ಮೈಸೂರು,ಡಿಸೆಂಬರ್,29,2020(www.justkannada.in) : ಕುವೆಂಪು ಕವಿಯಾಗಿ ಕನ್ನಡ ದೇವಿಯ ಕರದಲ್ಲಿ ವೀಣೆಯಾಗಿ ನುಡಿದರು. ತಾರತಮ್ಯಗಳ ವಿರುದ್ಧ ಪಂಚಜನ್ಯವಾಗಿ ಮೊಳಗಿದರು. ವಿಚಾರಕ್ರಾಂತಿಗೆ ಆಹ್ವಾನ ನೀಡಿದರು. ಕನ್ನಡ ನುಡಿಯ ಬೆಡಗನ್ನು ಸಮಸ್ತರಿಗೆ ಅರುಹಿದರು ಎಂದು ರಾಷ್ಟ್ರಕವಿ ಕುವೆಂಪು ಅವರನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸ್ಮರಿಸಿದರು.ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘’ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಅಧ್ಯಯನ ಸಂಸ್ಥೆ ಕುವೆಂಪು ಅವರ ಹೆಸರಿನ ಸಂಸ್ಥೆಯಾಗಿದ್ದು, ಸಹಜವಾಗಿಯೇ ಇಲ್ಲಿ ಅವರ ಚೇತನ ಹರಿದಾಡುವ ಕುರುಹುಗಳಿದೆ. ಈ ಪ್ರದೇಶದಲ್ಲಿ ಸಂಚರಿಸುವವರಿಗೆ ವಿದ್ಯುತ್ ಸಂಚಾರವಾದಂತ್ತಾಗುತ್ತದೆ. ಕನ್ನಡದ ಜೊತೆಗೆ ಜಾನಪದ, ಭಾಷಾವಿಜ್ಞಾನ ದಕ್ಷಿಣ ಭಾರತ ಅಧ್ಯಯನಗಳು ಇಲ್ಲಿ ಸೇರ್ಪಡೆಯಾಗಿದ್ದು, ಇದೊಂದು ಮಿನಿ ವಿಶ್ವವಿದ್ಯಾಲಯವಾಗಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಕಟ್ಟಡ ವಿಸ್ತರಣೆಯ ವಿಷಯದಲ್ಲಿ ಕ್ಷಿಪ್ರವಾಗಿ ನಿರ್ಣಯ ತೆಗೆದುಕೊಂಡು ಪೂರೈಸಲಾಗಿದೆ. ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಪೀಠಗಳು ಕಾರ್ಯಪ್ರವೃತ್ತವಾಗುವಂತೆ ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕುವೆಂಪು ಕಾವ್ಯಾಧ್ಯಯನ ಪೀಠ ಮತ್ತು ಬಸವೇಶ್ವರ ಪೀಠ ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದೆ. ಪ್ರೊ.ಎನ್.ಬೋರಲಿಂಗಯ್ಯ ಅವರು ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಕುವೆಂಪು ಅವರ ವಿಚಾರಧಾರೆಗಳನ್ನು ಹೊಸ ಬೆಳಕಿನಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಕುವೆಂಪು ಅವರ ಬರವಣಿಗೆಯಿಂದ ಮೂಕಲೋಕ ಮಾತನಾಡತೊಡಗಿತು. ಶೂದ್ರ ಸಮುದಾಯದಲ್ಲಿ ನವಜಾಗೃತಿ ಉಂಟಾಯಿತು. ಸಾಹಿತ್ಯದಲ್ಲಿ ಅದುವರೆಗೂ ಅಷ್ಟಾಗಿ ಕಾಣಿಸಿಕೊಂಡಿರದಿದ್ದ ಲೋಕವೊಂದು ಅನಾವರಣಗೊಂಡಿತು. ಕುವೆಂಪು, ಸಾಮಾಜಿಕ ತಾರತಮ್ಯಗಳ ವಿರುದ್ಧ ಹೋರಾಡಿದ ಒಬ್ಬ ವೀರಾಗ್ರಣಿಯಂತೆ ತೋರಿದರು, ಉಪನಿಷತ್ತಿನ ಋಷಿಗಳ ದರ್ಶನವನ್ನೂ ಅವರು ತಮ್ಮದಾಗಿಸಿಕೊಂಡಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು.ಕುವೆಂಪು ಅವರ ಅಖಂಡ ವ್ಯಕ್ತಿತ್ವವನ್ನು ಅರಿತುಕೊಳ್ಳಲು ನಾವು ಪ್ರಯತ್ನಿಸಿದಾಗ ಮಾತ್ರ ನಮಗೆ ಲಾಭವಾಗುತ್ತದೆ. ಇಲ್ಲದಿದ್ದರೆ ಆನೆಯನ್ನು ಅಂದಾಜು ಮಾಡಲು ಮುಂದಾದ ಅಂಧರಂತಾಗುತ್ತೇವೆ. ಕುವೆಂಪು ಅವರ ಚಿಂತನೆಗಳು ಜನಜನಿತವಾಗಬೇಕಾಗಿದೆ. ಪ್ರಸ್ತುತ ಕಾಲದಲ್ಲಿ ಅವರ ಅಲೋಚನೆಗಳನ್ನು ಸಮಾಜದ ಎಲ್ಲ ವರ್ಗದ ಜನರು ಧ್ಯಾನಿಸಿ ಅನುಷ್ಠಾನಕ್ಕೆ ತಂದ ಪಕ್ಷದಲ್ಲಿ ಕರ್ನಾಟಕ ಹೊಸ ವರ್ಚಸ್ಸಿನಿಂದ ಕಂಗೊಳಿಸುವಂತಾಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಇಂಥ ತತ್ವಜ್ಞಾನಿಯನ್ನು, ಕವಿಪುಂಗವರನ್ನು ವಿದ್ಯಾರ್ಥಿ ಸಮುದಾಯಕ್ಕೆ ಅರ್ಥಪೂರ್ಣವಾಗಿ ತಲುಪಿಸುವ ಕಾರ್ಯದಲ್ಲಿ ಬೋಧಕರು ಹೊಸ ಹುರುಪಿನಿಂದ ತೊಡಗಿಸಿಕೊಳ್ಳಬೇಕಾಗಿದೆ. ಈ ಸಂಸ್ಥೆಯಲ್ಲಿ ಕರ್ತವ್ಯನಿರತರಾದ ಬೋಧಕರು ತಮ್ಮ ಮೇಲಿರುವ ಗುರುತರವಾದ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು. ಯುವಜನತೆ ಕುವೆಂಪು ಅವರು ತೋರಿರುವ ಮಾರ್ಗದ ಕುರಿತು ಗಂಭೀರವಾಗಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಉಜ್ವಲ ರಾಷ್ಟ್ರೀಯತೆಯ ಕನಸು ನಮಗೆ ಅತ್ಯಗತ್ಯ. ಆದರೆ, ನಮ್ಮನ್ನು ಇಂದು ಕಾಪಾಡಬೇಕಾಗಿರುವುದು ವಿಶ್ವಮಾನವ ಪ್ರಜ್ಞೆ. ಕುವೆಂಪು ನೀಡಿರುವ ಪಂಚಮಂತ್ರ, ಸಪ್ತಸೂತ್ರ ಹಾಗೂ ವಿಶ್ವಮಾನವಗೀತೆ ನಮ್ಮನ್ನು ಎಂದೆಂದೂ ಮುನ್ನಡೆಸುವ ದಾರಿದೀವಿಗೆಯಾಗಿದೆ ಎಂದು ತಿಳಿಸಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎನ್.ಬೋರಲಿಂಗಯ್ಯ, ಪ್ರೊ.ಸಿ.ಪಿ.ಸಿದ್ಧಾಶ್ರಮ, ಪ್ರೊ.ಆರ್.ರಾಮಕೃಷ್ಣ, ಜಾನಪದ ಪ್ರಾಧ್ಯಾಪಕ ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಎಂ.ಜಿ.ಮಂಜುನಾಥ್ ಇದ್ದರು.
English summary….
“Kuvempu memory at University of Mysore
Mysuru, Dec. 29, 2020 (www.justkananda.in): The Kuvempu Kannada Adhyayana Samsthe, University of Mysore had organised a prize distribution programme on the occasion of the 117th Birth anniversary of the National poet Kuvempu.
Prof. G. Hemanth Kumar, Vice-Chancellor, University of Mysore inaugurated the programme. In his address, he said along with Kannada the center also conducts research in folk, languages, and South India studies and he called it a ‘Mini University’.
“Keeping in mind the development of the center swift decisions were taken for extension of the building and fulfilled. Efforts are being made to motivate the different departments that are functioning under this center to become more functional. The Kuvempu Kaavyadhyayana Peetha and Basaveshwara Peethas are doing good works in this regard. As a guest professor of the Kuvempu Kaavyadhyayana Peetha, Prof. N. Boralingaiah has given a new definition to Kuvempu’s thoughts,” he said.
Prof. R. Shivappa, Registrar, UoM, Prof. N. Boralingaiah, former Professor, Prof. C.P. Siddashrama, Prof. R. Ramakrishna, Prof. Nanjaiah Honganuru, Folk Professor, Prof. M.G. Manjunath, and others were present.
Keywords: Kuvempu’s 117th birth anniversary/ University of Mysore
key words : Mysore-University-kuvenpu-Memory …!