ಮೈಸೂರು,ನವೆಂಬರ್,04,2020(www.justkannada.in) : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಂಬೂ ಸವಾರಿ ದಿನದಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಮಹಾರಾಜರಿಗೆ ಅವಕಾಶ ನೀಡದೆ ತಾನೇ ಮುಂದೆ ಬಂದು ಪುಷ್ಪಾರ್ಚನೆ ಮಾಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.
ಈ ಕುರಿತು ಶಾಸಕ ಸಾರಾ ಮಹೇಶ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ರಾಜವಂಶಸ್ಥರಿಗೆ ಸ್ಥಳಾವಕಾಶ ನೀಡದೆ, ಕೊನೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ
ನಿಯಮದ ಪ್ರಕಾರ ಮೊದಲು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರು ಮತ್ತು ರಾಜ ವಂಶಸ್ಥರು ನಂತರದಲ್ಲಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ನಿಲ್ಲಬೇಕು. ಆದರೆ, ಜಿಲ್ಲಾಧಿಕಾರಿ ರೊಹಿಣಿ ಸಿಂಧೂರಿ ರಾಜವಂಶ್ಥರಿಗೆ ಸ್ಥಳಾವಕಾಶ ನೀಡದೆ ಅವರನ್ನೆ ಕೊನೆಯಲ್ಲಿ ನಿಲ್ಲುವಂತೆ ಮಾಡಿದ್ದು, ಇದು ಶಿಷ್ಟಾಚಾರ ಹಾಗೂ ಸಂಪ್ರದಾಯದ ಶಿಷ್ಟಾಚಾರ ಉಲ್ಲಂಘನೆ ಆಗಿರುತ್ತೆ ಎಂದು ರೋಹಿಣಿ ಸಿಂಧೂರಿ ವಿರುದ್ದ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ವಾಲ್ಮೀಕಿ ಜಯಂತಿಯಂದು ರೆಸಾರ್ಟ್ ನಲ್ಲಿ ವಾಸ್ತವ್ಯ
ವಾಲ್ಮೀಕಿ ಜಯಂತಿಯಂದು ಜಿಲ್ಲಾಡಳಿ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಯಮ. ಆದರೆ, ಸದರಿ ಜಿಲ್ಲಾಧಿಕಾರಿ ವಾಲ್ಮೀಕಿ ಜಯಂತಿಯಂದು ಕಾರ್ಯಕ್ರಮದಲ್ಲಿ ಭಾಗವಹಿಸದೇ ರೆಸಾರ್ಟ್ ವಾಸ್ತವ್ಯ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ರಾಮಾಯಣ ಬರೆದ ಮಹಾಪುರುಷ ವಾಲ್ಮೀಕಿ ಅವರಿಗೆ ಕುರಿತ ದಿವ್ಯ ನಿರ್ಲಕ್ಷ್ಯ ಆಗಿರುತ್ತೆ ಎಂದು ದೂರಿದ್ದಾರೆ.
ನಾಡಿನ ಶಿಷ್ಟಾಚಾರ ಸಂಪ್ರದಾಯ, ಪರಂಪರೆಗಳ ಕುರಿತು ತಿಳುವಳಿಕೆ ನೀಡುವಂತೆ ಮನವಿ
ಇದು ಜಿಲ್ಲಾಧಿಕಾರಿಗಳಿಂದ ನಿರೀಕ್ಷಿಸಬಹುದಾದ ನಡೆ ಅಲ್ಲಾ. ಇತರ ಕಿರಿಯ ಅಧಿಕಾರಿಗಳಿಗೆ ಹಾಕಿ ಕೊಡುವ ಉತ್ತಮ ಮೇಲ್ಪಂಕ್ತಿ ಆಗಿರುವುದಿಲ್ಲ. ಜಿಲ್ಲಾಧಿಕಾರಿಗಳಿಗೆ ನಾಡಿನ ಶಿಷ್ಟಾಚಾರ ಸಂಪ್ರದಾಯ ಹಾಗೂ ಪರಂಪರೆಗಳ ಕುರಿತಾಗಿ ಸೂಕ್ತ ತಿಳುವಳಿಕೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಸಾರಾ ಮಹೇಶ್ ಮನವಿ ಮಾಡಿದ್ದಾರೆ.
key words : Mysore-DC-violation-discipline-MLA-charged