ನ್ಯಾಷನಲ್ ಕಾಲೇಜು ನ್ಯಾಷನಲ್ ಯೂನಿವರ್ಸಿಟಿಯಾಗಲಿ- ಕುಲಸಚಿವ ಶೇಕ್ ಲತೀಫ್

ಬೆಂಗಳೂರು, ಜುಲೈ 26,2024 (www.justkannada.in):  ನ್ಯಾಷನಲ್ ಕಾಲೇಜು ಹೆಚ್.ಎನ್. ಅವರ ಆಶಯಗಳೊಂದಿಗೆ, ದೇಶಕ್ಕೆ ಮಾದರಿ ವ್ಯಕ್ತಿಗಳನ್ನು ಕೊಟ್ಟಿರುವಂತಹ ಸಂಸ್ಥೆ. ಮುಂದಿನ ದಿನಗಳಲ್ಲಿ  ಈ ಸಂಸ್ಥೆ  ಯೂನಿವರ್ಸಿಟಿಯಾಗಿ ಬೆಳೆಯಲಿ ಎಂದು ಬೆಂಗಳೂರು ವಿವಿ ಕುಲಸಚಿವರಾದ ಶೇಕ್ ಲತೀಫ್ ಹೇಳಿದರು.

ಜಯನಗರ ನ್ಯಾಷನಲ್ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳಿಗೆ ಮುಂದೆ ಅನೇಕ ಸವಾಲುಗಳಿವೆ. ಧನಾತ್ಮಕ ನಡವಳಿಕೆಗಳಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಇದೇ ಸಂದರ್ಭದಲ್ಲಿ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿ, ಹುತಾತ್ಮ ಸೈನಿಕರಿಗೆ ಪುಷ್ಪಗುಚ್ಛ ಅರ್ಪಿಸಲಾಯಿತು.

ಎನ್ ಇ ಎಸ್ ಅಧ್ಯಕ್ಷರಾದ ಡಾ.ಎಚ್.ಎನ್.ಸುಬ್ರಮಣ್ಯ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು  ಕಿವಿಮಾತು ಹೇಳಿದರು.

ಇದೇ ವೇಳೆ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು. ಎನ್ ಇ ಎಸ್ ಗೌರವ ಕಾರ್ಯದರ್ಶಿ ವಿ.ವೆಂಕಟಾಶಿವಾ ರೆಡ್ಡಿ , ಚೇರ್ಮನ್ ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ,  ಕಾರ್ಯದರ್ಶಿ ಬಿ.ಎಸ್.ಅರುಣ್ ಕುಮಾರ್, ಪ್ರಾಂಶುಪಾಲರಾದ ಡಾ. ಪಿ.ಎಲ್.ರಮೇಶ್, ಉಪ ಪ್ರಾಂಶುಪಾಲ ಪ್ರೊ.ಚೆಲುವಪ್ಪ, ಡಾ. ವೈ.ಸಿ. ಕಮಲ ಸೇರಿದಂತೆ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: National College, become, National University, Sheikh Latif