ಮೈಸೂರು,ಸೆಪ್ಟಂಬರ್,21,2021(www.justkannada.in): ಮೈಸೂರು ಅರಮನೆ ಬಳಿಯಿರುವ ವಿಷ್ಣುವರ್ಧನ್ ಉದ್ಯಾನವನದಲ್ಲಿ ಇತ್ತೀಚಿಗೆ ಅಭಿಮಾನಿಗಳು ಡಾ.ವಿಷ್ಣು ಅವರ ಪ್ರತಿಮೆ ಪ್ರತಿಷ್ಟಾಪಿಸಿದ್ದರು. ಆದರೆ ಅನಧಿಕೃತವಾಗಿ ವಿಷ್ಣು ಪ್ರತಿಮೆ ಇಡಲಾಗಿದೆ ಎಂದು ತೆರವುಮಾಡಲಾಗಿತ್ತು. ಪಾರ್ಕ್‌ನಲ್ಲಿ ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ್ದರ ಹಿಂದೆ ಸ್ಥಳೀಯ ಶಾಸಕರ ಕೈವಾಡವಿದೆ ಎಂದು ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ, ವಿಷ್ಣುವರ್ಧನ್ ಹುಟ್ಟುಹಬ್ಬದ ದಿನದಂದು ಪ್ರತಿಷ್ಠಾಪನೆ ಮಾಡಿದ್ದ ಪುತ್ಥಳಿಯನ್ನು ಏಕಾಏಕಿ ಧ್ವಂಸ ಮಾಡಿರುವ ಘಟನೆಗೆ ಸ್ಥಳೀಯ ಶಾಸಕರು ಕಾರಣರಾಗಿದ್ದಾರೆ. ಉದ್ಯಾನವನದಲ್ಲಿದ್ದ ಮರಗಳನ್ನು ಕಡಿದು ಪಕ್ಷದ ಸಮಾವೇಶ ನಡೆಸುವ ಶಾಸಕರು, ವಿಷ್ಣುವರ್ಧನ್ ಪುತ್ಥಳಿಯನ್ನು ಧ್ವಂಸಗೊಳಿಸಲು ಕಾರಣರಾಗಿದ್ದಾರೆ. ಇದು ವಿಷ್ಣುವರ್ಧನ್ ಅವರಿಗೆ ಮಾಡಿದ ಅವಮಾನವಾಗಿದೆ. ಪ್ರತಿಮೆ ಸ್ಥಾಪನೆಗಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೆ ಯಾರೊಬ್ಬರೂ ಸ್ಪಂದಿಸದ ಕಾರಣ ಅಭಿಮಾನಿಗಳು ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದರು.
ಆದರೆ ಅಭಿಮಾನಿಗಳ ಗಮನಕ್ಕೆ ತಂದು ಪುತ್ಥಳಿಯನ್ನು ತೆರವುಗೊಳಿಸುವ ಬದಲು ಏಕಾಏಕಿ ಧ್ವಂಸ ಮಾಡಿರುವುದು ಖಂಡನೀಯ. ಆದಷ್ಟು ಬೇಗ ವಿಷ್ಣುವರ್ಧನ್ ಅವರ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ಕ್ರಮ ಕೈಗೊಳ್ಳಬೇಕು. ಮುಂಬರುವ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ದಿನದೊಳಗೆ ಈ ಕಾರ್ಯ ನೆರವೇರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Key words: Mysore -Vishnu Vardhan -statue – vandalized – local –MLA