ಮೈಸೂರು,ನವೆಂಬರ್,1,2024 (www.justkannada.in): 2023 – 24ನೇ ಸಾಲಿನ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ವಕೀಲರು ಲಾಗೈಲ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಅದ ಹೆಚ್ ಎನ್ ವೆಂಕಟೇಶ್ ಭಾಜನರಾಗಿದ್ದಾರೆ.
ಇವರ ನಿಸ್ವಾರ್ಥ ಕಾನೂನು ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಇವರಿಗೆ ಈ ಪ್ರಶಸ್ತಿಯ ಗೌರವವನ್ನು ಸಲ್ಲಿಸಿದೆ. ಇಂದು ಮೈಸೂರು ವಿವಿಯ ಓವೆಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹಾದೇವಪ್ಪ ಹಿರಿಯ ವಕೀಲರಾದ ಎಚ್ ಎನ್ ವೆಂಕಟೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಮೈಸೂರು ಪೇಟ ತೊಡಿಸಿ ಹಾರ ಹಾಕಿ ಪ್ರಶಸ್ತಿ ಫಲಕ ನೀಡಲಾಯಿತು. ಈ ವೇಳೆ ಶಾಸಕ ತನ್ವೀರ್ ಸೇಠ್ ಹಿರಿಯ ಪತ್ರಕರ್ತ ಎಂ ಬಿ ಮರಮ್ಕಲ್ ಹಿರಿಯ ವಕೀಲರದ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಉದ್ಯಮಿ ಅಭಿಷೇಕ್ ಹೆಗ್ಡೆ ಸೇರಿ ಹಲವು ಗಣ್ಯರು ಹಾಜರಿದ್ದರು.
ಲಾ ಗೈಡ್ ವೆಂಕಟೇಶ್ ಅವರಿಗೆ ಪ್ರಶಸ್ತಿ ತಂದು ಕೊಟ್ಟ ಕಾನೂನು ಮಾಸಪತ್ರಿಕೆ ಹಿನ್ನೆಲೆ
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ 23 ವರ್ಷದ ಹಿಂದೆ ಅಂದರೆ 2000ನೇ ಇಸವಿಯಲ್ಲಿ ಹಿರಿಯ ವಕೀಲರಾದ ಹೆಚ್ ಎನ್ ವೆಂಕಟೇಶ್ ಆರಂಭಿಸಿದ ಕಾನೂನು ಪತ್ರಿಕೆ. ಕಾನೂನಿನ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಬೇಕು ಅದರಲ್ಲೂ ನಮ್ಮ ಮಾತೃಭಾಷೆ ಕನ್ನಡದಲ್ಲಿ ಅವರಿಗೆ ಮಾಹಿತಿ ಸಿಗಬೇಕು ಎನ್ನುವ ಕಾರಣಕ್ಕೆ ಎಚ್ ಎನ್ ವೆಂಕಟೇಶ್ ಈ ಪತ್ರಿಕೆಯನ್ನು ಆರಂಭಿಸಿದರು. ಕಳೆದ 23 ವರ್ಷಗಳಿಂದಲೂ ಯಶಸ್ವಿಯಾಗಿ ಜನ ಸಾಮಾನ್ಯರಿಗೆ ಕಾನೂನಿನ ತಿಳುವಳಿಕೆ ಹಾಗೂ ಮಾಹಿತಿ ನೀಡುತ್ತಾ ಪತ್ರಿಕೆ 24ನೇ ವರ್ಷಕ್ಕೆ ಕಾಲಿಟ್ಟಿದೆ.
ಸಮಾಜಮುಖಿ ಕಾರ್ಯಗಳು – ತರಬೇತಿ ಕಾರ್ಯಾಗಾರಗಳು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಲಾಗೈಡ್ ವೆಂಕಟೇಶ್ ಅವರು ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ವಕೀಲರಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಲಾಗಿದೆ. ಅಷ್ಟೇ ಅಲ್ಲ ಲಾಗೈಡ್ ವತಿಯಿಂದ ಹಲವು ಕಾನೂನಿನ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ನೀಡುತ್ತಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಸರ್ಕಾರಿ ಅಭಿಯೋಜಕರ ( ಅಸಿಸ್ಟೆಂಟ್ ಪಿಪಿ ಹಾಗೂ ಪಿಪಿ ) ಪರೀಕ್ಷೆಗೆ ಸಿದ್ದವಾಗುವವರಿಗೆ ತಜ್ಞರಿಂದ ಉಚಿತ ತರಬೇತಿ ನೀಡಿಸಿ ಪಾಠ ಮಾಡಿಸುತ್ತಿದ್ದಾರೆ. ನ್ಯಾಯಾಧೀಶರಾಗಿ ಆಯ್ಕೆಯಾಗಲು ಬೇಕಾದ ತರಬೇತಿಯನ್ನು ನೀಡಿದ ಹೆಗ್ಗಳಿಕೆ ಲಾ ಗೈಡ್ ಕನ್ನಡ ಕಾನೂನು ಬಳಗದ್ದಾಗಿದೆ. ಇದನ್ನು ಇದೇ ರೀತಿ ಮುಂದುವರಿಸಬೇಕೆಂಬುದು ಎಚ್ ಎನ್ ವೆಂಕಟೇಶ್ ಅವರ ಆಶಯವಾಗಿದೆ. ಕಾನೂನಿನ ಸಹಾಯ ಹಸ್ತ ಎಲ್ಲರಿಗೂ ಸಿಗಬೇಕೆನ್ನುವ ಎಚ್ ಎನ್ ವೆಂಕಟೇಶ್ ಅವರ ಮಹತ್ತರವಾದ ಕನಸಿಗೆ ವಿವಿಧ ಕ್ಷೇತ್ರದ ಹಲವು ಸಮಾನ ಮನಸ್ಕರು ಜೊತೆಯಾಗಿದ್ದಾರೆ. ಇವರ ಈ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದೇ ವೇಳೆ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಎಚ್ ಎನ್ ವೆಂಕಟೇಶ್ ರಾಜ್ಯೋತ್ಸವ ಪ್ರಶಸ್ತಿ ನೀಡಿದಕ್ಕೆ ಮೈಸೂರು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು. ಇದು ನನಗೆ ವೈಯಕ್ತಿಕವಾಗಿ ಸಿಕ್ಕ ಗೌರವ ಅಲ್ಲ ನನ್ನ ಲಾಗೈಡ್ ಬಳಗಕ್ಕೆ ಸಿಕ್ಕ ಗೌರವ. ಕಾನೂನು ಸರಳವಾಗಿ ಎಲ್ಲರಿಗೂ ಅರ್ಥವಾಗಬೇಕು ಅನ್ನೋ ಕಾರಣಕ್ಕೆ ಕನ್ನಡದಲ್ಲಿ ಕಾನೂನನ್ನು ಜನ ಸಾಮಾನ್ಯರಿಗೆ ಅರ್ಥ ಮಾಡಿಸಲು ನಾನು ಲಾಗೈಡ್ ಕನ್ನಡ ಕಾನೂನು ಪತ್ರಿಕೆ ಆರಂಭಿಸಿದೆ. ನನ್ನ ಸ್ನೇಹಿತರು ಅದಕ್ಕೆ ಸಾಥ್ ಕೊಟ್ಟರು. ಲಾಗೈಡ್ ಪತ್ರಿಕೆ ಮೂಲಕ ಹತ್ತು ಹಲವು ಸಮಾಜಮುಖಿ ಕೆಲಸಗಳು ಆಯ್ತು. ಇಂದು ಲಾಗೈಡ್ ನ್ಯಾಯಾಂಗ ವ್ಯವಸ್ಥೆಯ ಒಂದು ಭಾಗವಾಗಿದೆ. ನ್ಯಾಯಮೂರ್ತಿಗಳು ವಕೀಲರು ನ್ಯಾಯಾಲಯದ ಸಿಬ್ಬಂದಿ ಜನ ಸಾಮಾನ್ಯರಿಗೂ ಲಾಗೈಡ್ ಪತ್ರಿಕೆ ತಲುಪುತ್ತಿದೆ. ಜೊತೆಗೆ ನಮ್ಮ ಲಾಗೈಡ್ ಈಗ 25 ವರ್ಷ ಪೂರೈಸಿದೆ. ಇದೇ ಸಂದರ್ಭದಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಖಂಡಿತಾ ಕನ್ನಡಲ್ಲೇ ನಮ್ಮ ಸೇವೆ ಮುಂದುವರಿಯುತ್ತೇ, ಇನ್ನು ಹೆಚ್ಚು ಹೆಚ್ಚು ಜನರಿಗೆ ಕಾನೂನು ಕನ್ನಡದಲ್ಲೇ ಅರ್ಥ ಮಾಡಿಸುವ ಕೆಲಸ ನಾವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
Key words: mysore, Zilla Rajyotsava award, Law Guide , Editor, HN Venkatesh