ನವದೆಹಲಿ:ಮೇ-30:(www.justkannada.in) ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಎರಡನೇಬಾರಿಗೆ ಅಧಿಕಾರದ ಗದ್ದುಗೆಯೇರಿದ್ದು, 2ನೇಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎನ್ ಡಿಎ ಸಂಸದೀಯ ಮಂಡಳಿಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಳೆದಬಾರಿಯಂತೆ ಈಬಾರಿ ಕೂಡ ನರೇಂದ್ರ ಮೋದಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಮೋದಿ ಜತೆಗೆ ಸಚಿವರಾಗಿ ಅಮಿತ್ ಶಾ, ನಿತಿನ್ ಗಡ್ಕರಿ, ಡಿ ವಿ ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ಥೋಮರ್,ರವಿಶಂಕರ್ ಪ್ರಸಾದ್, ಥಾಮರ್ ಚಂದ್ ಗೆಹ್ಲೋಟ್,ಹರ್ಸಿಮ್ರತ್ ಕೌರ್ ಬಾದಲ್, ಸುಬ್ರಹ್ಮಣ್ಯಂ ಜೈಶಂಕರ್, ರಮೇಶ್ ಪೊಕ್ರಿಯಾಲ್, ಸ್ಮೃತಿ ಇರಾನಿ,ಅರ್ಜುನ್ ಮುಂಡಾ, ಡಾ.ಹರ್ಷವರ್ಧನ್, ಪ್ರಕಾಶ್ ಜಾವ್ಡೇಕರ್,ಪಿಯುಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಷಿ, ಮಹೇಂದ್ರನಾಥ್ ಪಾಂಡೆ, ಅರವಿಂದ್ ಗಣಪತ್ ಸಾವಂತ್, ಗಜೇಂದ್ರ ಸಿಂಗ್ ಶೇಖಾವತ್, ಸಂತೋಷ್ ಕುಮಾರ್ ಗಂಗ್ವಾರ್, ರಾವ್ ಇಂದ್ರಜಿತ್ ಸಿಂಗ್, ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಪ್ರಹ್ಲಾದ್ ಸಿಂಗ್ ಪಟೇಲ್, ಆರ್ ಕೆ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ ಪದಗ್ರಹಣ ಸಮಾರಂಭಕ್ಕೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸದ್ಗುರು ಜಗ್ಗಿ ವಾಸುದೇವ್, ಪೇಜಾವರ ಶ್ರೀ, ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಸೂಪರ್ ಸ್ಟಾರ್ ರಜನಿಕಾಂತ್ ದಂಪತಿ ಸೇರಿದಂತೆ ದೇಶ ವಿದೇಶಗಳ ಗಣ್ಯರು ಭಾಗಿಯಾಗಿದ್ದರು.
Narendra Modi Takes Oath As PM For Second Term