ಮೈಸೂರು, ನವೆಂಬರ್ 23, 2019 (www.justkannada.in): ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ತಿಳಿಸಿದ್ದಾರೆ.
ನವೆಂಬರ್ 30 ಹಾಗೂ ಡಿಸೆಂಬರ್ 1ರಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೋಲ್ಡನ್ ಜ್ಯುಬಿಲ್ ಹಾಲ್ ನಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ‘ಭಾರತದಲ್ಲಿ ಪರಿಶಿಷ್ಟ ಪಂಗಡ ಬುಡಕಟ್ಟು ಸಮುದಾಯಗಳ ಜೀವನೋಪಾಯ’ ವಿಷಯದ ಕುರಿತು ವಿಷಯ ಮಂಡನೆಯಾಗಲಿದೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ, ಧಾರವಾಡ ವಿವಿ ಕುಲಪತಿ ಪ್ರೊ. ಎ.ಎಸ್.ಶಿರಲಾಶೆಟ್ಟಿ, ರಿಜಿಸ್ಟ್ರಾರ್ ಪ್ರೊ.ಹೊನ್ನು ಸಿದ್ಧಾರ್ಥ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಸುಭಾಷ್ ಚಂದ್ರ ನಾಟೀಕರ್ ಇತರರು ಪಾಲ್ಗೊಳ್ಳಲಿದ್ದಾರೆ.
ಹಾಡಿಗಳ ಜೇನು ನುಡಿ ಪಠ್ಯವಾಗುತ್ತಿದೆ….
ಜೇನು ಕುರುಬ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹೊಸದೊಂದು ಹೆಜ್ಜೆ ಇಟ್ಟಿದೆ. ಜೇನುಕುರುಬ ಮಕ್ಕಳ ಪಾಲಿಗೆ ಶಿಕ್ಷಣ ಕಬ್ಬಿಣದ ಕಡಲೆ. ಹೀಗಾಗಿಯೇ ಸಾಕಷ್ಟು ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದನ್ನು ತಪ್ಪಿಸಲು ಅವರದೇ ಆದ ಜೇನು ಭಾಷೆಯಲ್ಲಿ ಪಠ್ಯ ರಚನೆಗೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಿದ್ಧತೆ ನಡೆಸುತ್ತಿದೆ.
ಈ ಮೂಲಕ ಬುಡಕಟ್ಟು ಸಮುದಾಯವೊಂದರ ಭಾಷೆಯನ್ನು ಸಂರಕ್ಷಿಸುವ ಜತೆಗೆ ಆ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನೂ ನೀಡಿ ಸಮಾಜದಲ್ಲಿ ಮುನ್ನಲೆಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಮಾಹಿತಿ ಹಂಚಿಕೊಂಡಿದ್ದಾರೆ.