್ತಿಯನ್ನು ಜಪ್ತಿ ಮಾಡಿದ್ದು ಜೂನ್ ತಿಂಗಳ ಎರಡನೇ ವಾರದಲ್ಲಿ ಸದರಿ ಸ್ವತ್ತನ್ನು ಬಹಿರಂಗ ಹರಾಜಿನ ಮೂಲಕ ಸಾರ್ವಜನಿಕವಾಗಿ ಮಾರಾಟ ಮಾಡಲು ಆದೇಶಿಸಿದೆ.
ಕೋರ್ಟ್ ನ ಈ ಆದೇಶ ಮರೆ ಮಾಚಿ ಪ್ರಾಧಿಕಾರವು ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹೊರಟಿರುವುದು ಕಾನೂನುಬಾಹಿರ. ಈ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಮುಡಾ ಆಯುಕ್ತರು ಸಹ, ಜಸ್ಟ್ ಕನ್ನಡ ಡಾಟ್ ಇನ್ ಸಂಪರ್ಕಿಸಿದಾಗ ಜಾಗ ಹರಾಜಿಗೆ ಬಂದಿದೆ ಎಂಬುದನ್ನು ಮರೆ ಮಾಚಿದ್ದು ಆಶ್ಚರ್ಯವಾಗಿದೆ ಎಂದು ವಕೀಲ ಪಿ.ಜೆ.ರಾಘವೇಂದ್ರ ಅಭಿಪ್ರಾಯಪಟ್ಟರು.
–
key words : mysore-urban-development-MUDA-court-kannada-school