Mysuru Dasara:  ಆಚರಣೆಗೆ 40 ಕೋಟಿ ವರೆಗೂ ಅನುದಾನ ಬಳಕೆ.

Chief Minister has given permission to allow utilisation of funds up to Rs 40 crore for Dasara celebrations this year. He said that all roads in Mysuru city will be inspected and potholes will be closed and re-asphalted

 

Chief Minister has given permission to allow utilisation of funds up to Rs 40 crore for Dasara celebrations this year. He said that all roads in Mysuru city will be inspected and potholes will be closed and re-asphalted.

ಮೈಸೂರು ಆಗಸ್ಟ್ 16,2024: (www.justkannada.in news ) ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರಾಜ್ಯದ ಜನರು ಖುಷಿಯಿಂದ ಇದ್ದಾರೆ. ಆದ್ದರಿಂದ ವಿಶ್ವವಿಖ್ಯಾತ  ನಾಡ ಹಬ್ಬ ದಸರಾ ವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ದಸರಾ ಆಚರಣೆ ಕುರಿತ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿ ದಸರಾ ಆಚರಣೆಗೆ ಅನುದಾನ, ಅನುದಾನ ಬಳಕೆಗೆ 4ಜಿ ವಿನಾಯಿತಿ ನೀಡುವ ಬಗ್ಗೆ ಹಾಗೂ ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ.  ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಬೇಕು.  ಅಕ್ಟೋಬರ್ 03 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45 ಗಂಟೆಯೊಳಗೆ  ದಸರಾ ಉದ್ಘಾಟನೆ  ಮಾಡಲಾಗುವುದು ಎಂದರು.

ಈ ಬಾರಿ ದಸರಾ ಆಚರಣೆಗೆ 40 ಕೋಟಿ ವರೆಗೂ ಅನುದಾನ ಬಳಕೆಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಮೈಸೂರು ನಗರದ ಎಲ್ಲಾ ರಸ್ತೆಗಳನ್ನು ಪರಿಶೀಲಿಸಿ ಗುಂಡಿ ಮುಚ್ಚಿ, ಮರು ಡಾಂಬರೀಕರಣ ಮಾಡಲಾಗುವುದು ಎಂದರು.

ದಸರಾ ಆಚರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಆಹಾರ ಮೇಳವನ್ನು ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸಬೇಕು ಎಂದರು.

ಸ್ತಬ್ಧ ಚಿತ್ರಗಳ ಲ್ಲಿ ಕರ್ನಾಟಕ ಸರ್ಕಾರದ 5 ಗ್ಯಾರೆಂಟಿಗಳ ಕುರಿತ ಸ್ತಬ್ಧ ಚಿತ್ರಗಳು ಇರಬೇಕು. ಜೊತೆಗೆ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಸ್ತಬ್ಧ ಚಿತ್ರ ಇರಬೇಕು. ದೀಪಾಲಂಕಾರ 21 ದಿನಗಳ ಕಾಲ ಇರಬೇಕು. ದೀಪಾಲಂಕಾರ ದಸರಾ ಆಚರಣೆ ಯ ಮೇರುಗನ್ನು ಹೆಚ್ಚಿಸುತ್ತದೆ. ದೀಪಾಲಂಕಾರವನ್ನು ದಸರಾ ಮಹೋತ್ಸವದಲ್ಲಿ ಪ್ರಮುಖ ವೃತ್ತಗಳಲ್ಲಿ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳಿಗೆ ಕಳೆದ ಎರಡು ವರ್ಷಗಳಲ್ಲಿನ ಕಾರ್ಯಕ್ರಮಗಳು ಹಾಗೂ ಕಲಾವಿದರೂ ಪುನರಾವರ್ತನೆಯಾಗದಂತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಚಿವರು ತಿಳಿಸಿದರು.

ಚಿಣ್ಣರ ದಸರಾ, ಮಹಿಳಾ ದಸರಾ ಹಾಗೂ ರೈತ ದಸರ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಸಬೇಕು. ಸ್ವತಂತ್ರ ದೇಶಾಭಿಮಾನದ  ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ದಸರಾ ಆಚರಣೆಗೆ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಗಜ ಪಯಣವನ್ನು ಆಗಸ್ಟ್ 21 ರಂದು ನಿಗದಿ ಮಾಡಲಾಗಿದೆ. ಕರ್ನಾಟಕ ಸಂಭ್ರಮ 50 ನ್ನು ಆಚರಣೆ ಮಾಡಲಾಗುತ್ತಿದೆ. ಇದರ ಲಾಂಛನವನ್ನು ದಸರಾ ಆಚರಣೆಯಲ್ಲಿ ಅಳವಡಿಸಲಾಗುವುದು.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ವಾರ್ತಾ ಇಲಾಖೆಯ 20 ಬೋರ್ಡ್ ಗಳನ್ನು ಡಿಜಿಟಲೀಕರಣ ಮಾಡಿ ಅಲ್ಲಿ ದಸರಾ ಪ್ರಚಾರವನ್ನು ಮಾಡಬೇಕು. ಆಹಾರ ಮೇಳ ಕನಿಷ್ಠ 1 ತಿಂಗಳು ಇರಬೇಕು. ಆಹಾರ ಮೇಳದಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ನೀಡಬೇಕು. ಕಡಿಮೆ ದರದಲ್ಲಿ ಆಹಾರ ನೀಡಬೇಕು.

ಅರಣ್ಯ ವಸತಿ ಹಾಗೂ ವಿಹಾರ ದಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್.ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾತನಾಡಿ ಅರ್ಜುನ ಆನೆ ವೀರ ಮರಣ ಹೊಂದಿದ್ದು ಅದರ ಹೆಸರಿನಲ್ಲಿ ಮಾವುತರಿಗೆ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರು ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್ ನ ಅಧ್ಯಕ್ಷರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪುಟ್ಟ ರಂಗ ಶೆಟ್ಟಿ, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಕೃಷ್ಣ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್ , ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಎಂ ಗಣೇಶ್ ಪ್ರಸಾದ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್ ಕೃಷ್ಣ ಮೂರ್ತಿ,  ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್, ಡಿ ತಿಮ್ಮಯ್ಯ, ಕೆ ವಿವೇಕಾನಂದ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

key words: Mysuru Dasara-2024, Up to Rs.40 crore, funds utilised, for celebrations

SUMMARY:

The authorities should come forward to get more sponsorship for dasara celebrations.  The dasara will be inaugurated on Oct. 3 at Chamundi Hill between 9.15 am and 9.45 am

Chief Minister has given permission to allow utilisation of funds up to Rs 40 crore for Dasara celebrations this year. He said that all roads in Mysuru city will be inspected and potholes will be closed and re-asphalted.