ಬೆಂಗಳೂರು, ಜುಲೈ 18, 2022 (www.justkannada.in): ಕಳೆದ ತಿಂಗಳು ಹಲವು ಅಗತ್ಯ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ಶೇ.5 ಜಿಎಸ್ಟಿ ಪರಿಣಾಮದಿಂದಾಗಿ ಇಂದಿನಿಂದ ಪ್ಯಾಕ್ ಮಾಡಿರುವ ಮೊಸರು, ಮಜ್ಜಿಗೆ ಹಾಗೂ ಸಿಹಿ ಲಸ್ಸಿ ದುಬಾರಿಯಾಗಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು ಭಾನುವಾರ ನೀಡಿರುವ ಒಂದು ಹೇಳೀಕೆಯಲ್ಲಿ ಈ ಪದಾರ್ಥಗಳ ಬೆಲೆ ರೂ.1 ರಿಂದ ರೂ.3ರವರೆಗೆ ಹೆಚ್ಚಿಸಲಾಗಿರುವುದಾಗಿ ತಿಳಿಸಿದೆ.
ಈ ಪ್ರಕಾರವಾಗಿ ಒಂದು ಕಿಲೊ ಮೊಸರಿನ ಬೆಲೆ ರೂ.೪೩ರಿಂದ ರೂ.೪೬ಕ್ಕೆ ಏರಿಕೆಯಾಗಿದೆ. ೫೦೦ ಗ್ರಾಂ ಹಾಗೂ ೨೦೦ ಗ್ರಾಂ ಪ್ಯಾಕೆಟ್ ಗಳ ಬೆಲೆ ರೂ.೨೨ ಹಾಗೂ ರೂ.೧೦ರಿಂದ ಕ್ರಮವಾಗಿ ರೂ.೨೪ ಹಾಗೂ ರೂ.೧೨ಕ್ಕೆ ಏರಿಕೆಯಾಗಿದೆ.
ನಂದಿನಿ ಸ್ವೀಟ್ ಲಸ್ಸಿಯ ವಿವಿಧ ಪ್ಯಾಕೆಟ್ ಗಳ ಬೆಲೆ ರೂ.೨ ಏರಿಸಲಾಗಿದೆ. ೨೦೦ ಎಂಎಲ್ ಪ್ಯಾಕೆಟ್ ನ ಬೆಲೆ ರೂ.೧೧ ಹಾಗೂ ಎರಡು ಟೆಟ್ರಾ ಪ್ಯಾಕೆಟ್ ಸ್ವೀಟ್ ಲಸ್ಸಿ ಹಾಗೂ ಮ್ಯಾಂಗೊ ಲಸ್ಸಿಯ ಬೆಲೆ ಕ್ರಮವಾಗಿ ರೂ.೨೧ ಮತ್ತು ರೂ. ೨೭ಕ್ಕೆ ಏರಿಕೆಯಾಗಿದೆ. ೨೦೦ ಎಂಎಲ್ ಪಿಇಟಿ ಬಾಟಲ್ ಗಳಲ್ಲಿರುವ ಲಸ್ಸಿಯ ಬೆಲೆ ರೂ.೧೬ ಹಾಗೂ ರೂ.೨೧ಕ್ಕೆ ಏರಿಕೆಯಾಗಿದೆ. ವಿವಿಧ ಅಳತೆಯ ಮಜ್ಜಿಗೆ ಪ್ಯಾಕೆಟ್ ಗಳ ದರಗಳು ಸಹ ರೂ.೧ರಷ್ಟು ಹೆಚ್ಚಾಗಿವೆ. ೨೦೦ ಎಂಎಲ್ ಮಜ್ಜಿಗೆಯ ಬೆಲೆ ಈಗ ರೂ.೮, ಟೆಟ್ರಾ ಪ್ಯಾಕ್ ಬೆಲೆ ರೂ.೧೧ ಹಾಗೂ ಪಿಟಿಟಿ ಬಾಟಲ್ ಬೆಲೆ ರೂ.೧೩ಕ್ಕೆ ನಿಗಧಿಪಡಿಸಲಾಗಿದೆ.
ಜುಲೈ ೧೩ರ ಅಧಿಸೂಚನೆಯೊಂದರಲ್ಲಿ ಕೇಂದ್ರ ಸರ್ಕಾರ ಪೂರ್ವ ಪ್ಯಾಕೇಜ್ ಮತ್ತು ಲೇಬಲ್ ಆಗಿರುವ ಮೊಸರು, ಲಸ್ಸಿ, ಮಜ್ಜಿಗೆ ಮೇಲಿನ ಜಿಎಸ್ ಟಿ ಯನ್ನು ಹಿಂದಕ್ಕೆ ಪಡೆದುಕೊಂಡು ಶೇ.೫ ತೆರಿಗೆ ವಿಧಿಸಿತು.
ಕರ್ನಾಟಕದಲ್ಲಿ ‘ನಂದಿನಿ’ ಬ್ರ್ಯಾಂಡ್ ನ ಪ್ಯಾಕೇಜ್ ಮಾಡಿರುವ ಡೈರಿ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿದ್ದರೂ ಸಹ, ಇತರೆ ಅಗತ್ಯ ವಸ್ತುಗಳ ಬೆಲೆಗಳು ಈಗಾಗಲೇ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವ ಕಾರಣದಿಂದಾಗಿ ತೊಂದರೆ ಅನುಭವಿಸುತ್ತಿರುವಂತಹ ಗ್ರಾಹಕರ ಮೇಲೆ ಈ ತೆರಿಗೆ ಹೆಚ್ಚಿನ ಹೊರೆಯಾಗಲಿದೆ. ಆದರೆ ಇದರಿಂದ ರೈತರಿಗೆ ಯಾವುದೇ ಅನುಕೂಲ ಆಗುವುದಿಲ್ಲ, ಎನ್ನುವುದು ಬೆಂಗಳೂರಿನ ಗ್ರಾಹಕರ ಅನಿಸಿಕೆಯಾಗಿದೆ.
ಕರ್ನಾಟಕದ ಡೈರಿ ರೈತರು, ಹಣದುಬ್ಬರಕ್ಕೆ ಸರಿಹೊಂದಿಸಲು ಹಾಲು ಖರೀದಿ ಬೆಲೆಗಳನ್ನು ಪ್ರತಿ ಲೀಟರ್ ಗೆ ರೂ.೩೪ ರಿಂದ ರೂ.೫೦ಕ್ಕೆ ಏರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಪ್ರಾಧಿಕಾರಗಳು ಈ ಸಂಬಂಧ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Nandini-curd- lassi – buttermilk – expensive