ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಉದ್ಯೋಗ ಪಡೆಯಿರಿ- ವಸಂತಲಕ್ಷ್ಮೀ ಸಲಹೆ

ಮೈಸೂರು,ಏಪ್ರಿಲ್,9,2025 (www.justkannada.in):  ಮ-ನರೇಗಾ ಯೋಜನೆಯ ಕೂಲಿ ದರವನ್ನು ಏಪ್ರಿಲ್ 1 ರಿಂದ 370/- ರೂ. ಗೆ ಏರಿಕೆ ಮಾಡಲಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಹಾಯಕ ನಿರ್ದೇಶಕ(ಪಂ.ರಾ)ರಾದ ವಸಂತಲಕ್ಷ್ಮೀ ಅವರು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ “ಸ್ತ್ರೀ ಚೇತನ ವಿಶೇಷ ಅಭಿಯಾನ” ಕಾರ್ಯಕ್ರಮಕ್ಕೆ ಜಾಬ್ ಕಾರ್ಡ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ವಸಂತಲಕ್ಷ್ಮೀ ಅವರು ಮಾತನಾಡಿದರು.

ಮ-ನರೇಗಾದಲ್ಲಿ ಶೇ.50 ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ. ಮಾತ್ರವಲ್ಲದೆ, ಮೂರು ತಿಂಗಳು ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ಆದ್ಯತೆ ನೀಡುವುದಾಗಿದ್ದು, ಮಹಿಳಾ ಸಬಲೀಕರಣವನ್ನು ನರೇಗಾ ಯೋಜನೆ ಮೂಲಕ ಕೈಗೊಳ್ಳುವುದು ಸ್ತ್ರೀ ಚೇತನ ಅಭಿಯಾನದ ಉದ್ದೇಶವಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಒಟ್ಟಾಗಿ ಸೇರುವ ಪ್ರಯತ್ನವಾಗುತ್ತಿದೆ. ಇದೆ ಮಾದರಿಯಲ್ಲಿ ಮಹಿಳೆಯರೆಲ್ಲರೂ ಒಟ್ಟಾಗಿ ಸೇರಿ ಮ-ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಕೆರೆ, ಚರಂಡಿ, ಕಾಂಪೌಂಡ್, ಮೆಟ್ಲಿಂಗ್ ರಸ್ತೆ ನಿರ್ಮಾಣದಂತಹ ಸಮುದಾಯ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಇಂದಿಗೂ ಕೆಲವು ಕುಟುಂಬಗಳು ಜಾಬ್ ಕಾರ್ಡ್ ಮಾಡಿಸಿಕೊಂಡಿಲ್ಲದಿರುವುದು ತಿಳಿದು ಬಂದಿದ್ದು, ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು. ಆ ಮೂಲಕ ನರೇಗಾ ಯೋಜನೆಯಡಿ ದೊರೆಯುವ ದನದ ಕೊಟ್ಟಿಗೆ, ಕೋಳಿ, ಮೇಕೆ ಶೆಡ್ ನಂತಹ ವೈಯಕ್ತಿಕ ಸೌಲಭ್ಯಗಳನ್ನು ಪಡೆಯುವುದರ ಜೊತೆಗೆ 100 ದಿನಗಳ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಮಾನವ ಸರಪಳಿ ನಿರ್ಮಾಣ : ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಹಿಳೆಯರಿಂದ ಮಾನವ ಸರಪಳಿಯನ್ನು ನಿರ್ಮಿಸಿ ಸ್ತ್ರೀ ಚೇತನ ಅಭಿಯಾನ ಬ್ಯಾನರ್ ನೊಂದಿಗೆ ಏಕೀಕೃತ ಸಹಾಯವಾಣಿ ಸಂಖ್ಯೆ 8277506000 ಹಾಗೂ ಕೂಲಿ ದರ 370/-ರೂ. ಸಂಬಂಧಿಸಿದಂತೆ ಮಾಹಿತಿ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭ  ಎನ್. ಆರ್.ಎಲ್.ಎಂ ತಾಲ್ಲೂಕು ಮೇಲ್ವೀಚಾರಕಿ ರೋಜಿ, ತಾಲ್ಲೂಕು ಐಇಸಿ ಸಂಯೋಜಕ ರವಿಕುಮಾರ್.ಡಿ, ಎಲ್.ಸಿ.ಆರ್.ಪಿ, ಕೃಷಿ ಸಖಿ, ಪಶು ಸಖಿಗಳು ಹಾಜರಿದ್ದರು.

Key words: Women, get, more jobs, REGA scheme, Vasanthalaxmi