ಮೈಸೂರು, ಜೂ.20, 2022 : (www.justkannada.in news) : ವಿಶ್ವಯೋಗ ದಿನದ ಅಂಗವಾಗಿ ನಾಳೆ ಅರಮನೆ ಅಂಗಳದಲ್ಲಿ ಆಯೋಜಿಸಿರುವ ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದು, ಕೆಲ ದಿನಗಳಿಂದ ನಡೆಯುತ್ತಿದ್ದ ರಾಜಕಾರಣಿಗಳ ‘ ಕ್ರೆಡಿಟ್ ವಾರ್ ‘ ಗೆ ಜಾಣತನದಿಂದಲೇ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಮೈಸೂರು ಕೆ.ಆರ್.ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್.ಎ.ರಾಮದಾಸ್ ಅವರನ್ನು ಕೈ ಸನ್ನೆ ಮೂಲಕ ವೇದಿಕೆಗೆ ಆಹ್ವಾನಿಸಿದ ಪ್ರಧಾನಿ ಮೋದಿ, ರಾಮದಾಸ್ ಅವರನ್ನು ಅಪ್ಪಿಕೊಂಡಿದ್ದು ಮಾತ್ರವಲ್ಲದೆ, ಬೆನ್ನಿಗೆ ಗುದ್ದಿ ಪ್ರೀತಿ ವ್ಯಕ್ತಪಡಿಸಿದ್ದು ವಿಶೇಷ. ಶಾಸಕ ರಾಮದಾಸ್ ಸಹ ಅಷ್ಟೆ ವಿನಮ್ರವಾಗಿ, ಗೌರವಪೂರ್ವಕವಾಗಿ ಪ್ರಧಾನಿ ಮೋದಿ ಅವರ ವಿಶ್ವಾಸಕ್ಕೆ ತಲೆಬಾಗಿ ನಮಿಸಿದರು.
ಕೆಲ ನಿಮಿಷಗಳಷ್ಟು ಸಮಯದ ಈ ಅನ್ಯೋನ್ಯತೆಯ ಅಭಿವ್ಯಕ್ತಿ ಘಟನೆ, ಕಾರ್ಯಕ್ರಮದ ನೇರ ಪ್ರಸಾರ ಮಾಡುತ್ತಿದ್ದ ಬಹುತೇಕ ನ್ಯೂಸ್ ಚಾನೆಲ್ ಗಳಲ್ಲಿ ರಿಪಿಟೆಡ್ ಟೆಲಿಕಾಸ್ಟ್ ಆಯಿತು.
ಪ್ರಧಾನಿ ಮೋದಿ ಹಾಗೂ ಶಾಸಕ ರಾಮದಾಸ್ ನಡುವಿನ ಈ ಸ್ನೇಹ-ಸಂಬಂಧ ಕಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮಾತ್ರವಲ್ಲದೆ, ಸಮಾರಂಭದ ವೇದಿಕೆ ಮೇಲಿದ್ದ ಗಣ್ಯರು ಸಹ ಕೆಲಕಾಲ ಅಚ್ಚರಿಗೂಳ್ಳುವಂತೆ ಮಾಡಿತು.
ಮೋದಿ ಮೋಡಿ :
ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಯೋಗದಿನದ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಭರದಿಂದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯ ಸರಕಾರ ಸಹ ಅಗತ್ಯ ಸಲಹೆ, ಸೂಚನೆ ನೀಡಿ ತುರ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸ್ಥಳೀಯ ಆಡಳಿತಕ್ಕೆ ನಿರ್ದೆಶನ ನೀಡಿತ್ತು.
ಈ ನಡುವೆ ಸಂಸದ ಪ್ರತಾಪ್ ಸಿಂಹ ಹಾಗೂ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ ಎಸ್.ಎ.ರಾಮದಾಸ್ ಅವರ ನಡುವೆ ಮುಸುಕಿನ ಗುದ್ದಾಟ ಆಗಾಗ್ಗೆ ಬಹಿರಂಗವಾಗುತ್ತಲೇ ಇತ್ತು. ಯೋಗ ಕಾರ್ಯಕ್ರಮದ ಸ್ಥಳ ನಿಗಧಿಯಿಂದ ಹಿಡಿದು ಎಷ್ಟು ಜನ ಭಾಗವಹಿಸಬೇಕು ಎಂಬ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ಸಂಸದ ಪ್ರತಾಪ್ ಸಿಂಹ, ಇದು ಕೇಂದ್ರ ಸರಕಾರದ ಕಾರ್ಯಕ್ರಮ. ಕೇಂದ್ರವೇ ಎಲ್ಲವನ್ನು ನಿರ್ಧರಿಸುತ್ತದೆ. ಬೇರೆಯವರು ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಆ ಮೂಲಕ ಶಾಸಕ ರಾಮದಾಸ್ ಅವರನ್ನು ಪರೋಕ್ಷವಾಗಿ ನಿರ್ಲಕ್ಷಿಸಿದ್ದರು.
ಮುಂದುವರಿದು, ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿ, ಪ್ರಧಾನಿ ಮೋದಿ ಮೈಸೂರಿಗೆ ಕರೆ ತರುತ್ತಿರುವುದು ನಾನು, ಇದರಿಂದ ಅಭಿವೃದ್ಧಿ ಕಾಮಗಾರಿಗೆ ಇಷ್ಟಾದರು ಚಾಲನೆ ಸಿಕ್ಕಿದೆ. ಇದಕ್ಕೆ ಮೈಸೂರಿನ ಜನತೆ ನನಗೆ ಅಭಿನಂಧನೆ ಸಲ್ಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಇದು ಮಾಧ್ಯಮಗಳಲ್ಲಿ ಶಾಸಕ ಹಾಗೂ ಸಂಸದರ ನಡುವೆ ಯೋಗ ಕಾರ್ಯಕ್ರಮದ ಆಯೋಜನೆಯ ‘ ಕ್ರೆಡಿಟ್ ವಾರ್ ‘ ನಡೆಯುತ್ತಿದೆ ಎಂದು ಪ್ರಚಾರ ಪಡೆದುಕೊಂಡಿತು.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರೇ ಖುದ್ದು ಶಾಸಕ ರಾಮದಾಸ್ ಜತೆಗೆ ಬಹಿರಂಗವಾಗಿ ವೇದಿಕೆ ಮೇಲೆಯೇ ಅತ್ಯಂತ ಆತ್ಮೀಯತೆಯಿಂದ ವರ್ತಿಸುವ ಮೂಲಕ ಸಂದೇಶ ರವಾನಿಸಿದ್ದು ಮೋದಿ ಮೋಡಿಗೆ ಸಾಕ್ಷಿ.
key words : mysore-yoga.day-narendra-modi-ramadas-mla