ಉಜ್ವಲ ಭವಿಷ್ಯಕ್ಕೆ ನ್ಯಾನೋ ತಂತ್ರಜ್ಞಾನ ನಿರ್ಣಾಯಕ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,7,2022(www.justkannada.in):  ನ್ಯಾನೋ ತಂತ್ರಜ್ಞಾನದ ಮೂಲಕ ತಯಾರಿಸಿರುವ ನ್ಯಾನೋ ಯೂರಿಯಾ ರಸಗೊಬ್ಬರವು ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವರ್ಚುಯಲ್ ಮಾದರಿಯಲ್ಲಿ ಏರ್ಪಡಿಸಿರುವ ಮೂರು ದಿನಗಳ 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ವನ್ನು ಸೋಮವಾರ ಉದ್ಘಾಟಿಸಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಈ ಸಮಾವೇಶವು ಬುಧವಾರದವರೆಗೆ ನಡೆಯಲಿದೆ.

`ನ್ಯಾನೋ ಯೂರಿಯಾವನ್ನು ರಾಜ್ಯದ ಎಲ್ಲ ಕೃಷಿ ವಿ.ವಿಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಳ್ಳೆಯ ಫಲಿತಾಂಶ ಬಂದಿದೆ. ಇದು ಮುಂಬರುವ ದಿನಗಳಲ್ಲಿ ಕೃಷಿಕರ ಅವಿಭಾಜ್ಯ ಅಂಗವಾಗಲಿದ್ದು, ನ್ಯಾನೋ ತಂತ್ರಜ್ಞಾನವು ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಜನಜೀವನವನ್ನು ಸುಧಾರಿಸಬೇಕು ಎನ್ನುವುದು ಪ್ರಧಾನಿ ಮೋದಿಯವರ ಕನಸೂ ಆಗಿದೆ’ ಎಂದು ಅವರು ನುಡಿದರು.

ಹೀಗಾಗಿ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವು `ನ್ಯಾನೋ ತಂತ್ರಜ್ಞಾನದ ತೊಟ್ಟಿಲು’ ಕೂಡ ಆಗಬೇಕು. ಇದಕ್ಕೆ ಸರಕಾರವು ಸಂಪೂರ್ಣ ಸಹಕಾರ ನೀಡಲಿದ್ದು, ಅಗತ್ಯ ನೀತಿಗಳನ್ನು ರೂಪಿಸಲಿದೆ ಎಂದು ಅವರು ಆಶ್ವಾಸನೆ ನೀಡಿದರು.

`ಆಧ್ಯಾತ್ಮಿಕತೆ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಇವು ಒಂದನ್ನೊಂದು ಪ್ರೇರೇಪಿಸುತ್ತವೆ. ಇವುಗಳ ಜತೆಗೆ ಆವಿಷ್ಕಾರದ ಶಕ್ತಿಯು ಸೇರಿಕೊಂಡಾಗ ಅದು ಮನುಷ್ಯನ ಬದುಕನ್ನು ನಿರ್ಣಾಯಕವಾಗಿ ಬದಲಿಸುತ್ತದೆ. ಇದಕ್ಕೆ ನ್ಯಾನೋ ತಂತ್ರಜ್ಞಾನ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಬಣ್ಣಿಸಿದರು.

ಬೆಂಗಳೂರಿನಲ್ಲಿ ಸರಕಾರಿ ಮತ್ತು ಖಾಸಗಿ ವಲಯ ಎರಡೂ ಸೇರಿ ವಿಶ್ವದರ್ಜೆಯ 180 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಇವು ನ್ಯಾನೋ ತಂತ್ರಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯಲಿವೆ. ಒಂದು ಅಣುವಿನಲ್ಲಿರುವ ಅಗಾಧ ಶಕ್ತಿಯನ್ನು ಮನುಕುಲದ ಒಳಿತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದೇ ನ್ಯಾನೋ ತಂತ್ರಜ್ಞಾನದ ವೈಶಿಷ್ಟ್ಯವಾಗಿದೆ. ಹೀಗಾಗಿ ಇದು `ಸೀಡ್ ತಂತ್ರಜ್ಞಾನ’ವಾಗಿದ್ದು, ಸುಸ್ಥಿರತೆ ಮತ್ತು ಅವಕಾಶ ಎರಡನ್ನೂ ಹೊತ್ತು ತರಲಿದೆ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

ಸಮಾವೇಶದಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, `ಸರಕಾರವು ಸದ್ಯದಲ್ಲೇ ಸಮಗ್ರ ನ್ಯಾನೋ ತಂತ್ರಜ್ಞಾನ ನೀತಿಯನ್ನು ಹೊರತರಲಿದೆ. ಈ ಮೂಲಕ ಸಂಶೋಧನಾ ಮತ್ತು ಔದ್ಯಮಿಕ ವಲಯಗಳೆರಡನ್ನೂ ಪರಸ್ಪರ ಹತ್ತಿರಕ್ಕೆ ತರಲಾಗುವುದು. ಇದರಿಂದಾಗಿ, ನ್ಯಾನೋ ತಂತ್ರಜ್ಞಾನದ ಲಾಭವು ಸಮಾಜಕ್ಕೆ ಸಿಗಲಿದೆ’ ಎಂದರು.

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಪ್ರೀತಿಯನ್ನು ಬೆಳೆಸಬೇಕೆನ್ನುವ ಉದ್ದೇಶದಿಂದ `ವಿಜ್ಞಾನ ಪ್ರತಿಭಾ ಶೋಧ’ವನ್ನು ಹಮ್ಮಿಕೊಳ್ಳಲಾಗಿದ್ದು, ಶಿಷ್ಯವೇತನಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ, ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೆ ಒತ್ತು ನೀಡುವಂತಿದ್ದು, ಇದುವರೆಗಿದ್ದ ಅಂತರವನ್ನು ನೀಗಲಿದೆ ಎಂದು ಅವರು ಹೇಳಿದರು.

ಸರಕಾರದ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಮುಖ್ಯಸ್ಥ ಪ್ರೊ.ನವಕಾಂತ ಭಟ್ ಮಾತನಾಡಿ, `ಇದು ಕೇವಲ ದೇಶದ ಸ್ವಾತಂತ್ರ್ಯದ 75ನೇ ವರ್ಷವಷ್ಟೆ ಅಲ್ಲ, ನಮ್ಮಲ್ಲಿ ಸೆಮಿಕಂಡಕ್ಟರ್ ಟ್ರಾನ್ಸಿಸ್ಟರ್ ಬಂದ 75ನೇ ವರ್ಷವೂ ಆಗಿದೆ. ಹೀಗಾಗಿ ಇಂದು ನಮ್ಮಲ್ಲಿ ಮನುಷ್ಯನ ಮಿದುಳಿನಿಂದ ಸ್ಫೂರ್ತಿ ಪಡೆದ ಕಂಪ್ಯೂಟರ್ ವಿಜ್ಞಾನ ಬರುತ್ತಿದೆ,’ ಎಂದರು.

ಕಾರ್ಯಕ್ರಮದಲ್ಲಿ ತಂಜಾವೂರಿನ `ಶಾಸ್ತ್ರ ವೈಜ್ಞಾನಿಕ ಅಧ್ಯಯನ ಕೇಂದ್ರ’ದ ಹಿರಿಯ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್ ಅವರಿಗೆ ಪ್ರತಿಷ್ಠಿತ `ಸಿಎನ್ಆರ್ ರಾವ್ ವಿಜ್ಞಾನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಸಮ್ಮೇಳನದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಪ್ರೊ.ಅಜಯಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಬಸವರಾಜು ಇದ್ದರು. ಡಾ.ಸಿಎನ್ಆರ್ ರಾವ್ ವರ್ಚುಯಲ್ ರೂಪದಲ್ಲಿ ಭಾಗವಹಿಸಿದ್ದರು.

Key words: Nanotechnology – bright future- CM-Basavaraja Bommai.

ENGLISH SUMMARY…

State to come out with a sector-specific policy for nanotech says IT/BT and S&T Minister

Nano Urea found to be successful in tests: CM Basavaraja Bommai

Bengaluru: Nano Urea, the fertilizer based on nanotechnology has been tested in all the universities and is found to be successful, Chief Minister Basavaraja Bommai, stated on Monday.

Speaking while inaugurating the 12the edition of the “Bengaluru India Nano” themed on “NanoTech for Sustainable Future”, a flagship 3-day event of the state government, he said that the ambition of Prime Minister Narendra Modi to make available Nano Urea for farmers will become a reality in the near future.

Nanotechnology will help the management of energy in an efficient manner at the tiniest level (nano-level). The efficient energy management at the smallest level is also expected to bring about sustainability, he opined.

Saying, the city of Bengaluru with 180 R & D institutes (Including Public & Private) has a very congenial ecosystem to incubate the growth of nanotechnology, he added, the synergy between R & D institutes, educational institutions, and Students will help to translate lab findings to marketable products.

Dr.C.N.Ashwatha Narayana, Minister for Electronics, IT/BT, and S&T, said, the government of Karnataka, which has come out with many sector-specific policies will also carve out a nanotechnology policy.

Nanotechnology has encompassed all the vital areas such as water, health, energy, agriculture and is set to become a 300 Billion Dollar economy in nanotechnology in the next 5 years, he told.

Bharat Ratna awardee Scientist Prof.C.N.R.Rao, who has been a mentor for taking forward nanotechnology in the state, and Honorary Chairperson, State Visionary Group for nanotechnology presided over through virtual participation. His message on the occasion was read out by Prof. G.U.Kulakarni of Jawaharlal Nehru Centre for Advanced Scientific Research (JNCASR). Smt. Indumati Rao, Wife of Dr.C.N.R.Rao was also attended virtually.

Prof. Navakanta Bhat, Chairman, State Vision Group for Nano-Technology told that the applications of nanotechnology enabling the manufacturing of products at nano ranges will bring in disruptive changes in the coming years.

As part of the event, S.Swaminathan of Sastra Deemed University was conferred with Dr.C.N.R.Rao sponsored award for achievement in the field of nanotechnology. Addressing the occasion, Swaminathan said, nanotechnology has pervaded all branches of science and technology.

Rajeev Chandra Shekhar, Union Minister of State for IT/BT, told in his recorded speech, the entire world was looking for eventful partnerships in the technological sphere, especially in the post-covid times and sunrise industry such as nanotechnology would create huge opportunities for India in the global scenario.

Dr.E.V.Ramana Reddy, ACS, Department of Electronics, IT/BT and S&T, A.B.Basavaraju, MD, Karnataka State Science and Technology Promotion Society (KSTePS) were present.