ಮೈಸೂರು,ಸೆಪ್ಟಂಬರ್,15,2021(www.justkannada.in): ಹುಚ್ಚಗಣಿ ಗ್ರಾಮವು ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು, ಹುಲ್ಲಹಳ್ಳಿ ಹೋಬಳಿ, ಹರದನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿದೆ. ಮೈಸೂರಿನಿಂದ 30 ಕಿಲೋಮೀಟರ್, ನಂಜನಗೂಡಿನಿಂದ 28 ಕಿಲೋಮೀಟರ್ ದೂರದಲ್ಲಿದ್ದು, ಹೊಮ್ಮರಗಳ್ಳಿ ಮತ್ತು ನಂಜನಗೂಡಿಗೆ ಹೋಗುವ ರಸ್ತೆಯಲ್ಲಿದೆ. ಗ್ರಾಮದ ಪೂರ್ವದಲ್ಲಿ ಕಪಿಲಾ ನದಿ, ಪಶ್ಚಿಮ ದಿಕ್ಕಿಗೆ ಭೃಗುನದಿ ಹರಿಯುತ್ತಿದೆ.
ಸುಮಾರು 3000 ವರ್ಷಗಳ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಅವಶೇಷಗಳು ಹಾಗೂ 9-10 ನೇ ಶತಮಾನದ ಗಂಗರ, 11-12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲುಗಳು ಶೋಧನೆಯಾಗಿವೆ. ಗ್ರಾಮದ ದಕ್ಷಿಣಕ್ಕೆ ಚೋಳರ ಕಾಲದ್ದೇಂದು ಹೇಳುವ ಆದಿಶಕ್ತಿ ಮಹಾದೇವಮ್ಮ ಗುಡಿ ಇದೆ.
ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹಪ್ರಾಧ್ಯಾಪಕರಾದ ಡಾ.ಎಸ್.ಜಿ,ರಾಮದಾಸ ರೆಡ್ಡಿ ಅವರು ಸಂಶೋಧನಾ ವಿದ್ಯಾರ್ಥಿ ಬಿ.ಎಸ್.ಚರಣ್ ಕುಮಾರ್, ಎನ್.ಎಸ್,ಎಸ್. ಸ್ವಯಂಸೇವಕ ಎನ್.ಎಲ್. ಪುನೀತ್ ಕುಮಾರ್ ಹಾಗೂ ಗ್ರಾಮದ ಶ್ರೀನರಸಿಂಹೇಗೌಡ, ಕೆ.ರಾಜು, ಕೆಂಚೆಗೌಡ, ಹೆಚ್.ಎನ್.ನಾಗಣ್ಣ, ರಾಜೇಂದ್ರ ಇತರ ಗ್ರಾಮಸ್ಥರ ಸಹಕಾರದೊಂದಿಗೆ ಸಂಶೋಧನೆ ಮಾಡಲು ಯಶಸ್ವೀಯಾಗಿದ್ದಾರೆ.
ಗ್ರಾಮದ ಲೇಟ್ ಶಿವಣ್ಣ, ಲೇಟ್ ಮದ್ದೂರು ಬಸಪ್ಪ ಇವರ ಬಾಳೆ ತೋಟದ ಜಾಗದಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ಹಾಸು ಬಂಡೆ ಸಮಾಧಿ, ಈ ಸಮಾಧಿಯ ಸುತ್ತಮುತ್ತ ಈ ಸಂಸ್ಕೃತಿಯ ಕಪ್ಪು, ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆ ಚೂರುಗಳು, ಸಮಾಧಿಗಳಲ್ಲಿ ಬಳಸುವ ದೊಡ್ಡ ಮಡಿಕೆ ಚೂರಿನ ಭಾಗ, ಗೃಹಬಳಕೆಗೆ ಬಳಸುವ ಅಲಂಕಾರಿಕ ಮಡಿಕೆ ಚೂರು, ಕೆಂಪು ಮಡಿಕೆಯ ಮೇಲೆ ಕೆಂಪು ಬಣ್ಣ ಲೇಪನ ಮಾಡಿದ ಮಡಿಕೆ ಚೂರು, ಕಬ್ಬಿಣದ ಅದಿರು, ಕಬ್ಬಿಣ ಕರಗಿಸಿದ ನಂತರ ಉಳಿದ ಕಿಟ್ಟ, ಭೂಮಿಯ ಮೇಲ್ಪದರದಲ್ಲಿ ಕಂಡು ಬರುತ್ತವೆ. ಈ ಭೂಭಾಗದಲ್ಲಿ ದವಸಧಾನ್ಯಗಳನ್ನು ತುಂಬಿಡಲು ಬಳಸುತ್ತಿದ್ದ ಹಗೇವುಗಳು ಸಹ ಕಂಡುಬಂದಿವೆ ಎಂದು ಸ್ಥಳೀಯರು ತಿಳಿಸಿದರು. ಈ ಅಂಶಗಳು ಈ ಸಂಸ್ಕೃತಿಯ ಮಾನವನ ವಾಸಸ್ಥಳವಾಗಿತ್ತೇಂದು ಹಗೇವುಗಳು, ಕಬ್ಬಿಣವನ್ನು ಇಲ್ಲೇ ತಯಾರಿಸಿ ಕೊಂಡು, ಕೃಷಿಗೆ, ದೈನಂದಿನ ಜೀವನಕ್ಕೆ ಅಗತ್ಯವಾಗಿ ಬೇಕಾದ ಸಾಮಾಗ್ರಿಗಳನ್ನು ತಯಾರಿಸಿ ಕೊಂಡು ಜೀವನ ಸಾಗಿಸುತ್ತಿದ್ದನೆಂದು ಹೇಳಬಹುದು.ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ.
ಸ್ಥಳೀಯರ ಸಹಕಾರದೊಂದಿಗೆ ಒಡೆದು ಹಾಕಿರುವ ಆದಿಶಕ್ತಿ ಮಹದೇವಮ್ಮನ ದೇವಾಲಯವನ್ನು ಪ್ರವೇಶಿಸಿ ನೋಡಿದಾಗ ತಾತ್ಕಾಲಿಕವಾಗಿ ನಿರ್ಮಿಸಿರುವ ಗರ್ಭಗುಡಿಯ ಮುಂಭಾಗದಲ್ಲಿ ಆದಿಶಕ್ತಿ ಮಹದೇವಮ್ಮನ ಮೂರ್ತಿಶಿಲ್ಪ, ಬೈರವೇಶ್ವರ ಮೂರ್ತಿಶಿಲ್ಪಗಳು ಇದ್ದು ಲೋಹದ ಮುಖವಾಡಗಳನ್ನು ಧರಿಸಿದ್ದಾರೆ. ಈ ಶಿಲ್ಪಗಳು ಚೋಳರ ಕಾಲದಲ್ಲಿ ಪ್ರತಿಷ್ಠಾಪನೆ ಗೊಂಡಿವೆ ಎಂದು ಸ್ಥಳಿಯರಾದ ಶ್ರೀನರಸಿಂಹೇಗೌಡರು ಅಭಿಪ್ರಾಯಪಟ್ಟರು. ಲೋಹದ ಮುಖವಾಡ ಹಾಕಿರುವುದರಿಂದ ಶಿಲ್ಪಶೈಲಿಯನ್ನು ನೋಡಲು ಸಾಧ್ಯವಾಗಲಿಲ್ಲ. ಶಾಸನ ಆಧಾರಿತವಾಗಿ ಗ್ರಾಮದಲ್ಲಿ ಯಾವುದೇ ಶಾಸನಗಳು ದೊರಕಿಲ್ಲ, ಆದರೆ ನಂಜನಗೂಡು ತಾಲ್ಲೂಕಿನ ಭಾಗಗಳು 11 ಮತ್ತು 12 ನೇ ಶತಮಾನದಲ್ಲಿ ಜೋಳರ ಆಳ್ಳಿಕೆಗೆ ಒಳಪಟ್ಟಿತ್ತು ಎಂದು ಎಪಿಗ್ರಾಪಿಯ ಕರ್ನಾಟಿಕ ಸಂಪುಟ-3 ರಲ್ಲಿನ ಶಾಸನಗಳು ಉಲ್ಲೇಖಿಸಿವೆ. ಹೆಚ್ಚಿನ ಆಧ್ಯಯನದ ಅಗತ್ಯತೆ ಇದೆ. ಇದೇ ದೇವಾಲಯದ ಗರ್ಭಗುಡಿಯಲ್ಲಿ ಎತ್ತರವಾದ ಆದಿಶಕ್ತಿ ಮಹದೇವಮ್ಮನ ಮೂರ್ತಿಶಿಲ್ಪ, ಪಕ್ಕದಲ್ಲಿ ಬೈರವೇಶ್ವರ ಮೂರ್ತಿಶಿಲ್ಪಗಳು ಕಂಡುಬರುತ್ತವೆ. ಈ ಶಿಲ್ಪಗಳನ್ನು ದಾನಿಗಳು ಮಾಡಿಸಿದ್ದಾರೆಂದು ಗ್ರಾಮದ ಯಜಮಾನರು ಅಭಿಪ್ರಾಯಪಟ್ಟರು.
ಆದಿಶಕ್ತಿ ಮಹದೇವಮ್ಮನ ದೇವಾಲಯ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುವ ಪೂರ್ವದಲ್ಲಿ ವೀರಗಲ್ಲುಗಳು ಸೇರಿದಂತೆ ಚಿಕ್ಕ ಗುಡಿಯಿತ್ತು. ಕೆಳಭಾಗದಲ್ಲಿ ಆದಿಶಕ್ತಿ ಮಹಾದೇವಮ್ಮ, ಭೈರವೇಶ್ವರ ಮೂರ್ತಿಶಿಲ್ಪಗಳು ಇದ್ದವೆಂದು,ದೇವಾಲಯ ವಿಶಾಲವಾಗಿ ನಿರ್ಮಿಸಿದಾಗಲೂ ಮೂರು ವೀರಗಲ್ಲುಗಳನ್ನು ಅಲ್ಲೇ ಉಳಿಸಿ ದೇವಾಲಯವನ್ನು ನಿರ್ಮಿಸಿದೇವೆಂದು ಸ್ಥಳೀಯರಾದ ನರಸಿಂಹೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಒಡೆದು ಹಾಕಿದ ದೇವಾಲಯದ ಗರ್ಭಗುಡಿಯಲ್ಲಿದ್ದ ಎತ್ತರವಾದ ವೀರಗಲ್ಲು, ವೀರಮಾಸ್ತಿಕಲ್ಲುಗಳನ್ನು ಹೊರಭಾಗದಲ್ಲಿ ಹಾಕಿದ್ದಾರೆ. ಈ ದೇವಾಲಯದ ಆವರಣದಲ್ಲಿ ಬಿದ್ದಿರುವ ಬೃಹತ್ ಗಾತ್ರದ ವೀರಗಲ್ಲುಗಳು, ವೀರಮಾಸ್ತಿಕಲ್ಲುಗಳು, ದೇವಾಲಯ, ಈ ಗ್ರಾಮದ ಗತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಂಶಗಳಾಗಿವೆ.
ಈ ದೇವಾಲಯದ ಆವರಣದಲ್ಲಿ 4 ವೀರಗಲ್ಲು, ಮಾಸ್ತಿಕಲ್ಲುಗಳಿವೆ, ಪಕ್ಕದಲ್ಲಿಯೇ ಬಾಳೆ ತೋಟದಲ್ಲಿ ಒಂದು ವೀರಗಲ್ಲು ಇದೆ. ಒಟ್ಟು 5 ವೀರಗಲ್ಲುಗಳು ದೇವಾಲಯದ ಆವರಣದಲ್ಲಿವೆ. ಗಂಗರ ಕಾಲದ, ಹೊಯ್ಸಳರ ಕಾಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವೀರಗಲ್ಲುಗಳು ಇಲ್ಲಿ ಕಂಡುಬರುತ್ತವೆ.
ಮೊದಲನೇ ವೀರ ಮಾಸ್ತಿಗಲ್ಲು, 6.8 ಅಡಿ ಎತ್ತರ, 3.4 ಅಡಿ ಅಗಲ, ಏಳು ಇಂಚು ದಪ್ಪ ಇದೆ. ಮೂರು ಹಂತದಲ್ಲಿದೆ. ಮೊದಲನೇ ಹಂತದಲ್ಲಿ ವೀರರಿಬ್ಬರು ಕತ್ತಿ, ಗುರಾಣಿ ಹಿಡಿದು ಹೋರಾಡುತ್ತಿರುವ ದೃಶ್ಯವಿದೆ, ಪಕ್ಕದಲ್ಲಿ ಸತಿ ಎರಡೂ ಕೈಗಳನ್ನು ಮೇಲೆತ್ತಿ ಮಹಾಸತಿ ಆದ ದೃಶ್ಯವಿದೆ. ಎರಡನೇ ಹಂತದಲ್ಲಿ ವೀರನನ್ನು ದೇವಕನ್ಯೆಯರು ಚಾಮರವನ್ನು ಬೀಸಿ ಕರೆದೊಯ್ಯುತ್ತಿರುವುದು, ಮೂರನೆ ಹಂತದಲ್ಲಿ ಸತಿಪತಿಗಳಾದರು ಧ್ಯಾನಮಗ್ನರಾಗಿ ಕುಳಿತಿದ್ದಾರೆ. ಮಧ್ಯದಲ್ಲಿ ಶ್ರೀಕೃಷ್ಣ ಕೊಳಲು ನುಡಿಸುತ್ತಿರುವ, ಕೃಷ್ಣನ ಹಿಂಭಾಗದಲ್ಲಿ ವ್ಯಕ್ತಿ, ಹಸುವಿನ ದೃಶ್ಯವಿದೆ. ಈ ಶಿಲ್ಪವನ್ನು ನೋಡಿದಾಗ ವೈಷ್ಣವ ಧರ್ಮದ ಮೇಲೆ ಬೆಳಕು ಚೆಲ್ಲುವ ಅಪರೂಪದ ವೀರಮಾಸ್ತಿ ಶಿಲ್ಪಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಶಿಲ್ಪ ಶೈಲಿಯ ಆಧಾರದ ಮೇಲೆ 11, 12ನೇ ಶತಮಾನದ್ದಾಗಿದೆ ಎಂದು ಹೇಳಬಹುದು. ಎರಡನೇ ವೀರಗಲ್ಲು, ಎತ್ತರ 5.6 ಅಡಿ, ಅಗಲ 2.2 ಅಡಿ, ದಪ್ಪ 7 ಇಂಚು ಇದೆ, ಬಳಪದ ಕಲ್ಲಿನಲ್ಲಿ ಮೂರು ಹಂತಗಳಲ್ಲಿ ಕೆತ್ತಲ್ಪಟ್ಟಿದೆ. ಈ ಶಿಲ್ಪವನ್ನು ನೋಡಿದಾಗ ಪೆಣ್ಬ್‍ಯಲು ವೀರಗಲ್ಲು ಎಂದು ಕರೆಯಬಹುದು.
ಮೂರು ಹಂತಗಳಲ್ಲಿ ಇದೆ. ಮೊದಲನೇ ಹಂತದಲ್ಲಿ ವೀರರಿಬ್ಬರು ಕತ್ತಿ, ಗುರಾಣಿ ಹಿಡಿದು ಹೋರಾಡುತ್ತಿದ್ದಾರೆ, ಹಿಂಭಾಗದಲ್ಲಿ ಸ್ತ್ರೀ ನಿಂತಿದ್ದಾಳೆ. ಎರಡನೆ ಹಂತದಲ್ಲಿ ವೀರನನ್ನು ದೇವಕನ್ಯೆಯರು ಚಾಮರ ಬೀಸುತ್ತ ಕರೆದೊಯ್ಯುತ್ತಿರುವ ದೃಶ್ಯವಿದೆ. ಮೂರನೇ ಹಂತದಲ್ಲಿ ವೀರ ಧ್ಯಾನಮಗ್ನನಾಗಿ ಕುಳಿತಿದ್ದಾನೆ. ಕೃಷ್ಣ ಕೊಳಲನ್ನು ನುಡಿಸುತ್ತಿರುವ ಶಿಲ್ಪವಿದೆ. ಕೃಷ್ಣನ ಪಕ್ಕದಲ್ಲಿ ವ್ಯಕ್ತಿ, ಹಸುವಿನ ಶಿಲ್ಪವಿದೆ. ಶಿಲ್ಪ ವಿಶೇಷವಾಗಿದ್ದು ಹೆಣ್ಣಿನ ರಕ್ಷಣೆಗಾಗಿ ವೀರ ಹೋರಾಡಿ ಮರಣ ಹೊಂದಿದ ದೃಶ್ಯ ಹಾಗೂ ಈ ಶಿಲ್ಪ ಶೈಲಿ ಹೊಯ್ಸಳರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಶಿಲ್ಪವಾಗಿದೆ ಹಾಗೂ ವೈಷ್ಣವಧರ್ಮದ ಮೇಲೆ ಬೆಳಕು ಚೆಲ್ಲುವ ಪ್ರಮುಖವಾದ ಶಿಲ್ಪವಾಗಿದೆ. ಮೂರನೇ ವೀರಗಲ್ಲು ಗಂಗರ ಕಾಲದ ಶೈಲಿಯನ್ನು ಹೋಲುತ್ತದೆ. ಮೂರು ಹಂತಗಳ ಶಿಲ್ಪವಾಗಿದೆ. ಎತ್ತರ 7.9 ಅಡಿ, ಅಗಲ 4.5 ಅಡಿ, ದಪ್ಪ 5 ಇಂಚು ಇದೆ. ಮೊದಲನೇ ಹಂತದಲ್ಲಿ ವೀರರಿಬ್ಬರು ಕತ್ತಿ, ಗುರಾಣಿ ಹಿಡಿದು ಹೋರಾಡುತ್ತಿರುವ ದೃಶ್ಯವಿದೆ. ಎರಡನೇ ಹಂತದಲ್ಲಿ ದೇವಕನ್ಯೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ, ಮೂರನೇ ಹಂತದಲ್ಲಿ ದೇವಕನ್ಯೆರ ಮಧ್ಯೆ ವೀರ ಧ್ಯಾನಮಗ್ನನಾಗಿ ಕುಳಿತಿದ್ದಾನೆ. ಈ ಶಿಲ್ಪವನ್ನು ನೋಡಿದಾಗ ಈ ವೀರರಿಬ್ಬರ ಮಧ್ಯೆ ಯಾವ ಕಾರಣಕ್ಕಾಗಿ ಹೋರಾಟ ನಡೆಯಿತು ಎನ್ನುವ ಅಂಶವನ್ನು ತಿಳಿಸುವುದು ಕಷ್ಟಸಾಧ್ಯ. ಬಿಳಿ ಗ್ರಾನೈಟ್ ಕಲ್ಲಿನಲ್ಲಿ ಇದೆ.ನಾಲ್ಕನೇ ವೀರಗಲ್ಲು ಲೇಟ್ ಶಿವಣ್ಣ, ಲೇಟ್ ಮದ್ದೂರು ಬಸಪ್ಪ ಇವರ ಬಾಳೆ ತೋಟದಲ್ಲಿ ಶಿಲ್ಪವಿದೆ.ಈ ವೀರಗಲ್ಲು 5.1 ಅಡಿ ಎತ್ತರ, 3.4 ಅಡಿ ಅಗಲ, ನಾಲ್ಕು ಇಂಚು ದಪ್ಪ ಇದೆ. ಮೂರು ಹಂತದ ವೀರಗಲ್ಲು ಆಗಿದೆ. ವೀರರಿಬ್ಬರು ಕತ್ತಿ, ಗುರಾಣಿಗಳನ್ನು ಹಿಡಿದು ಹೋರಾಡುತ್ತಿದ್ದಾರೆ. ವೀರನಿಗೆ ಹೊಟ್ಟೆ ಮತ್ತು ಎದೆಯ ಭಾಗಕ್ಕೆ 2, ಕುತ್ತಿಗೆ ಭಾಗಕ್ಕೆ 2 ಬಾಣಗಳು ಚುಚ್ಚಿವೆ. ವೀರನ ಹಿಂಭಾಗದಲ್ಲಿ ಎರಡು ತುರುಗಳು ಗಾಬರಿಗೊಂಡು ತಲೆಯೆತ್ತಿ ನಿಂತಿವೆ. ಎರಡನೇ ಹಂತದಲ್ಲಿ ದೇವಕನ್ಯೆಯರು ಚಾಮರವನ್ನು ಬೀಸುತ್ತಾ ವೀರನನ್ನು ಕರೆದೊಯ್ಯುತ್ತಿರುವ ದೃಶ್ಯ. ಮೂರನೇ ಹಂತದಲ್ಲಿ ದೇವಕನ್ಯೆಯರು ಚಾಮರಾಜ ಬೀಸುತ್ತಿದ್ದಾರೆ, ವೀರ ಧ್ಯಾನಮಗ್ನನಾಗಿ ಕುಳಿತಿರುವ ದೃಶ್ಯ ಇದೆ. ವಿಶೇಷವಾದ ಶಿಲ್ಪ ಇದಾಗಿದ್ದು ಗಂಗರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ತುರುಗೋಳ್ ವೀರಗಲ್ಲು ಇದಾಗಿದೆ. ಅಂದರೆ ದನಗಳನ್ನು ಕದಿಯಲು ಬಂದ ಎದುರಾಳಿಗಳನ್ನು ವೀರ ತಡೆಯಲು ಹೋಗಿ ವೀರಮರಣವನ್ನು ಹೊಂದಿದ ಸಂದರ್ಭದಲ್ಲಿ ಜ್ಞಾಪಕಾರ್ಥಕವಾಗಿ ವೀರಗಲ್ಲನ್ನು ನಿರ್ಮಿಸಿದ್ದಾರೆ.
ಒಟ್ಟಾರೆ ಹುಚ್ಚಗಣಿ ಗ್ರಾಮ ಶಿಲಾಯುಗದ ಕಾಲಮಾನದಿಂದ ಹಿಡಿದು ಇಲ್ಲಿಯವರೆಗೆ ಜನವಸತಿಯ ಸ್ಥಳವಾಗಿತ್ತು. ಗಂಗರ, ಹೊಯ್ಸಳರ ಇತರ ರಾಜಮನೆಗಳ ಆಳ್ವಿಕೆಗೆ ಒಳಪಟ್ಟ ಗ್ರಾಮವಾಗಿತ್ತು. ಈ ಗ್ರಾಮದಲ್ಲಿ ದೊರಕಿರುವ ಶಿಲ್ಪ ಆಧಾರಿತವಾಗಿ ವೈಷ್ಣವ ಧರ್ಮದ ಮೇಲೆ ಬೆಳಕು ಚೆಲ್ಲುವ ಅಪರೂಪದ ವೀರ ಮಾಸ್ತಿಗಲ್ಲುಗಳು ಅನಾಥವಾಗಿ ಬಿದ್ದಿವೆ, ಸಂರಕ್ಷಿಸುವ ಕಾರ್ಯ ಸಂಬಂಧ ಪಟ್ಟ ಇಲಾಖೆ,ಗ್ರಾಮಸ್ಥರು ಮಾಡಿ ಮಂದಿನ ಪೀಳಿಗೆಗೆ ಗತ ಇತಿಹಾಸವನ್ನು ಸಾರಿ ಹೇಳುವ ಕಾರ್ಯವನ್ನು ಮಾಡ ಬೇಕಿದೆ.
ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಜೆ.ಸಿ.ಬಿಯಂತಹ ಬೃಹತ್ ಗ್ರಾತ್ರದ ಯಂತ್ರಗಳನ್ನು ಬಳಸಿ ರಸ್ತೆ, ಕಟ್ಟಡ ಕಾಮಗಾರಿ, ಇತರೆ ಸರ್ಕಾರಿ ಆದೇಶದನ್ವಯ ಕಾರ್ಯಗಳನ್ನು ಮಾಡುವಾಗ ಯಂತ್ರ ಚಾಲಕರಿಗೆ, ಮೆಲ್ವೀಚಾರಕರಿಗೆ ಗತ ಇತಿಹಾಸವನ್ನು ಸಾರುವ, ನಮ್ಮ ಗತ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ,ದೇವಾನುದೇವತೆಗಳ, ನಮ್ಮ ಸಮಾಜದ ಹಿತಕ್ಕಾಗಿ, ರಕ್ಷಣೆಗಾಗಿ ಹೋರಾಡಿದವರ, ಯುದ್ದದಲ್ಲಿ ನಮ್ಮನ್ನು ರಕ್ಷಿಸಲು ಹೋಗಿ ಹೋರಾಡಿ ಪ್ರಾಣತೆತ್ತವರ ನೆನಪಿಗಾಗಿ ನಿರ್ಮಿಸಿದ ವೀರಗಲ್ಲು, ಮಾಸ್ತಿಗಲ್ಲುಗಳ ಮಹತ್ವದ ಬಗ್ಗೆ ಆರಿವು ಮೂಡಿಸುವ ಕಾರ್ಯ ಸಂಬಂಧ ಪಟ್ಟ ಇಲಾಖೆ, ಸ್ಥಳೀಯರು, ಸಂಘಸಂಸ್ಥೆಗಳು, ಪ್ರಜ್ಞಾವಂತರು ತುರ್ತಾಗಿ ಮಾಡ ಬೇಕಿದೆ.
ಕೃಪೆ
ಡಾ.ಎಸ್.ಜಿ.ರಾಮದಾಸರೆಡ್ಡಿ
ಮುಖ್ಯಸ್ಥರು, ಇತಿಹಾಸ ಸಹ ಪ್ರಾಧ್ಯಾಪಕರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಕುವೆಂಪುನಗರ, ಮೈಸೂರು.23.
ಮೊ. 9845309081
Key words: najnanagudu-hucchugani-village- mahadevamma temple -exclusive- information