ಬೆಂಗಳೂರು,ಆಗಸ್ಟ್,25,2020(www.justkannada.in): ತನ್ನ ಎಲ್ಲ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸುವ ಮೂಲಕ ಕನ್ನಡದ ರಾಯಭಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ಜವಾಬ್ದಾರಿ ಹೆಚ್ಚಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದರು.
ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ನಿಯಮಿತದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಎಸ್ ನಾಗಾಭರಣ, ತಮಿಳುನಾಡು, ಆಂಧ್ರಪ್ರದೇಶ, ದಕ್ಷಿಣ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಕೆ.ಎಂ.ಎಫ್ ನ ಉತ್ನನ್ನಗಳು ರಫ್ತಾಗುತ್ತಿದ್ದು, ಅವುಗಳ ಮೇಲೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವ ಹೆಸರುಗಳನ್ನು ಇಡಬೇಕು. ಆ ಮೂಲಕ ನಂದಿನಿ ಜತೆ ಕನ್ನಡವನ್ನು ಬ್ರಾಂಡ್ ಮಾಡುವಂತೆ ಸಲಹೆ ನೀಡಿದರು.
ದಕ್ಷಿಣ ಭಾರತದ ಅತಿ ದೊಡ್ಡ ಸಂಸ್ಥೆಯಾಗಿರುವ ಕೆ.ಎಂ.ಎಫ್, 130ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ವಹಿವಾಟು ನಡೆಸುತ್ತಿದೆ. ಸಿಂಗಪೂರ್, ಮಲೇಶ್ಯಾ ಸೇರಿದಂತೆ ವಿಶ್ವದೆಲ್ಲೆಡೆ ರಫ್ತಾಗುತ್ತಿದೆ. ಹಾಗಾಗಿ ಪ್ರತೀ ಉತ್ಪನ್ನದ ಮೇಲೂ ಕನ್ನಡವನ್ನು ಬಳಸುವ ಹಾಗೂ ಪ್ರತಿ ಉತ್ಪನ್ನಕ್ಕೂ ಕನ್ನಡದ ವಿಶಿಷ್ಟ ಹೆಸರುಗಳನ್ನೇ ಇಟ್ಟು ಆ ಮೂಲಕ ಕಸ್ತೂರಿ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ರಾಯಭಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕೆಲವು ನಂದಿನಿ ಅಂಗಡಿಗಳ ಹೆಸರು ಇಂಗ್ಲಿಷ್ ನಲ್ಲಿರುವ ಬಗ್ಗೆ ಹಾಗೂ ಉತ್ಪನ್ನವೊಂದಕ್ಕೆ ಕನ್ನಡೇತರ ಹೆಸರಾದ “ಚಕ್ಕಿ ಲಾಡು” ಎಂದು ಹೆಸರಿಟ್ಟಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಈ ಬಗ್ಗೆ ಪತ್ರಿಕೆಗಳಲ್ಲೂ ವರದಿಯಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯನ್ನು ಆನ್ ಲೈನ್ ನಲ್ಲಿ ಪ್ರದರ್ಶಿಸಿ, ನಮ್ಮ ನೆಲದ ಸಂಸ್ಥೆ, ರೈತರ ಒಡನಾಡಿಯಾದ ಸಂಸ್ಥೆ ಇಂಗ್ಲಿಷ್ ಗೆ ಬ್ರಾಂಡ್ ಆಗಿ ಕೆಲಸ ಮಾಡುವುದು ಎಷ್ಟು ಸರಿ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಯಾವ ಅಧಿಕಾರಿ/ನೌಕರರ ಬಗ್ಗೆ ಕ್ರಮವಹಿಸಿದ್ದೀರಿ ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಕೆ.ಎಂ.ಎಫ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಟಿ.ಎಸ್ ನಾಗಾಭರಣ ಸೂಚಿಸಿದರು.
ಭಾರತದಲ್ಲಿ 2ನೇ ದೊಡ್ಡ ಮಹಾಮಂಡಳವಾಗಿರುವ ಕೆ.ಎಂ.ಎಫ್, ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಆದರೆ ತಮ್ಮ ಅಧೀನದ ಜಿಲ್ಲಾ ಒಕ್ಕೂಟಗಳ ಜಾಲತಾಣಗಳು ಇಂಗ್ಲಿಷಿನಲ್ಲಿದ್ದು, ಇವುಗಳನ್ನು ಕೂಡಲೇ ರಾಜ್ಯ ಸರ್ಕಾರದ ಆದೇಶದನ್ವಯ ಮಾದರಿ ಜಾಲತಾಣವಾಗಿ ರೂಪಿಸುವಂತೆ ನಿರ್ದೇಶನ ನೀಡಿದರು.
ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ.ಸತೀಶ್, ಇನ್ನು ಮುಂದೆ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸುವಂತೆ ನಿರ್ದೇಶನ ನೀಡಲಾಗುವುದು ಮತ್ತು ನವೆಂಬರ್ ಒಳಗೆ ಜಾಲತಾಣವನ್ನು ಕನ್ನಡೀಕರಣಗೊಳಿಸಲಾಗುವುದು ಎಂದು ಟಿ.ಎಸ್ ನಾಗಾಭರಣ ಭರವಸೆ ನೀಡಿದರು.
ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಪ್ರಾಧಿಕಾರ ಸದಸ್ಯರಾದ ರೋಹಿತ್ ಚಕ್ರತೀರ್ಥ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡಪರ ಹೋರಾಟಗಾರರಾದ ಅರುಣ್ ಜಾವಗಲ್, ಕೆ.ಎಂ.ಎಫ್ ನ ನಿರ್ದೇಶಕ (ಆಡಳಿತ)ರಾದ ಡಾ.ಸಿ.ಎನ್.ರಮೇಶ್, ಅಪರ ನಿರ್ದೇಶಕರಾದ ಎಂ.ಎಸ್.ಸುಹೇಲ್, ವೆಬ್ ಪೋರ್ಟಲ್ ಯೋಜನಾಧಿಕಾರಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
Key words: Nandini -Products – Ambassador – Kannada Language-TS Nagabarana