ಮೈಸೂರು:ಆ-24:(www.justkannada.in) ಕಳೆದ ಜೂನ್ ತಿಂಗಳಿನಿಂದ ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಚಾರ ಆರಂಭವಾಗಿದ್ದು, ಒಂದೇ ತಿಂಗಳಿನಲ್ಲಿ 1000ಕ್ಕೂ ಹೆಚ್ಚು ಪ್ರಯಾಣಿಕರು ಉಬಯ ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.
ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್ ಜೂನ್ 7 ರಿಂದ ಉಡಾನ್ ಯೋಜನೆಯಡಿಯಲ್ಲಿ ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಂಕಿಅಂಶಗಳ ಪ್ರಕಾರ 605 ಪ್ರಯಾಣಿಕರು ಬೆಂಗಳೂರಿನಿಂದ ಮೈಸೂರಿಗೆ ಹಾಗೂ 581 ಪ್ರಯಾಣಿಕರು ಮೈಸೂರಿನಿಂದ ಬೆಂಗಳೂರಿಗೆ ಈ ವರೆಗೆ ಪ್ರಯಾಣಿಸಿದ್ದಾರೆ.
ಮಂಗಳವಾರ ಮತ್ತು ಬುಧವಾರಗಳನ್ನು ಹೊರತುಪಡಿಸಿ ವಾರದಲ್ಲಿ ಐದು ದಿನಗಳು 70 ಆಸನಗಳ ಅಲೈಯನ್ಸ್ ಏರ್ ಉಭಯ ನಗರಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಬಹುದಿನಗಳ ನಂತರ 2017ರಿಂದ ಮೈಸೂರಿನಿಂದ ಚೆನ್ನೈಗೆ ಮಾತ್ರ ವಿಮಾನ ಸಂಚಾರ ಆರಂಭಿಸಿತ್ತು. ಇದೀಗ ಕೇಂದ್ರದ ಉಡಾನ್ -3 ಯೋಜನೆಯಂತೆ ಮೈಸೂರು ಹಾಗೂ ಬೆಂಗಳೂರು, ವಿಜಯವಾಡ-ವೈಜಾಗ್ ನಡುವೆ ವಿಮಾನಯಾನ ಆರಂಭವಾಗಿದೆ.
ಜೂನ್ ತಿಂಗಳಿನಲ್ಲಿ ಒಟ್ಟು 3,446 ಪ್ರಯಾಣಿಕರು ಚೆನ್ನೈ ಮತ್ತು ಮೈಸೂರು ನಡುವೆ ವಿಮಾನದ ಮೂಲಕ ಪ್ರಯಾಣಿಸಿದರೆ, 174 ಪ್ರಯಾಣಿಕರು ವಿಜಯವಾಡಕ್ಕೆ ಮತ್ತು 103 ಪ್ರಯಾಣಿಕರು ಮೈಸೂರಿನಿಂದ ವಿಶಾಖಪಟ್ಟಣಂಗೆ ಪ್ರಯಾಣಿಸಿದ್ದಾರೆ.