ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಜಿ.ಪಂ ಸಿಇಒ ಬಿ.ಆರ್.ಪೂರ್ಣಿಮಾ

 

ಮೈಸೂರು,ಏಪ್ರಿಲ್,4,2022(www.justkannada.in): ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ನಡೆಯುತ್ತಿರುವ ಎಸ್.ಎಸ್ ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ. ಆರ್.ಪೂರ್ಣಿಮಾ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಮಹಾರಾಜ ಸರ್ಕಾರಿ ಪ್ರೌಢಶಾಲೆ, ಐಡಿಯಲ್ ಜಾವಾ ರೋಟರಿ ಶಾಲೆ ಮತ್ತು ಮರಿಮಲ್ಲಪ್ಪ ಪ್ರೌಢಶಾಲೆ ಸೇರಿ ಮೊದಲಾದ ಶಾಲೆಗಳಿಗೆ ಭೇಟಿ ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳು ಯಾವುದೇ ಭಯ ಇಲ್ಲದೆ, ಆತಂಕಕ್ಕೂ ಒಳಗಾಗದೇ ಸೂಸುತ್ರವಾಗಿ ಪರೀಕ್ಷೆ ಬರೆಯುವ ದಿಸೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವಂತೆ ಹೇಳಿದರು.

ಇದರೊಟ್ಟಿಗೆ ಈಗಾಗಲೇ ನಡೆದಿರುವ ವಿಷಯಗಳ ಮಾಹಿತಿ ಹಾಗೂ ಇಂದಿನ ಗಣಿತ ಪರೀಕ್ಷೆಯ ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಪರೀಕ್ಷೆಗೆ ಗೈರಾಗುವ ವಿದ್ಯಾರ್ಥಿಗಳ ಮಾಹಿತಿ ವಿವರವನ್ನು ಆಯಾ ಶಿಕ್ಷಕರು ಪಡೆದು, ಅಂದೆ ನಮೂದಿಸುವಂತೆಯೂ ಶಾಲಾ ಶಿಕ್ಷಕರಿಗೆ ಸೂಚಿಸಿದರು.

ಶಾಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಅನುಸರಿಸಿರುವ ಮುಂಜಾಗ್ರತ ಕ್ರಮ, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮುಂಜಾಗ್ರತಾ ಪ್ರಥಮ ಚಿಕಿತ್ಸೆ ವ್ಯವಸ್ಥೆ ಸೇರಿ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಬಳಿಕ ನಂತರ ಎಸ್.ಎಸ್.ಎಲ್.ಸಿ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿ ಶಾಲಾ ಶಿಕ್ಷಕರೊಂದಿಗೆ ಚರ್ಚಿಸಿದರು.

ಈ ವೇಳೆ ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words:mysore-ZP- CEO -BR Purnima-, visited – SSLC- examination- centers