ಬೆಂಗಳೂರು,ಮಾರ್ಚ್,6,2025 (www.justkannada.in): ರಾಜ್ಯದ ಹೆಮ್ಮೆಯ ನಂದಿನಿ ಹಾಲು ಮತ್ತು ಉತ್ಪನ್ನಗಳು ದೂರದ ಉತ್ತರ ಪ್ರದೇಶಕ್ಕೂ ಕಾಲಿಡುತ್ತಿದೆ.
ಹೌದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಂದಿನಿ ಹಾಲಿನ ಕೋ-ಪ್ಯಾಕಿಂಗ್ ಮತ್ತು ಮಾರಾಟವನ್ನು ಪ್ರಾರಂಭಿಸಲಾಗುತ್ತಿದ್ದು ನೂತನ ಹಾಲು ಸಂಸ್ಕರಣಾ ಘಟಕವನ್ನು ಕೆಎಂಎಫ್ ಗುರುತಿಸಲಾಗಿದೆ.
ಈ ಕುರಿತು ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಂಸ್ಥೆಯು ರಾಷ್ಟ್ರದಲ್ಲಿಯೇ ಎರಡನೇಯ ದೊಡ್ಡ ಹಾಲು ಸಹಕಾರ ಸಂಸ್ಥೆಯಾಗಿದೆ. ಕೆಎಂಎಫ್ ಸಂಸ್ಥೆಯು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚಿನ ಹೈನುಗಾರ ರೈತರಿಂದ ಹಾಲನ್ನು ಖರೀದಿಸಿ. ಸಂಸ್ಕರಿಸಿ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ರಾಂಡ್ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಕಳೆದ 05 ದಶಕಗಳಿಂದ ಮಾರಾಟ ಮಾಡಲಾಗುತ್ತಿದೆ.
ಕೆಎಂಎಫ್ ಸಂಸ್ಥೆಯು “ನಂದಿನಿ” ಬ್ರಾಂಡ್‌ನ ಉತ್ಪನ್ನಗಳ ಮಾರಾಟವನ್ನು ಕರ್ನಾಟಕ ರಾಜ್ಯಕ್ಕೆ ಮಾತ್ರ ಸಿಮೀತಗೊಳಿಸದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿಯೂ ಸಹ ಮಾರಾಟ ಜಾಲ ವಿಸ್ತರಣೆಯನ್ನು ಸತತವಾಗಿ ನಡೆಯುತ್ತಾ ಬರುತ್ತಿದೆ. ಇದೇ ನಿಟ್ಟಿನಲ್ಲಿ ಇತ್ತೀಚಿಗಷ್ಟೇ ಕೆಎಂಎಫ್ ಸಂಸ್ಥೆಯು ರಾಷ್ಟ್ರ ರಾಜಧಾನಿ ‘ದೆಹಲಿ’ ಮಾರುಕಟ್ಟೆಯಲ್ಲಿ ನಂದಿನಿ ಸ್ಯಾಚೆ ಹಾಲು, ಮೊಸರು ಮತ್ತು ಮಜ್ಜಿಗೆ ಮಾರಾಟ ಪ್ರಾರಂಭಿಸಿದ್ದು, ಸದರಿ ಮಾರುಕಟ್ಟೆ ಪ್ರದೇಶಗಳ ಸುತ್ತಮುತ್ತಲಿನ ನಗರಗಳಿಗೆ ಮಾರಾಟ ಜಾಲ ವಿಸ್ತರಣೆ ಕಾರ್ಯಚಟುವಟಿಕೆಗೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ದೆಹಲಿ ನಗರಕ್ಕೆ ಸಮೀಪದ ಉತ್ತರಪ್ರದೇಶ ರಾಜ್ಯದ “ಹತ್ರಾಸ್” ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟಕವನ್ನು ಕೆಎಂಎಫ್ ಗುರುತಿಸಲಾಗಿದ್ದು, ಸದರಿ ಘಟಕದ ಸುತ್ತಮುತ್ತಲಿನ ನಗರಪ್ರದೇಶಗಳಾದ ಆಗ್ರಾ, ಮಥುರ, ಮೀರತ್, ಅಲಿಗರ್ (Mathura, Agra, Meerut, Alighar) ಪ್ರದೇಶಗಳಲ್ಲಿ ನಂದಿನಿ ಹಾಲು ಮಾರಾಟವನ್ನು ಪ್ರಾರಂಭಿಸುವ ಸಂಬಂಧ ಅಲ್ಲಿನ ಮಾರಾಟಗಾರರ ಸಭೆಯನ್ನು ದಿನಾಂಕ 05.03.2025 ರಂದು ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಕೆ.ಎ.ಎಸ್ ಅವರು ನೇರವೇರಿಸಿ, ಸದರಿ ಪ್ರದೇಶಗಳಲ್ಲಿ ದಿನಾಂಕ: 16.03.2025 ರಿಂದ ನಂದಿನಿ ಹಾಲು ಮತ್ತು ಮೊಸರು ಮಾರಾಟಕ್ಕೆ ಎಲ್ಲಾ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ರಾಜಸ್ಥಾನದ ಜೈಪುರ್ ನಲ್ಲಿ ಸಹ ಈ ಮಾಹೆಯಲ್ಲಿಯೇ ಹಾಲು ಮಾರಾಟ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು ಎಂದಿದ್ದಾರೆ.
Key words: Uttar Pradesh, Nandini Milk, Products