ಮೈಸೂರು, ಏ.30, 2023 : (www.justkannada.in news) ಕಳೆದ ಬಾರಿ ಭಾರತೀಯ ಜನತಾ ಪಾರ್ಟಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ತತ್ವ ಸಿದ್ಧಾಂತ ದೇಯಕ್ಕಾಗಿ ಚುನಾವಣೆ ಎದುರಿಸಿತ್ತು. ಈ ಬಾರಿ ನಾವೇನು ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್ ನ ಕುತಂತ್ರಗಳಿಗೆ ತಕ್ಕಂತೆ, ಎಲ್ಲಾ ರೀತಿಯಲ್ಲೂ ತಯಾರಾಗಿ ಚುನಾವಣೆ ಎದುರಿಸುತ್ತಿದೆ ಎಂದು ನಿಕಟ ಪೂರ್ವ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಖಂಡಿಸಿದ್ದಾರೆ.
ಸಿದ್ದರಾಮಯ್ಯನ ಹುಂಡಿಯಲ್ಲಿ ನಡೆದ ಘಟನೆ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಹೇಳಿರುವುದಿಷ್ಟು…
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರುಶ್ಯಾಮ್ ಪ್ರಕಾಶ್ ಮುಖರ್ಜಿ ಇವರುಗಳ ತತ್ವ ಆದರ್ಶಗಳು ಕಣ್ಮರೆಯಾಗುತ್ತಿವೆ ಹಣ ಬಲ ಜಾತಿ ಬಲ ತೋಳ್ಬಲದ ಮೂಲಕ ಎಲ್ಲರೂ ಚುನಾವಣೆಯ ಎದುರಿಸಲು ಸನ್ನದ್ಧರಾಗಿದ್ದಾರೆ . ಇದು ಸಂವಿಧಾನ ವಿರೋಧಿಯಾಗಿದೆ . ಇದರಿಂದಾಗಿ ನಮ್ಮ ಕಾರ್ಯಕರ್ತ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಣದ ಮೂಲಕ ಜಾತಿ ಜಾತಿಗಳ ನಡುವೆ ಇರುವ ಸಾಮರಸ್ಯವನ್ನು ಕದಡುವ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆ. ನಾವೆಲ್ಲ ಒಂದು ನಾವೆಲ್ಲ ಹಿಂದೂ ಎನ್ನುವುದು ಒಂದು ಕಡೆ, ನಾವೆಲ್ಲ ಜಾತ್ಯತೀತರು ಎನ್ನುವುದು ಇನ್ನೊಂದು ಕಡೆ. ಈ ಸಿದ್ಧಾಂತವನ್ನು ಯಾರು ಪಾಲಿಸುತ್ತಿದ್ದಾರೆ .
ಸೋಮಣ್ಣನವರು, ಸಿದ್ದರಾಮಯ್ಯನವರು ಚಿಂತಿಸಿ ನಿಮ್ಮ ಹಿಂದೆ ಇರುವ ಗಂಜಿ ಗಿರಾಕಿಗಳು ಜೈಕಾರ ಹಾಕುವವರು ಹಣಕ್ಕಾಗಿ ಜಾತಿಗಾಗಿ ನಿಮ್ಮ ಹಿಂದೆ ಇರುವವರನ್ನು ದೂರವಿಟ್ಟು ಚುನಾವಣೆ ಎದುರಿಸಿ. ಹಿಂದೆ ದಿವಂಗತ ರಾಜಶೇಖರ್ ಮೂರ್ತಿಯವರು ಹಾಗೂ ಶ್ರೀನಿವಾಸ ಪ್ರಸಾದ್ ರವರ ನಡುವೆ ನಡೆದಿದ್ದ ಜಿದ್ದಿನ ರಾಜಕಾರಣ ಅಮಾಯಕರನ್ನು ಬಲಿ ಪಡೆದಿದೆ. ಆ ರೀತಿ ವರುಣದಲ್ಲೂ ಆಗುವುದು ಬೇಡ.
ಸಂಸದ ಪ್ರತಾಪ ಸಿಂಹ ಅವರ ವೀರಾವೇಶದ ಭಾಷಣದಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಕಳೆದ ಬಾರಿ ನಾನು ಪ್ರತಾಪ್ ಸಿಂಹ ಅವರನ್ನು ಚುನಾವಣೆಪ್ರಚಾರಕ್ಕೆ ಕರೆದಾಗ ಘಟಸರ್ಪ ಕಂಡಂತೆ ಬೆಚ್ಚಿ ಬಿದ್ದಿದ್ದಪ್ರತಾಪ್ ಸಿಂಹ, ಈ ಬಾರಿ ರಣೋತ್ಸಾಹದಿಂದ ವರುಣಾದಲ್ಲಿ ಅಬ್ಬರಿಸುತ್ತಿದ್ದಾರೆ. ಬಿಜೆಪಿಯಲ್ಲಿರುವ ಮಹಾಮೇಧಾವಿಗಳು ಇವರನ್ನು ಅವರದೇ ಲೋಕಸಭಾ ಕ್ಷೇತ್ರದ ಚಾಮುಂಡೇಶ್ವರಿ , ಹುಣಸೂರು, ನರಸಿಂಹರಾಜ ಅಥವಾ ಜಿಲ್ಲೆಯ ಕೆಆರ್ ನಗರ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಜವಾಬ್ದಾರಿ ನೀಡಿ ಅಥವಾ ಅವರೇ ತೆಗೆದುಕೊಳ್ಳಲಿ ಎಂದು ತೋಟದಪ್ಪ ಬಸವರಾಜು ಮನವಿ ಮಾಡಿದ್ದಾರೆ.
ವಿ ಸೋಮಣ್ಣನವರು ಹಾಗೂ ಸಿದ್ದರಾಮಯ್ಯನವರು ನುರಿತ ರಾಜಕಾರಣಿ ಮುತ್ಸದ್ದಿಗಳಾಗಿದ್ದೀರಿ ವರ್ಣ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.
Key words : mysore-varuna-election-2023-congress-bjp-siddaramaiha-somanna