ಭೋಪಾಲ್:ಮೇ-16:(www.justkannada.in) ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ. ಅವರು ದೇಶಭಕ್ತರಾಗಿಯೇ ಜನಮಾನಸದಲ್ಲಿರುತ್ತಾರೆ ಎಂದು ಹೇಳಿಕೆ ನೀಡುವಮೂಲಕ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗಷ್ಟೇ ನಟ, ರಾಜಕಾರಣಿ ಕಮಲ್ ಹಾಸನ್, ಗೋಡ್ಸೆ ಸ್ವತಂತ್ರಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದು ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಈಗ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಾಧ್ವಿ ಪ್ರಜ್ಞಾ ಸಿಂಗ್, ನಾಥೂರಾಮ್ ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಅಂತವರಿಗೆ ಈ ಚುನಾವಣೆ ಮೂಲಕ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಪರೋಕ್ಷವಾಗಿ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ.
ಈ ನಡುವೆ ಸಾಧ್ವಿ ಪ್ರಜ್ಞಾ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್, ಪ್ರಜ್ನಾ ಹೇಳಿಕೆಯನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ ಮತ್ತು ಅದನ್ನು ಖಂಡಿಸುತ್ತದೆ. ಈ ಕುರಿತು ಪಕ್ಷ ಅವರ ಬಳಿ ಸ್ಪಷ್ಟನೆ ಕೇಳಿದ್ದು, ಹೇಳಿಕೆಗೆ ಪ್ರಜ್ನಾ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಾಧ್ವಿ ಪ್ರಜ್ಞಾ ಸಿಂಗ್, ಗಾಂಧಿಯವರನ್ನು ಕೊಂದ ನಾಥುರಾಮ್ ಗೋಡ್ಸೆ ಬದುಕಿದ್ದರೆ ಅವರಿಗೂ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತಿತ್ತು ಎಂದು ಹೇಳಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು.