ಬೈಕ್ ಸಮೇತ ಹಳ್ಳಕ್ಕೆ ಬಿದ್ದ ಯುವಕ : ತಂಗಿ ನಿಶ್ಚಿತಾರ್ಥದ ತಯಾರಿಯಲ್ಲಿದ್ದ ಅಣ್ಣ ಕೋಮಾಗೆ..?

ಮೈಸೂರು, ಮಾ.21,2025:  ತಂಗಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಡುಗೆ ಸಾಮಗ್ರಿ ತರಲು ತೆರಳಿದ ಯುವಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಬಿದ್ದು ಕೋಮಾ ಸ್ಥಿತಿಗೆ ತಲುಪಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವ ಘಟನೆ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಹೆಡಿಯಾಲ ಗ್ರಾಮದ ವೀರಭದ್ರಸ್ವಾಮಿ ಘಟನೆಯಲ್ಲಿ ಗಾಯಗೊಂಡ ಯುವಕ. ತೀವ್ರ ಗಾಯಗೊಂಡು ಕೋಮಾ ಸ್ಥಿತಿ ತಲುಪಿರುವ ವೀರಭದ್ರಸ್ವಾಮಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಮಗಾರಿ ನಡೆಸುವ ವೇಳೆ ಯಾವುದೇ ಸುರಕ್ಷಿತಾ ಕ್ರಮ ಕೈಗೊಳ್ಳದ ಗುತ್ತಿಗೆದಾರ ಗೋವಿಂದೇಗೌಡ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹೇಗೆ ನಡೆಯಿತು:

ತಂಗಿ ನಿಶ್ಚಿತಾರ್ಥ ಹಿನ್ನಲೆ ವೀರಭದ್ರಸ್ವಾಮಿ ಹೆಡಿಯಾಲ ಗ್ರಾಮದಿಂದ ಹುಲ್ಲಹಳ್ಳಿಗೆ ಪಲ್ಸರ್ ಬೈಕ್ ನಲ್ಲಿ ತೆರಳುತ್ತಿರುವಾಗ, ಮಾದಾಪುರ ಹಾಗೂ ಕಾರ್ಯ ಗ್ರಾಮದ ನಡುವಿನ ರಾಜ್ಯ ಹೆದ್ದಾರಿಯಲ್ಲಿ  ಡೆಕ್ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಉರುಳಿ ಬಿದ್ದಿದ್ದಾನೆ.

ಕಾಮಗಾರಿಗೆಂದು  ಅಳವಡಿಸಿದ್ದ ಕಬ್ಬಿಣದ ರಾಡ್ ಗಳು ಕಣ್ಣು ಹಾಗೂ ತಲೆ ಭಾಗವನ್ನ ಚುಚ್ಚಿ ಗಾಯಗೊಳಿಸಿದೆ. ಕೋಮಾ ಸ್ಥಿತಿಗೆ ತಲುಪಿದ ವೀರಭದ್ರಸ್ವಾಮಿಯನ್ನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಭಾರಿ ಪ್ರಮಾಣದ ಹಳ್ಳ ತೆಗೆಯುವ ವೇಳೆ ಗುತ್ತಿಗೆದಾರ ಯಾವುದೇ ಸುರಕ್ಷತಾ  ಕ್ರಮಗಳನ್ನ ಕೈಗೊಳ್ಳದ ಹಿನ್ನಲೆ ಘಟನೆ ಸಂಭವಿಸಿದೆ ಎಂದು ಆರೋಪಿಸಿ ವೀರಭದ್ರಸ್ವಾಮಿ ತಂದೆ ಬಸವ ಲಿಂಗಪ್ಪ ರವರು ಹುಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿನ್ನಲೆ ಗುತ್ತಿಗೆದಾರ ಗೋವಿಂದೇಗೌಡ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಘಟನೆಯಿಂದ ಸದ್ಯ ಮನೆಯಲ್ಲಿ ನಡೆಯಬೇಕಿದ್ದ ಶುಭಕಾರ್ಯ ಸ್ಥಗಿತಗೊಂಡಿದೆ.

key words: young man,  fell into a ditch, sister’s engagement,coma, nanjangudu, police

A young man fell into a ditch with his bike: Brother who was preparing for his sister’s engagement fell into a coma..?