ಮೈಸೂರು, ಅ.06, 2020 : ( www.justkannada.in news) ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹುದ್ದೆಯಲ್ಲಿ ಮುಂದುವರೆಯುತ್ತಾರೋ ಅಥವಾ ಹಿಂದಿನ ಜಿಲ್ಲಾಧಿಕಾರಿ ಬಿ.ಶರತ್ ಅವರೇ ಮತ್ತೆ ಜಿಲ್ಲಾಧಿಕಾರಿಯಾಗುತ್ತಾರೋ ಎಂಬ ಕುತೂಹಲಕ್ಕೆ ನಾಳೆ ಅಂತಿಮ ತೆರೆ ಬೀಳಲಿದೆ.
ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಏಕಾಏಕಿ ತಮ್ಮನ್ನು ವರ್ಗಾವಣೆ ಮಾಡಿದ ಕ್ರಮ ಪ್ರಶ್ನಿಸಿ ನಿರ್ಗಮಿತ ಜಿಲ್ಲಾಧಿಕಾರಿ ಬಿ. ಶರತ್ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೆಟ್ಟಿಲೇರಿದ್ದು, ಈ ಸಂಬಂಧ ನಾಳೆ ನಡೆಯುವ ಸಿಎಟಿ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಆಗಷ್ಟ್ 29 ರಂದು ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಬಳಿಕ ಸೆಪ್ಟಂಬರ್ 29 ರಂದು ದಸರ ಮಹೋತ್ಸವದ ಪೂರ್ವ ಸಿದ್ಧತಾ ಕಾರ್ಯಗಳ ನಡೆವೆಯೂ ಏಕಾಏಕಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿ ಆದೇಶಿಸಿತ್ತು.
ತಿಂಗಳು ಮುಗಿಯುವ ಮುನ್ನವೇ ಸೂಕ್ತ ಕಾರಣ ನೀಡದೆಯೇ ತಮ್ಮನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿದೆ ಎಂಬುದು ಬಿ. ಶರತ್ ದೂರು.
ಆಡಳಿತಾತ್ಮಕ ನಿಯಮಗಳ ಪ್ರಕಾರ ಸೂಕ್ತ ಕಾರಣವನ್ನೂ ನೀಡದೆ, ಏಕಾಏಕಿ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶ ನಿಯಮ ಬಾಹಿರವಾಗಿದೆ. ಹೀಗಾಗಿ ತಮ್ಮನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಬಿ. ಶರತ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಪ್ರಕರಣದ ಕುರಿತು ಕಳೆದ ಗುರುವಾರ ಅರ್ಜಿ ವಿಚಾರಣೆ ನಡೆಸಿದ ಸಿಎಟಿ, 30 ದಿನಕ್ಕೆ ಅಧಿಕಾರಿ ಬಿ. ಶರತ್ ಅವರನ್ನು ವರ್ಗಾಯಿಸಿದ್ದೇಕೆ ಎಂದು ಪ್ರಶ್ನಿಸಿರುವುದಲ್ಲದೇ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 7 ಕ್ಕೆ ಮುಂದೂಡಿದೆ.
ಈ ಪ್ರಕರಣ ಸಿಎಟಿ ಮೆಟ್ಟಿಲೇರುವುದರಿಂದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಂಕಷ್ಟ ಎದುರಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ರೋಹಿಣಿ ಹಾದಿಯಲ್ಲೇ ಶರತ್ :
ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯನ್ನ 2018ರಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಆಯುಕ್ತರಾಗಿ ವರ್ಗ ಮಾಡಿತ್ತು. ಆಗ, ಅವಧಿ ಪೂರ್ವ ವರ್ಗಾವಣೆ ಮಾಡಲಾಗಿದೆ ಎಂದು ಅದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೂಡ ಸಿಎಟಿ ಮೊರೆ ಹೋಗಿದ್ದರು. ಸಿಎಟಿ ಸರ್ಕಾರದ ಆದೇಶ ಎತ್ತಿ ಹಿಡಿದ ಹಿನ್ನಲೆ ಅವರು ಹೈ ಕೋರ್ಟ್ ಮೆಟ್ಟಿಲೇರಿ ಮರು ನೇಮಕಗೊಂಡಿದ್ದರು.
ಈಗ ಈ ಆದೇಶವನ್ನೇ ಮುಂದಿಟ್ಟುಕೊಂಡು ಬಿ.ಶರತ್ ಸಹ ಸಿಎಟಿ ಮೊರೆ ಹೋಗಿದ್ದಾರೆ. ನೇಮಕಗೊಂಡು ತಿಂಗಳು ಕಳೆದಿಲ್ಲ. ಆಗಲೇ ಕಾರಣವಿಲ್ಲದೆ ಏಕಾಏಕಿ ವರ್ಗವಣೆ ಮಾಡಿರುವುದು ಯಾಕೆ..? ಎಂಬುದು ಶರತ್ ಪ್ರಶ್ನೆ.? ಈ ಹಿಂದಿನ ಸಿಎಟಿ ಪ್ರಕರಣಗಳನ್ನು ಗಮನಿಸಿದರೆ ಶರತ್ ಮತ್ತೆ ಮೈಸೂರು ಡಿಸಿಯಾಗಿ ಮರು ನಿಯೋಜನೆಗೊಳ್ಳುವರೇ ಎಂಬ ಕುತೂಹಲ ಮೂಡಿದೆ.
—-
key words : mysuru/former-dc-b-sharath-went-to-CAT-questioning-his-transfer