ಮೈಸೂರು,ಜನವರಿ,28,2021(www.justkannada.in): ಸಮಾಜಘಾತುಕ ವ್ಯಕ್ತಿಗಳು ರೈತರ ಹೆಸರಿಗೆ ಮಸಿ ಬಳೆದಿದ್ದಾರೆ. ಇದು ರೈತರ ಹೆಸರಿಗೆ ಕಳಂಕ ತರಲು ನಡೆಸಿದ ಷಡ್ಯಂತ್ರ. ಹೀಗಾಗಿ ದೆಹಲಿ ಘಟನೆ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, 60 ದಿನಗಳಿಂದ ನಡೆಯುತ್ತಿರುವ ಶಾಂತಿಯುತ ಪ್ರತಿಭಟನಾ ರೈತರ ಹೆಸರಿಗೆ ಮಸಿ ಬಳಿಯಲು ಸರ್ಕಾರದ ಷಡ್ಯಂತ್ರ ನಡೆಸಿದೆ. ಆದರೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ದುರಾದೃಷ್ಠಕರ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಬೇರೆ ಬಾವುಟ ಹಾರಿಸಿದ್ದು ಪಂಜಾಬಿನ ನಟ ದೀಪಕ್ ಸಿಧು. ದೀಪಕ್ ಸಿಧು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ. ಅಲ್ಲದೇ ಬಾವುಟ ಹಾರಿಸಿದ್ದು ನಾನೆ ಎಂದು ದೀಪಕ್ ಸಿಧು ಒಪ್ಪಿಕೊಂಡಿದ್ದಾನೆ. ಇದು ರೈತರ ಹೆಸರಿಗೆ ಕಳಂಕ ತರಲು ನಡೆಸಿದ ಷಡ್ಯಂತ್ರ. ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಮೊಕದ್ದಮೆ ದಾಖಲಿಸಿ ಜೀವಾವಧಿ ಶಿಕ್ಷೆ ನೀಡಬೇಕು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಈ ವಿಚಾರ ಬೇಹುಗಾರಿಕೆ ಸಂಸ್ಥೆ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು ಯಾಕೆ..? ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆಯುತ್ತೆ.
ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆಯುತ್ದೆ. ಗಲಭೆಯಿಂದ ಹೋರಾಟಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ರೈತರನ್ನು ಮನೆಯಲ್ಲಿ ಕೂಡಿಹಾಕಿ ಕಾಯ್ದೆ ತಂದಿದ್ದಾರೆ. ರೈತರ ಜೊತೆ ನಾಟಕೀಯವಾಗಿ 11 ಸಭೆ ನಡೆಸಿದ್ದಾರೆ. 145 ರೈತರು ಚಳುವಳಿ ಮೂಲಕ ಪ್ರಾಣ ಕಳೆದುಕೊಂಡಾಗ ರೈತರ ಬಗ್ಗೆ ಕನಿಕರ ಇರಲಿಲ್ವಾ..? ಎಂದು ಕೇಂದ್ರ ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.
ಜ.30 ರಂದು ಉಪವಾಸ ನಿರಶನ…
ಹಾಗೆಯೇ ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕುರುಬೂರು ಶಾಂತಕುಮಾರ್ , ಇದು ಇಡೀ ರೈತ ಕುಲವನ್ನೇ ನಾಶ ಮಾಡುವ ಸಂಚು. ಈ ಕಾಯ್ದೆಗಳ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ. ಇದೇ ಜ.30ರಂದು ಉಪವಾಸ ನಿರಶನ ದಿನ ನಡೆಸಲು ತೀರ್ಮಾನಿಸಿದ್ದೇವೆ. ದೆಹಲಿಯ ಎಲ್ಲಾ ಗಡಿ ಭಾಗಗಳಲ್ಲಿ ಉಪವಾಸ ನಿರಶನ ದಿನ ಆಚರಣೆ ಮಾಡುತ್ತೇವೆ. ತಂಡ ತಂಡವಾಗಿ ಚಳುವಳಿಗೆ ಹೋಗಲು ಚಿಂತನೆ ನಡೆಸಿದ್ದೇವೆ ಎಂದು ಕುರುಬೂರು ಶಾಂತ ಕುಮಾರ್ ತಿಳಿಸಿದರು.
Key words: name- farmers-Supreme Court- judges -probe – Delhi incident-kuruburu shanthakumar