ಮೈಸೂರು,ಡಿ.14,2019(www.justkannada.in): ಹಲವು ವೈಶಿಷ್ಟ್ಯತೆಗಳನ್ನ ಹೊಂದಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಇದೀಗ ವಿಶ್ವಗಮನ ಸೆಳೆದಿದೆ. ಜಿರಾಫೆಯೊಂದನ್ನು ಮೈಸೂರಿನಿಂದ ಸುಮಾರು 3200 ಕಿ.ಮೀ ದೂರದ ಗುವಾಹಟಿಗೆ ರಸ್ತೆ ಮಾರ್ಗದಲ್ಲಿ ಸಾಗಿಸುವ ಮೂಲಕ ಮೈಸೂರು ಮೃಗಾಲಯ ದಾಖಲೆಯೊಂದನ್ನು ಬರೆದಿದೆ.
ಹೌದು, ವಿಶ್ವದ ಮುಂಚೂಣಿ ಮೃಗಾಲಯಗಳಲ್ಲಿ ಒಂದೆನಿಸಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಇದೀಗ 12 ಅಡಿ ಎತ್ತರದ ಜಿರಾಫೆಯೊಂದನ್ನು ದೊಡ್ಡ ಲಾರಿಯೊಂದರಲ್ಲಿ ರಸ್ತೆ ಮಾರ್ಗವಾಗಿ ಸಾಗಿಸುವ ಮೂಲಕ ದಾಖಲೆ ಬರೆದಿದೆ. ಮೈಸೂರು ಮೃಗಾಲಯದಲ್ಲೇ ಜನಿಸಿದ 14 ತಿಂಗಳಿನ ಚಾಮರಾಜೇಂದ್ರ ಜಿರಾಫೆಯನ್ನು ಪ್ರಾಣಿ ವಿನಿಮಯ ಯೋಜನೆಯಡಿ ಗುವಾಹಟಿಯ ಮೃಗಾಲಯಕ್ಕೆ ಸಾಗಿಸಲಾಗಿದೆ.
ಚಾಮರಾಜೇಂದ್ರ ಹನ್ನೆರಡು ಅಡಿ ಎತ್ತರವಿದ್ದು ಈ ಜಿರಾಫೆಯನ್ನ 14 ಅಡಿ ಎತ್ತರದ ಬೋನಿನಲ್ಲಿ ಹಾಕಿಕೊಂಡು ಲಾರಿಯಲ್ಲಿ ಸುಮಾರು3200 ಕಿ.ಮೀ ದೂರದ ಗುವಾಹಟಿಗೆ ಸಾಗಿಸಲಾಗಿದೆ. 7 ರಾತ್ರಿ , 7 ಹಗಲು ದಿನವೊಂದಕ್ಕೆ 460 ಕಿ.ಮಿ ದೂರ ಪ್ರಯಾಣಿಸಿ ದೇಶದ ಇತಿಹಾಸದಲ್ಲಿಯೇ ಜಿರಾಫೆಯಂತಹ ದೊಡ್ಡ ಪ್ರಾಣಿಯನ್ನು ರಸ್ತೆ ಮಾರ್ಗದಲ್ಲಿ 3200 ಕಿ.ಮಿ ದೂರ ಸಾಗಿಸಿರುವ ದಾಖಲೆಗೆ ಮೈಸೂರು ಮೃಗಾಲಯ ಪಾತ್ರವಾಗಿದೆ.
ನ. 28ರಂದು 14 ಚಕ್ರದ ಲೋ ಪ್ಲೋರ್ ಲಾರಿಯಲ್ಲಿ ಚಾಮರಾಜೇಂದ್ರನನ್ನು ಗುವಾಹಟಿ ಮೃಗಾಲಯ ಕೊಂಡೊಯ್ಯಲು ಪ್ರಯಾಣ ಬೆಳೆಸಲಾಗಿತ್ತು. ಪಶುವೈದ್ಯ ಡಾ.ರಮೇಶ್ ನೈತೃ ತ್ವದಲ್ಲಿ ಸೂಪರ್ ವೈಸರ್ ಉದಯ್, ಪ್ರಾಣಿ ಪಾಲಕರಾದ ವಿನೋದ್, ಸ್ವಾಮಿ, ಮಧು, ಕುಮಾರ್ ಹಾಗೂ ಸ್ವಾಮಿ ಇದ್ದ ಏಳು ಜನರ ತಂಡ ಜಿರಾಫೆಯೊಂದಿಗೆ ಪ್ರಯಾಣ ಬೆಳೆಸಿದ್ದರು. ಮಾರ್ಗದುದ್ದಕ್ಕೂ ಜಿರಾಫೆಗೆ ಹೆಚ್ಚು ಬಿಸಿಲು ಬೀಳದಂತೆ ಕಟ್ಟೆಚ್ಚರವಹಿಸಿ ಸವಾಲಿನ ಕೆಲಸವನ್ನು ಈ ತಂಡ ಯಶಸ್ವಿಯಾಗಿ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಮೈಸೂರು, ಮಂಡ್ಯ, ಬೆಂಗಳೂರು ಮಾರ್ಗವಾಗಿ ತೆಲಂಗಾಣ, ಅಸ್ಸಾಂ, ಪಶ್ಚಿಮ ಬಂಗಾಳವನ್ನು ಸರಾಗವಾಗಿ ತಲುಪಿದ ಚಾಮರಾಜೇಂದ್ರ ಇದ್ದ ಟ್ರಕ್ ಕೊಲ್ಕತ್ತ ಪ್ರವೇಶಿಸುತ್ತಿದ್ದಂತೆ ಹೆಜ್ಜೆ ಹೆಜ್ಜೆಗೂ ಟ್ರಾಫಿಕ್ ಜಾಮ್ ಗೆ ಸಿಲುಕಿದೆ. ಎದುರಾದ ಎಲ್ಲಾ ಅಡೆತಡೆಗಳನ್ನು ಹಿಮ್ಮೆಟ್ಟಿ ಡಿ.5ರಂದು ಗುವಾಹಟಿ ಮೃಗಾಲಯಕ್ಕೆ ತಲುಪಿದೆ. ಮೈಸೂರು ಮೃಗಾಲಯದ ಈ ಅಸಾಧಾರಣ ಸಾಧನೆಗೆ ದೇಶದ ಇತರೆ ಮೃಗಾಲಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಸವಾಲು ಹಿಮ್ಮೆಟ್ಟಿ ಗುರಿ ತಲುಪಿಸಿದ್ದೇವೆ – ಮೈಸೂರು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ..
12 ಅಡಿ ಎತ್ತರ ಹೊಂದಿದ್ದ ಚಾಮರಾಜೇಂದ್ರನನ್ನು 16 ಅಡಿ ಎತ್ತರದ ಬೋನ್ ನೊಳಗೆ ಹಾಕಿಕೊಂಡು ಏಳು ದಿನದಲ್ಲಿ ಗುವಾಹಟಿ ಮೃಗಾಲಯಕ್ಕೆ ತಲುಪಿಸಿದ್ದೇವೆ. ರಸ್ತೆ ಮಾರ್ಗದಲ್ಲಿ 3200 ಕಿ.ಮಿ ದೂರ ದೊಡ್ದ ಪ್ರಾಣಿಯನ್ನು ಸಾಗಿಸಿರುವುದು ದಾಖಲೆ. ರಾಜ್ಯದಲ್ಲಿ ಚೆಸ್ಕಾಂ ಸಿಬ್ಬಂದಿ ಲಾರಿ ಮೇಲಿಡಲಾಗಿದ್ದ ಬೋನ್ ಗೆ ವಿದ್ಯುತ್ ತಂತಿ ತಾಗದಂತೆ ಸಹಕರಿಸಿದರೆ, ರಾಜ್ಯದ ಉದ್ದಗಲಕ್ಕೂ ಪೊಲೀಸರು ಸಂಚಾರ ನಿಯಂತ್ರಿಸಿ ಸುಗಮವಾಗಿ ಟ್ರಕ್ ಸಂಚಾರಕ್ಕೆ ನೆರವು ನೀಡಿದ್ದಾರೆ. ಎರಡು ಇಲಾಖೆಗೂ ಮೃಗಾಲಯದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇವೆ.
Key words: Mysore Zoo- Record -3200km – giraffe – Carry – Guwahati Zoo