ಬೆಂಗಳೂರು,ಜನವರಿ,26,2021(www.justkannada.in): ದೊಡ್ಡದಾಗಿ, ಆಕರ್ಷಕವಾಗಿ ಅಂಗಡಿ, ಮಾಲ್ ಗಳನ್ನು ಕಟ್ಟಿ, ವ್ಯಾಪಾರ-ವಹಿವಾಟು ನಡೆಸುವ ಮಾಲೀಕರು, ವ್ಯಾಪಾರಸ್ಥರು ಮನಪೂರ್ವಕವಾಗಿ ಮಾಡಬೇಕಾದ ಕನ್ನಡದ ಕೆಲಸವನ್ನು ಹಕ್ಕೊತ್ತಾಯದ ಮೂಲಕ ಮಾಡುವ ಅನಿವಾರ್ಯತೆ ಬಂದೊದಗಿದ್ದು, ಇದನ್ನು ಸಹಿಸುವುದಿಲ್ಲ ರಾಜ್ಯದ ಅಂಗಡಿ-ಮುಂಗಟ್ಟುಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿರಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜನವರಿ 26 ರಿಂದ 28ರವರೆಗೆ ಸತತ ಮೂರು ದಿನಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಳ್ಳಾಗಿರುವ “ಶುದ್ಧ ಕನ್ನಡ ನಾಮಫಲಕ ಅಭಿಯಾನ”ಕ್ಕೆ ವಾಣಿಜ್ಯ ರಸ್ತೆ (ಕಮರ್ಷಿಯಲ್ ಸ್ಟ್ರಿಟ್) ಯ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ , ರಾಜ್ಯ ಸರ್ಕಾರದ ಕಛೇರಿ, ಕೇಂದ್ರ ಸರ್ಕಾರದ ಕಛೇರಿಗಳು, ಸಾರ್ವಜನಿಕ ಅಂಗಡಿ ಮುಂಗಟ್ಟುಗಳು ಶುದ್ಧ ಕನ್ನಡವನ್ನು ನಾಮಫಲಕದಲ್ಲಿ ಬಳಕೆ ಮಾಡಬೇಕು ಎನ್ನುವುದು ಈ ಅಭಿಯಾನದ ಉದ್ದೇಶ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ದಿನಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಛೇರಿ, ಸಾರ್ವಜನಿಕ ಅಂಗಡಿ ಮುಂಗಟ್ಟುಗಳ ಮುಂದೆ ಶುದ್ಧ ಕನ್ನಡ ನಾಮಫಲಕ ಅಭಿಯಾನವನ್ನು ನಡೆಸಿ ಕಛೇರಿ ಮುಖ್ಯಸ್ಥರಿಗೆ, ಮಾಲೀಕರಿಗೆ ಶುದ್ಧ ಕನ್ನಡ ನಾಮಫಲಕವನ್ನು ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಹಕ್ಕೊತ್ತಾಯವನ್ನು ಮಂಡಿಸಿದರು.
ನಂತರ ಕನ್ನಡವನ್ನು ನಾಮಫಲಕದಲ್ಲಿ ಕಡೆಗಣಿಸಿರುವ ಮತ್ತು ಚಿಕ್ಕದಾಗಿ ಹಾಕಲಾಗಿರುವ ಅಂಗಡಿ, ಮಾಲ್ ಗಳಿಗೆ ತೆರಳಿ ಮಾಲೀಕರಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ನೀಡಿ, ಇಲ್ಲಿನ ಸವಲತ್ತುಗಳನ್ನು ಬಳಸಿಕೊಂಡು ವ್ಯಾಪಾರ ವಹಿವಾಟು ನಡೆಸುವ ತಾವು, ಸರ್ಕಾರದ ಭಾಷಾನೀತಿಯನ್ನು ಪಾಲಿಸಬೇಕಿದೆ. ನಿಮಗೆ ಅನ್ನ ನೀಡಿದ ನೆಲದ ಋಣವನ್ನು ಕನ್ನಡವನ್ನು ಎಲ್ಲ ಹಂತದಲ್ಲೂ ಪ್ರಧಾನವಾಗಿ ಬಳಸುವ ಮೂಲಕ ತೀರಿಸುವಂತೆ ತಿಳಿಸಿದರು.
ಕನ್ನಡ ಜಾಗೃತಿ ಪಡೆಯ ಸದಸ್ಯರಾದ ಮಮತಾ ಅಶೋಕ್ ಮತ್ತು ಗಿರೀಶ್ ಅವರುಗಳ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕನ್ನಡ ಜಾಗೃತಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕನ್ನಡ ಕಾಯಕ ಪಡೆಯ ಸದಸ್ಯರು, ಕನ್ನಡಪರ ಚಿಂತಕರು, ಹೋರಾಟಗಾರರು ಪಾಲ್ಗೊಂಡು, ಇಡೀ ವಾಣಿಜ್ಯ ರಸ್ತೆಯಲ್ಲಿರುವ ಎಲ್ಲ ಅಂಗಡಿ, ಮಾಲ್ಗಳಿಗೂ ಶುದ್ಧ ಕನ್ನಡ ನಾಮಫಲಕವನ್ನು ಬಳಸುವಂತೆ ಹಕ್ಕೊತ್ತಾಯದ ಮನವಿ ಪತ್ರವನ್ನು ವಿತರಿಸಿದರು.
ಮುಖ್ಯಮಂತ್ರಿಗಳು ಘೋಷಿಸಿದ ಕನ್ನಡ ಕಾಯಕ ವರ್ಷಾಚರಣೆ ಪ್ರಯುಕ್ತ ನಡೆಯಲಿರುವ ಈ ಅಭಿಯಾನವು ಅಭಿಯಾನ ಸರಣಿ “ಬಾರಿಸು ಕನ್ನಡ ಡಿಂಡಿಮ’’ದ ಮೂರನೆ ಅಭಿಯಾನವಾಗಿತ್ತು.
ಕರ್ನಾಟಕ ಸರ್ಕಾರವು ನವಂಬರ್ 01, 2020ರಿಂದ ಅಕ್ಟೋಬರ್ 31, 2021ರ ವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ ಎಂದು ಕರೆದಿದ್ದು, ಅದರ ಅನುಷ್ಠಾನದ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಹಿಸಿಕೊಂಡಿದೆ.
ಕೇಂದ್ರ ಸರ್ಕಾರದ ಕಛೇರಿ/ಸಂಸ್ಥೆಗಳಾಗಿ ರಾಜ್ಯದ ವ್ಯಾಪ್ತಿಯಲ್ಲಿ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಛೇರಿ/ಸಂಸ್ಥೆಗಳು ಕೇಂದ್ರ ಸರ್ಕಾರದ ತ್ರಿಭಾಷಾನಿಯಮದನ್ವಯ ಸ್ಥಳೀಯ ಭಾಷೆಯಾದ ಕನ್ನಡವನ್ನು ನಾಮಫಲಕಗಳಲ್ಲಿ ಹಾಗೂ ಆಡಳಿತದಲ್ಲಿ ಪ್ರಧಾನವಾಗಿ ಬಳಸುವಂತಾಗಬೇಕು. ಆ ಮೂಲಕ ಅವು ನೆಲಮೂಲದ ಭಾಷೆ ಮತ್ತು ಸಂಸ್ಕೃತಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎನ್ನುವುದು ಪ್ರಾಧಿಕಾರದ ಆಶಯವಾಗಿದೆ.
Key words: name – state -store- Kannada- T.S. nagabarana