ಕಾಂಗ್ರೆಸ್ ವಾಮಮಾರ್ಗದ ಮೂಲಕ ನಂಜನಗೂಡು ನಗರಸಭೆ ಅಧಿಕಾರ ಹಿಡಿದಿದೆ- ಮಾಜಿ ಶಾಸಕ ಹರ್ಷವರ್ಧನ್ ಆರೋಪ

ಮೈಸೂರು,ಸೆಪ್ಟಂಬರ್,4,2024 (www.justkannada.in): ನಂಜನಗೂಡು ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ವಿರುದ್ದ ಮಾಜಿ ಶಾಸಕ ಹರ್ಷವರ್ದನ್ ಕಿಡಿಕಾರಿದ್ದಾರೆ.

ಈ ಸಂಬಂಧ ಮೈಸೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  ಮಾಜಿ ಶಾಸಕ ಹರ್ಷವರ್ಧನ್, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್ ಆರ್ ಮಹದೇಸ್ವಾಮಿ ಸೇರಿದಂತೆ ಇತರ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಹರ್ಷವರ್ದನ್, ಕಾಂಗ್ರೆಸ್ ಪಕ್ಷ ವಾಮಮಾರ್ಗದ ಮೂಲಕ ನಂಜನಗೂಡು ನಗರಸಭೆಯ ಅಧಿಕಾರ ಹಿಡಿದಿದೆ. ಮತದಾನಕ್ಕೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರು ಕನಕಪುರದ ಬಳಿ ರೆಸಾರ್ಟ್ ನಲ್ಲಿ ಇದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು. ಆ ನಾಲ್ವರು ಸದಸ್ಯರು ಯಾವುದೇ ರೀತಿಯ ಸಂಪರ್ಕಕ್ಕೆ ಸಿಗಲಿಲ್ಲ. ಜೆಡಿಎಸ್ ನ ರೆಹಾನಬಾನು ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಒಪ್ಪಿದ್ದೆವು. ಆದರೂ ಜೆಡಿಎಸ್ ನ ಮೂವರು ಸದಸ್ಯರು ಕಡೇ ಗಳಿಗೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ಇವರೆಲ್ಲರೂ ಯಾವ ಆಮಿಷಕ್ಕೆ ಬಲಿಯಾಗಿದ್ದಾರೋ ಗೊತ್ತಿಲ್ಲ. ಬಹುಶಃ ಹಣದ ಆಮಿಷಕ್ಕೆ ಬಲಿಯಾಗಿದ್ದಾರೆ. ಜೆಡಿಎಸ್ ಸದಸ್ಯರ ನಿಲುವು ಆಘಾತ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು, ಶಾಸಕರ ಕೈವಾಡ

ಅಧಿಕಾರ ಹಿಡಿಯಬೇಕೆಂಬ ಹಠದಲ್ಲಿ ಕಾಂಗ್ರೆಸ್ ಪಕ್ಷ ವಾಮಮಾರ್ಗ ಅನುಸರಿಸಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷ ಅಕ್ರಮವಾಗಿ ಸಂಗ್ರಹಿಸಿರುವ ಹಣ ಬಳಕೆ ಮಾಡಿ ಅಧಿಕಾರ ಹಿಡಿದಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು, ಶಾಸಕರ ಕೈವಾಡವಿದೆ. ಅಲ್ಲದೆ ನಮ್ಮ ಪಕ್ಷದಲ್ಲೇ ನಮ್ಮನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ಬೇಸರ ವ್ಯಕ್ತಪಡಿಸಿದರು.

ಚುನಾವಣೆಗೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರು ಪಕ್ಷದಿಂದ ಉಚ್ಚಾಟನೆ- ಎಲ್ ಆರ್ ಮಹಾದೇವಸ್ವಾಮಿ

ನಂಜನಗೂಡು ‌ನಗರಸಭೆ ಚುನಾವಣೆಗೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು  ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಎಲ್ ಆರ್ ಮಹಾದೇವಸ್ವಾಮಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್ ಆರ್ ಮಹಾದೇವಸ್ವಾಮಿ, ನಗರಸಭೆ ಚುನಾವಣೆ ಸಂಬಂಧ ಬಿಜೆಪಿಯ ಎಲ್ಲಾ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೂ ಪಕ್ಷದ ವಿಪ್ ಉಲ್ಲಂಘಿಸಿ ನಾಲ್ವರು ಬಿಜೆಪಿ ಸದಸ್ಯರು ಮತದಾನಕ್ಕೆ ಗೈರು ಹಾಜರಾಗಿದ್ದಾರೆ. ಹಾಗಾಗಿ ವಿಪ್ ಉಲ್ಲಂಘಿಸಿರುವ ಬಿಜೆಪಿ ನಗರಸಭೆ ಸದಸ್ಯರಾದ ಗಿರೀಶ್ ಕುಮಾರ್, ಗಾಯತ್ರಿ, ವಿಜಯಲಕ್ಷ್ಮಿ, ಮೀನಾಕ್ಷಿ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.  ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಲ್ವರು ಬಿಜೆಪಿ ಸದಸ್ಯರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ ನಾಲ್ವರ ವಿರುದ್ದವೂ ಕಾನೂನು ಹೋರಾಟ ನಡೆಸಲಾಗುತ್ತದೆ. ಈ ಮೂಲಕ ಪಕ್ಷ ವಿರೋಧಿ ಕೃತ್ಯಗಳಲ್ಲಿ ತೊಡಗುವವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಲ್ ಆರ್ ಮಹದೇವಸ್ವಾಮಿ ಹೇಳಿದರು.

Key words: Nanjangudu,  Municipal Council,Congress, Former MLA, Harshvardhan