ಮೈಸೂರು,ಜು,23,2020(www.justkannada.in): ಯಾವುದೇ ಸಭೆ ಸಮಾರಂಭಗಳು ನಡೆದರೆ ವೀಳೆದೆಲೆಗೆ ಮೊದಲ ಆದ್ಯತೆ. ಶುಭ ಸಮಾರಂಭಗಳಲ್ಲಂತೂ ಈ ವೀಳೆದೆಲೆಯನ್ನ ಸಾಂಪ್ರದಾಯಿಕವಾಗಿ ಬಳಕೆಯಾಗುತ್ತದೆ. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಪೇಟ, ನಂಜನಗೂಡು ರಸಬಾಳೆಯಂತೆ ಮೈಸೂರು ವೀಳ್ಯದೆಲೆ ಎಂಬುದಾಗಿ ನಾಡಿನೆಲ್ಲಡೆ ಹೆಸರುವಾಸಿಯಾಗಿದೆ.
ಹೀಗೆ ಪ್ರಸಿದ್ಧಿಯಾಗಿರುವ ವೀಳೆದೆಲೆ ಕೃಷಿ ನೆಲ ಕಚ್ಚುತ್ತಿದೆ. ಹೌದು, ಇದೀಗ ಎಲ್ಲೆಡೆ ಕೊರೋನಾ ಭೀತಿ ಎದುರಾಗಿ ಸಾಕಷ್ಟು ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ಅಂತೆಯೇ ವೀಳೇದೆಲೆ ಕೃಷಿಯನ್ನ ಅವಲಂಬಿಸಿದ ಬೆಳೆಗಾರರು ಹೈರಾಣಾಗಿದ್ದು, ವೀಳೇದೆಲೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮಂದಿಯ ಬದುಕು ತತ್ತರಿಸಿದೆ.
ಮೈಸೂರಿನ ಪಾರಂಪರಿಕತೆ ಜೊತೆ ಬೆಸೆದುಕೊಂಡಿರುವ ವೀಳ್ಯೆದೆಲೆ ಬೆಳೆಗಾರರು ಕೊರೊನಾ ಆರ್ಭಟದಿಂದಾಗಿ ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಮೈಸೂರಿನ ಸುಮಾರು 1500 ಕುಟುಂಬಗಳು ವೀಳ್ಯದೆಲೆ ವ್ಯಾಪಾರ ನಂಬಿ ಬದುಕುತ್ತಿದ್ದಾರೆ. ಮೈಸೂರಿನ ಮಾರ್ಬಳ್ಳಿ,ಉದ್ಭೂರು, ದೊಡ್ಡಕಾಟೂರು, ಟಿ.ಕಾಟೂರು, ಗುಂಚನಹಳ್ಳಿ ಸೇರಿದಂತೆ ಹಲವು ಗ್ರಾಮದ ಜನತೆಗೆ ವೀಳೆದೆಲೆ ಬೆಳೆಯೇ ಆಧಾರವಾಗಿದೆ.
ಆದರೆ ಕೊರೋನಾ ಹೊಡೆತದಿಂದ ವೀಳೆದೆಲೆ ಉದ್ದಿಮೆಯನ್ನ ನಂಬಿ ಬದುಕು ಸಾಗಿಸುವುದು ಹೇಗೆ ಎಂಬ ಚಿಂತೆ ಮುಳುಗಿದ್ದಾರೆ ಬೆಳೆಗಾರರು. ವೀಳೆದೆಲೆ ಬೆಳೆಯಬೇಕು, ಮಾರಾಟ ಮಾಡಿ ಬಂದ ಆದಾಯದಲ್ಲಿ ಬದುಕಬೇಕು. ಆದ್ರೆ ಕೊರೊನಾದಿಂದ ಒಂದು ವರ್ಷಕಾಲ ಬೆಳೆದ ವೀಳೆದೆಲೆ ಮಣ್ಣುಪಾಲಾಗುತ್ತಿದೆ. ಮೈಸೂರಿನ ವೀಳೆದೆಲೆ ಮಾರುಕಟ್ಟೆ ನಿರ್ಜೀವವಾಗಿದೆ. ಬೆಳೆ ಸಮೃದ್ದಿಯಾಗಿ ಬಂದ್ರೂ ಕೊಳ್ಳುವರಿಲ್ಲ ಎಂಬುದು ಬೆಳೆಗಾರರ ಅಳಲಾಗಿದೆ.
ಇನ್ನು ಕೊರೊನಾ ಹಾವಳಿಗೆ ಮುನ್ನ ಒಂದು ವೀಳೆದೆಲೆ ಪಿಂಡಿ(10 ಸಾವಿರ ಎಲೆ)ಗೆ 4 ರಿಂದ 5 ಸಾವಿರ ಇತ್ತು. ಆದರೆ ಇದೀಗ 1 ಸಾವಿರ ಸಿಕ್ಕಿದ್ರೆ ಅದೃಷ್ಟ. ಮೈಸೂರಿನ ಚಿಗುರೆಲೆಗೆ ಅಂದ್ರೆ ವೀಳೆದೆಲೆಗೆ ಅಂತರಾಜ್ಯದಲ್ಲೂ ಮಾರುಕಟ್ಟೆ ಇದೆ. ಸವಿಯಾದ ರುಚಿ ಬರುವ ಈ ಎಲೆಯನ್ನ ರಾಜ್ಯದ ಮೂಲೆ ಮೂಲೆಗಳಿಂದ ಬಂದು ಖರೀದಿಸ್ತಾರೆ.
ಆದ್ರೆ ಕೊರೊನಾ ಹಾವಳಿಯಿಂದ ಮಾರುಕಟ್ಟೆಯೇ ಸ್ಥಬ್ಧವಾಗಿದೆ. ಪ್ರತಿದಿನ 150 ರಿಂದ 200 ಪಿಂಡಿಗಳು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೀಗ ಕೇವಲ 10 ಪಿಂಡಿಗಳಿಗೆ ಸೀಮಿತವಾಗಿದೆ. ಮಾರುಕಟ್ಟೆ ಪರಿಸ್ಥಿತಿ ಹೀಗಾದ್ರೆ ಬೆಳೆಗಾರರ ಪರಿಸ್ಥಿತಿ ಮತ್ತಷ್ಟು ವಿಪರ್ಯಾಸ. ವೀಳೆದೆಲೆ ಬೆಳೆಗಾರರು ಹಾಗೂ ಮಾರಾಟಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕಿದೆ. ಇಲ್ಲದಿದ್ರೆ ವೀಳೆದೆಲೆ ಕೃಷಿಯೂ ಸಹ ಇತಿಹಾಸಗಳ ಪುಟ ಸೇರುವುದು ನಿಃಸಂಶಯ.
Key words: Mysore- Velai Dele-growers –corona-effect