ಸಾಮರಸ್ಯದ ಮಹತ್ವ ತಿಳಿಸುವ ‘ನಾಳೆ ಇನ್ನೂ ಕಾದಿದೆ’ ಕೃತಿ: ವಿವೇಕ ರೈ 

ಶ್ಯಾಮಲಾ ಮಾಧವ ಆತ್ಮಕಥನ ಬಿಡುಗಡೆ 

ಬೆಂಗಳೂರು,ಮಾರ್ಚ್,28,2021(www.justkannada.in): ಮತಾಂತರವನ್ನು ದ್ವೇಷಿಸುವ ಈ ಕಾಲದಲ್ಲಿ ಶ್ಯಾಮಲಾ ಮಾಧವ ಅವರು ಕಟ್ಟಿಕೊಟ್ಟಿರುವ ಬದುಕು ಸಾಮರಸ್ಯದ ಮಹತ್ವವನ್ನು ಸಾರುತ್ತದೆ. ಸಾಮರಸ್ಯ ಜೀವನದ ಭಾಗವಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಖ್ಯಾತ ವಿದ್ವಾಂಸ ಪ್ರೊ ಬಿ ಎ ವಿವೇಕ ರೈ ಅವರು ಅಭಿಪ್ರಾಯಪಟ್ಟರು.

‘ಅವಧಿ’ ಅಂತರ್ಜಾಲ ಪತ್ರಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಸಾಹಿತಿ ಶ್ಯಾಮಲಾ ಮಾಧವ ಅವರ ಅನುಭವ ಕಥನ ‘ನಾಳೆ ಇನ್ನೂ ಕಾದಿದೆ’ ಬಿಡುಗಡೆ ಮಾಡಿ ಮಾತನಾಡಿದರು.

ಆತ್ಮಕಥನ, ಆತ್ಮ ಚರಿತ್ರೆ, ಅನುಭವ ಕಥನ ಇಂದು ಹೊಸ ದಿಕ್ಕನ್ನು ಕಂಡುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೇಖಕಿಯರು ಆತ್ಮ ಕಥನ ರಚಿಸಿದ್ದಾರೆ. ಪುರುಷ ಸಾಹಿತಿಗಳು ಬರೆದ ಕಥನಕ್ಕೂ ಲೇಖಕಿಯರು ಬರೆದ ಕಥನಕ್ಕೂ ಇರುವ ವ್ಯತ್ಯಾಸವನ್ನು ಅಧ್ಯಯನ ಮಾಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ಶ್ಯಾಮಲಾ ಅವರ ಅನುಭವ ಕಥನ ವಿವರಗಳ ಮಧ್ಯೆ ಸಿಕ್ಕಿದ್ದರೂ ಸಹಾ ಅವರು ಕಟ್ಟಿಕೊಡುವ ಚಿಕ್ಕ ಚಿಕ್ಕ ಸಂಗತಿಗಳು ಒಂದು ಕಾಲದ ಸಮುದಾಯ ಬದುಕಿದ ಬಗೆ, ನಗರಗಳು ಸ್ಥಿತ್ಯಂತರಗೊಂಡ ಕಥೆ, ಮಂಗಳೂರು ಹಾಗೂ ಮುಂಬೈನ ಹೊಳಹನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ ಎಂದರು.

ಖ್ಯಾತ ಕಲಾವಿದೆ ‘ಈ ಹೊತ್ತಿಗೆ’ಯ ಜಯಲಕ್ಷ್ಮಿ ಪಾಟೀಲ್ ಅವರು ಮಾತನಾಡಿ ಇದು ಅಪ್ಪಟ ಹೆಣ್ಣಿನ ಕೃತಿ ಎಂದು ಬಣ್ಣಿಸಿದರು. ಶ್ಯಾಮಲಾ ಮಾಧವ ಅವರು ಬದುಕನ್ನು ಕಟ್ಟಿಕೊಂಡ ಬಗೆ ಮಾದರಿಯಾಗಿದೆ. ಎಲ್ಲಾ ಹೆಣ್ಣುಮಕ್ಕಳ ಪ್ರಯಾಣದಂತಿದೆ ಎಂದು ಬಣ್ಣಿಸಿದರು.

ಖ್ಯಾತ ಅನುವಾದಕ, ರಂಗಕರ್ಮಿ ನಾ. ದಾಮೋದರ ಶೆಟ್ಟಿ ಅವರು ಮಾತನಾಡಿ ಶ್ಯಾಮಲಾ ಮಾಧವ ಅವರ ಕೃತಿಯ ಹೆಸರೇ ಆಶಾಭಾವ, ಆತಂಕ ಎರಡನ್ನೂ ಬಿಂಬಿಸುವಂತಿದೆ. ಬದುಕು ಈ ಎರಡರ ನಡುವೆಯೇ ತುಯ್ಯುತ್ತದೆ. ಹಾಗೆ ಅವರ ಕೃತಿಯೂ ಸಹಾ ಬದುಕಿನ ಆಶಾವಾದ ಹಾಗೂ ಆತಂಕದತ್ತ ಬೊಟ್ಟು ಮಾಡಿ ತೋರಿಸುತ್ತದೆ ಎಂದರು

ಅವಧಿಯ ಪ್ರಧಾನ ಸಂಪಾದಕ ಜಿ ಎಂ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ಈ ಕೃತಿಯನ್ನು ಕೊಳ್ಳಲು bahuroopi.in ಅಥವಾ ವಾಟ್ಸ್ ಸಂಖ್ಯೆ 7019182729 ಸಂಪರ್ಕಿಸಿ